More

    ಗುಣಮಟ್ಟದ ಶಿಕ್ಷಣ ನೀಡುವಲ್ಲಿ ರಾಜಿ ಇಲ್ಲ

    ಕೆ.ಎಂ.ದೊಡ್ಡಿ : ಗುಣಮಟ್ಟದ ಶಿಕ್ಷಣ ನೀಡುವ ವಿಚಾರದಲ್ಲಿ ಭಾರತೀ ವಿದ್ಯಾಸಂಸ್ಥೆ ಯಾವುದೇ ರಾಜಿ ಆಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದರು.

    ಇಲ್ಲಿನ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಉಲ್ಲಾಸ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಶಿಕ್ಷಕರ ತಂಡ ಕಟ್ಟಿಕೊಂಡು ಭಾರತೀ ವಿದ್ಯಾಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಯಾವುದೇ ಪ್ರಭಾವಕ್ಕೆ ಒಳಗಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ. ಅರ್ಹತೆಗೆ ಅನುಗುಣವಾಗಿ ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
    ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಮಹತ್ವ ನೀಡಲು ಭಾರತೀ ವಿದ್ಯಾಸಂಸ್ಥೆ ಸಾಕಷ್ಟು ಶ್ರಮಿಸುತ್ತಿದ್ದು, ಸಂಸ್ಥೆಯು ಕಡಿಮೆ ಶುಲ್ಕ ಪಡೆಯುತ್ತಿರುವುದರಿಂದ ಬಡ, ಮಧ್ಯಮ ಮತ್ತು ಕೂಲಿಕಾರ್ಮಿಕ ಮಕ್ಕಳು ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
    ಮಕ್ಕಳನ್ನು ಶಿಕ್ಷಕರು ದಂಡಿಸದೆ, ಶಿಕ್ಷಿಸದೆ ಪಾಠ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವ ಮಕ್ಕಳು ದಂಡನೆಗೆ, ಶಿಕ್ಷೆಗೆ ಒಳಗಾಗುವುದಿಲ್ಲವೋ ಅಂತಹ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಇಂತಹ ಕ್ಲಿಷ್ಟಕರ ವಾತಾವರಣದಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುವುದು ಅನಿವಾರ್ಯವಾಗಿದೆ ಎಂದರು.

    ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ನನ್ನ ತಂದೆ ಜಿ.ಮಾದೇಗೌಡ ಅವರು ಸಂಸ್ಥೆ ತೆರೆದು ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಸಂಸ್ಥೆ ಕಟ್ಟಿದ್ದು, ಅದು ಅತ್ಯಂತ ಪ್ರಗತಿ ಸಾಧಿಸಿ ರಾಜ್ಯ ಮತ್ತು ದೇಶದಲ್ಲೆ ನಂಬರ್ ಒನ್ ವಿದ್ಯಾಸಂಸ್ಥೆಗಳ ಸಾಲಿಗೆ ಸೇರಿರುವುದು ಸಂಸ್ಥೆಯ ಶಿಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಸಾಕ್ಷಿಯಾಗಿದೆ ಎಂದರು.

    ನಿವೃತ್ತ ಪ್ರಾಂಶುಪಾಲ ನವಿಲೂರು ಪ್ರಕಾಶ್ ಮಾತನಾಡಿ, ಕೌಶಲಕ್ಕೆ ಹೆಚ್ಚು ಬೆಲೆ, ಮಾನ್ಯತೆಯಿದ್ದು, ವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ವೃದ್ಧಿಸಲು ಹೆಚ್ಚು ಒತ್ತು ನೀಡಬೇಕು ಎಂದರು.

    ಗ್ರಾಮೀಣ ಭಾಗದಲ್ಲಿ ದಿ.ಜಿ.ಮಾದೇಗೌಡ ಭಾರತೀ ವಿದ್ಯಾಸಂಸ್ಥೆ ತೆರೆದು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ್ದು ಗ್ರಾಮೀಣ ಪ್ರದೇಶದ ಹಲವಾರು ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಉದ್ಯೋಗಗಳನ್ನು ಅಲಂಕರಿಸಲು ಕಾರಣರಾಗಿದ್ದು, ಅವರ ಧರ್ಮಕಾರ್ಯಕ್ಕೆ ಶ್ಲಾಘನೀಯ ಎಂದರು.
    ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳ ನೃತ್ಯ ವೀಕ್ಷಿಸಿದ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಳೀರಯ್ಯ, ಬಿಇಟಿ ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿಗಳಾದ ಬಸವೇಗೌಡ, ಎಸ್.ಜಯರಾಮು, ಭಾರತೀ ಪಿಯು ಅಕಾಡೆಮಿ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ್, ಮುಖ್ಯಶಿಕ್ಷಕಿ ಪ್ರತಿಭಾ ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts