More

    ಕರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರಿಗೆ ಇಲ್ಲ ಸೌಲಭ್ಯ

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ‘ಅಣ್ಣಾರ ಮಾಸ್ಕ್ ಹಾಕ್ಕೋರಿ. ಯಾವ ಕೆಲಸಕ್ಕೆ ಹೊರಗ ಬಂದ್ರಿ. ಸುಮ್ಮಸುಮ್ಮನ ಹೊರಗ್ ಬರಬ್ಯಾಡ್ರಿ. ಸರ್ಕಾರದ ನಿಯಮಾ ಪಾಲಿಸರಿ. ಅಣ್ಣಾರ ನೀವು ಮಾಸ್ಕ್ ಹಾಕಿಲ್ಲ ದಂಡ ಕಟ್ಟರಿ…’

    ಹೌದು. ಈ ಮಾತುಗಳು ಕೇಳಿ ಬಂದಿದ್ದು ಸಮೀಪದ ಜಕ್ಕಲಿ ಗ್ರಾಮದಲ್ಲಿ. ಕರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಆದರೆ, ರಸ್ತೆಯಲ್ಲಿ ತಿರುಗುತ್ತಿದ್ದ ಜನರಿಗೆ ಗ್ರಾಮದ ಆಶಾ ಕಾರ್ಯತರ್ಕೆಯರು ಕೈಯಲ್ಲಿ ಲಾಠಿ ಹಿಡಿದು ಶುಕ್ರವಾರ ತಿಳಿವಳಿಕೆ ನೀಡಿದ ಪರಿ ಇದು. ಕರೊನಾ ಲಾಕ್​ಡೌನ್​ನಿಂದಾಗಿ ಜನರು ಮನೆಯೊಳಗಿದ್ದಾರೆ. ಆದರೆ, ಆಶಾ ಕಾರ್ಯಕರ್ತೆಯರು ಕರೊನಾ ಸೇನಾನಿಗಳಾಗಿ ಜನರ ಜೀವ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ.

    ಬೇಕು ಸೌಲಭ್ಯ: ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಗ್ಲೌಸ್​ಗಳನ್ನು ಒದಗಿಸಿಲ್ಲ, ರಕ್ಷಣಾ ಕಿಟ್​ಗಳಿಲ್ಲ. ಅಗತ್ಯ ಮೂಲ ಸೌಕರ್ಯಗಳಿಲ್ಲ, ರೋಗಿಗಳಿರುವ ಜಾಗಗಳಲ್ಲಿ ಅವರು ಒಬ್ಬಂಟಿಯಾಗಿ ಸಂಚರಿಸಬೇಕು. ಅಷ್ಟಾದರೂ ಅವರು ಎದೆಗುಂದದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಅವರಿಗೆ ಸಕಾಲದಲ್ಲಿ ವೇತನ ಮತ್ತು ಭತ್ಯೆ ನೀಡಬೇಕು ಎಂಬುದು ಜನರ ಅಭಿಪ್ರಾಯ.

    ಕಾರ್ಯವ್ಯಾಪ್ತಿ: ತಮ್ಮ ವ್ಯಾಪ್ತಿಯ ಪ್ರತಿ ಮನೆಗೆ ತೆರಳಿ ಮನೆಯಲ್ಲಿ ಯಾರಿದ್ದಾರೆ? ಯಾರಿಗಾದರೂ ಜ್ವರ, ಕೆಮ್ಮು ಇದೆಯಾ? ಮನೆಗೆ ಬೇರೆ ಊರಿನಿಂದ ಯಾರಾದರೂ ಬಂದಿದ್ದಾರಾ ಎಂಬೆಲ್ಲ ಮಾಹಿತಿ ಸಂಗ್ರಹಿಸಿ ಆರೋಗ್ಯ ಇಲಾಖೆಗೆ ನೀಡುತ್ತಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಗರ್ಭಿಣಿಯರ ತಪಾಸಣೆ ಮತ್ತು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಕೂಡ ನಿರ್ವಹಿಸುತ್ತಾರೆ.

    ಮನೆಯವರಿಗೆ ಆತಂಕ: ಕರೊನಾ ಪಾಸಿಟಿವ್ ಬಂದವರ ಮನೆಗಳಿಗೆ ತೆರಳಿದ ವೇಳೆ ಆಶಾ ಕಾರ್ಯಕರ್ತೆಯರನ್ನು ಸಾಕಷ್ಟು ಬಾರಿ ಜನರು ನಿಂದಿಸಿದ ಘಟನೆಗಳು ನಡೆದಿವೆ. ಅಲ್ಲದೆ, ಕರೊನಾ ರೋಗಿಗಳ ಮನೆ ಬಳಿ ಹೋಗಿ ಬರುವುದರಿಂದ ಅವರ ಕುಟುಂಬ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ. ಆದರೆ, ಇದು ದೇಶ ಮತ್ತು ಜನಸೇವೆ ಎಂಬ ಕಾರಣಕ್ಕೆ ಬೀದಿಗಿಳಿದಿದ್ದೇವೆ ಎನ್ನುತ್ತಾರೆ ಆಶಾ ಕಾರ್ಯಕರ್ತೆಯರು. ಕರೊನಾ ಮಹಾಮಾರಿ ತೊಲಗಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ. ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಬಹುತೇಕ ಜನರು ಉತ್ತಮವಾಗಿ ಸ್ಪಂದಿಸಿದರೂ ಕೆಲವರು ತಂಟೆ ತಕರಾರು ತೆಗೆದು ಜಗಳಕ್ಕೆ ಬರುತ್ತಾರೆ. ಕೆಲಸದ ವೇಳೆ ಇದು ಸಾಮಾನ್ಯ. ಕರೊನಾ ನಿಯಂತ್ರಿಸುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಕೊಂಡಾಡಿದ್ದಾರೆ ಎನ್ನುತ್ತಾರೆ ಗ್ರಾಮದ ಆಶಾ ಕಾರ್ಯಕರ್ತೆಯರಾದ ಶೋಭಾ ಪಲ್ಲೇದ, ರತ್ನಾ ಶ್ಯಾಶೆಟ್ಟಿ, ನಿರ್ಮಲಾ ಕೊಪ್ಪದ, ಶ್ರೀದೇವಿ ಆದಿ, ರೇಣುಕಾ ತಿಲಗಾರ, ಮುತ್ತುಜಾ ಮುಲ್ಲಾ ಜಕ್ಕಲಿ.

    ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 12 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅವರ ಕಾರ್ಯ ಶ್ಲಾಘನೀಯ. ಸರ್ಕಾರದಿಂದ ಅವರಿಗೆ ಬರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

    | ಡಾ. ಎ.ಡಿ. ಸಾಮುದ್ರಿ, ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts