More

    ಅಭಿವೃದ್ಧಿಗೆ ವಲಯ ನಿಯಮಾವಳಿಯೇ ಅಡ್ಡಿ

    ಮನೋಹರ್ ಬಳಂಜ ಬೆಳ್ತಂಗಡಿ
    ಶಿಕ್ಷಣ, ವಾಣಿಜ್ಯ ವ್ಯವಹಾರಕ್ಕೆ ನಗರವನ್ನು ನಂಬಿ ಹಲವಾರು ವರ್ಷಗಳಿಂದ ಉದ್ಯೋಗಿಗಳಾಗಿ ದುಡಿದು ನಿವೃತ್ತರಾಗುವ ಹಂತಕ್ಕೆ ಬರುವವರಿಗೆ ಮನೆ ಕಟ್ಟಲು, ವಾಣಿಜ್ಯ ವ್ಯವಹಾರ ನಡೆಸಲು ಮುಂದಾದವರಿಗೆ ಕಟ್ಟಡ ನಿರ್ಮಿಸಲು ಪ್ರಸಕ್ತ ಪಟ್ಟಣ ಪಂಚಾಯಿತಿ ವಲಯ ನಿಯಮಾವಳಿ ಅಡ್ಡಿಯಾಗಿದೆ.

    ಮಹಾನಗರ ಪಾಲಿಕೆ ಮುಂತಾದ ಪ್ರದೇಶಗಳಲ್ಲಿ ಗೃಹ ನಿರ್ಮಾಣ, ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅನುಕೂಲವಾಗಲು ನಗರಾಭಿವೃದ್ಧಿ ಪ್ರಾಧಿಕಾರ ಅನುಷ್ಠಾನಕ್ಕೆ ಬಂದಿದೆ. ಅದೇ ರೀತಿ ಗ್ರಾಮೀಣ ಭಾಗಗಳಲ್ಲಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಧಿಕಾರ ಕಚೇರಿ ಇಲ್ಲದಿದ್ದರೂ ಇದಕ್ಕಾಗಿ ಅಧಿಕಾರಿಗಳಿದ್ದಾರೆ. ಅವರು ವಲಯ ನಿಯಮಾವಳಿಗಳನ್ನು ಜಾರಿಗೊಳಿಸುತ್ತಾರೆ.

    ರಸ್ತೆ ಅವ್ಯವಸ್ಥೆ ಸರಿಪಡಿಸಲು, ತುರ್ತು ವಾಹನ, ಅಗ್ನಿಶಾಮಕ, ಆಂಬುಲೆನ್ಸ್ ಇನ್ನಿತರ ವಾಹನ ಪ್ರಯಾಣಕ್ಕೆ ಅನುಕೂಲವಾಗಲು ಅದರಲ್ಲೂ ಜನನಿಬಿಡ ಪ್ರದೇಶಗಳಲ್ಲಿ ಈ ವಲಯ ನಿಯಮಾವಳಿ ಅನುಕೂಲ. ಆದರೆ ಈ ಕಾನೂನಿಂದ ಬೆಳ್ತಂಗಡಿ ನಗರದಲ್ಲಿ ಯಾವುದೇ ನಿವೇಶನಗಳ ಭೂಪರಿವರ್ತನೆಯಾಗುತ್ತಿಲ್ಲ. ನಪಂ, ತಾಲೂಕು ಕಚೇರಿ ಇನ್ನಿತರ ಪ್ರದೇಶಗಳಿಗೆ ಅಲೆದಾಡುವ ಸ್ಥಿತಿ ಬಂದಿದೆ.

    ಭೂ ಪರಿವರ್ತನೆ ರದ್ದು: ಮನೆ ಕಟ್ಟಲು, ವಾಣಿಜ್ಯ ಕಟ್ಟಡ ನಿರ್ಮಿಸಲು, ಬ್ಯಾಂಕ್ ಸಾಲ ಪಡೆಯಲು ಸರ್ಕಾರಕ್ಕೆ ತೆರಿಗೆ ಪಾವತಿಯಂತಹ ಪಾರದರ್ಶಕ ವ್ಯವಹಾರಕ್ಕೆ ಭೂ ಪರಿವರ್ತನೆ ಅಗತ್ಯವಿದ್ದು, ಈಗ ಭೂಪರಿವರ್ತನೆಗೆ ಅವಕಾಶ ಇಲ್ಲವಾಗಿದೆ. ಇದರಿಂದ ನಗರ ಪ್ರದೇಶದ ಹಲವಾರು ಕುಟುಂಬಗಳು ಮನೆ ಕಟ್ಟಲು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸುವಂತಾಗಿದೆ. ಅಲ್ಲದೆ ಯಾವುದೇ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಲೂ ಉದ್ಯಮಿಗಳು ಹಿಂಜರಿಯುತ್ತಿದ್ದಾರೆ.

    ಮಾಹಿತಿ ಕೊರತೆ: ಹಲವಾರು ವರ್ಷಗಳ ಹಿಂದೆ ಸರ್ಕಾರದ ನಿವೇಶನ ಮಂಜೂರಾದ ಕುಟುಂಬಗಳು ಮನೆ ಅಭಿವೃದ್ಧಿಗೆ ಮುಂದಾದರೆ, ಅದಕ್ಕೆ ಅನುಮತಿ ಸಿಗುತ್ತಿಲ್ಲ. ಈ ಬಗ್ಗೆ ನಪಂಗೆ ಅರ್ಜಿ ಸಲ್ಲಿಸಿದರೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ವಲಯ ಪರವಾನಗಿ ತೆಗೆದುಕೊಳ್ಳಲು ಸೂಚಿಸುತ್ತಾರೆ. ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತಿಂಗಳುಗಟ್ಟಲೆ ನೊಂದ ಕುಟುಂಬಗಳು ಅಲೆದಾಡುವಂತಾಗಿದೆ.

    ಸರ್ಕಾರವೇ ಮುಂದಾಗಬೇಕಿದೆ: ಬೆಳ್ತಂಗಡಿ ನಗರ ವ್ಯಾಪ್ತಿಯಿಂದ ವಲಯ ನಿಯಮಾವಳಿ ರದ್ದುಪಡಿಸಲು ಸರ್ಕಾರ ಮಟ್ಟದಿಂದ ಅಗತ್ಯ ನಿರ್ಣಯ ಕೈಗೊಳ್ಳುವ ಅಗತ್ಯವಿದ್ದು, ಈಗಾಗಲೇ ಶಾಸಕ ಹರೀಶ್ ಪೂಂಜ ಸಚಿವರ ಗಮನಕ್ಕೆ ತಂದಿದ್ದು, ಈ ಬಗ್ಗೆ ಮತ್ತೊಮ್ಮೆ ನಗರ ವ್ಯಾಪ್ತಿಯ ನೊಂದ ಕುಟುಂಬಗಳು ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕಿದೆ.

    ಖಾಸಗಿ ಕಂಪನಿಗೆ ಗುತ್ತಿಗೆ: ನಿಯಮಾವಳಿಯಡಿ ನಿವೇಶನ ಗುರುತಿಸಲು ಖಾಸಗಿ ಕಂಪನಿಗೆ ಗುತ್ತಿಗೆ ವಹಿಸಿದ್ದು, ಇದು ಸಮರ್ಪಕವಾಗಿ ಕಾರ್ಯನಿರ್ವಹಿಸಲು ತಾಂತ್ರಿಕ ಕಾರಣ ಅಡ್ಡಿಯಾಗಿದೆ.

    ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಮುಂತಾದ ಪ್ರದೇಶಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ಜಾರಿಯಾಗಿದ್ದು, ಎಲ್ಲ ವ್ಯಾಪ್ತಿಯ ನಿವೇಶನಕ್ಕೆ ಸಂಬಂಧಿಸಿದ ಕಾರ್ಯ ಮಾಡಬೇಕು. ಬೆಳ್ತಂಗಡಿ ನಗರಕ್ಕೆ ವಾರಕ್ಕೆ ಒಂದು ದಿನ ಮೀಸಲಿಟ್ಟಿದ್ದು, ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಿ ತಾಂತ್ರಿಕ ವರದಿ ನೀಡಲಾಗುತ್ತಿದೆ.
    ಮೋಕ್ಷಾ ಎ., ಅಧಿಕಾರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ

    ಪಟ್ಟಣ ಪಂಚಾಯಿತಿ ವಲಯ ನಿಯಮಾವಳಿಯಿಂದ ನಗರದ ಅಭಿವೃದ್ಧಿ ಕುಂಠಿತವಾಗಿದ್ದು, ಪ.ಪಂನ ಆದಾಯಕ್ಕೂ ಹೊಡೆತ ಬಿದ್ದಿದೆ. ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯನ್ನು ಕಾನೂನಿನಿಂದ ಮುಕ್ತಗೊಳಿಸಬೇಕು. ಪಂಚಾಯಿತಿ ಆದಾಯಕ್ಕೂ ಇದು ಪೂರಕ.
    ಜಗದೀಶ್ ಡಿ., ನಪಂ ಸದಸ್ಯರು

    ಪಟ್ಟಣ ಪಂಚಾಯಿತಿ ವಲಯ ನಿಯಮಾವಳಿಯಿಂದ ನಗರದಲ್ಲಿ ಹಲವಾರು ಕುಟುಂಬಗಳು ನೊಂದಿದ್ದು, ಭೂಪರಿವರ್ತನೆ ಸ್ಥಗಿತಗೊಂಡಿದೆ. ಈ ಬಗ್ಗೆ ನಪಂ ಸಾಮಾನ್ಯ ಸಭೆಯಲ್ಲಿ ಪೌರಾಡಳಿತ ಸಚಿವರಿಗೆ ಪತ್ರ ಬರೆಯಲು ನಿರ್ಣಯಿಸಲಾಗಿದೆ. ಶಾಸಕ ಹರೀಶ್ ಪೂಂಜ ಅವರು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮೂರು ತಿಂಗಳೊಳಗೆ ಸರಿಯಾಗುವ ಭರವಸೆ ಇದೆ.
    ಜಯಾನಂದ ಗೌಡ, ಬೆಳ್ತಂಗಡಿ ಪಪಂ ಉಪಾಧ್ಯಕ್ಷ

    ಪಟ್ಟಣ ಪಂಚಾಯಿತಿ ವಲಯ ನಿಯಮಾವಳಿಯಿಂದ ಯಾವುದೇ ನಿವೇಶನಗಳ ಭೂಪರಿವರ್ತನೆಯಾಗುತ್ತಿಲ್ಲ. ನಪಂ, ತಾಲೂಕು ಕಚೇರಿ ಇನ್ನಿತರ ಪ್ರದೇಶಗಳಿಗೆ ಅಲೆದಾಡುವ ಸ್ಥಿತಿ ಬಂದಿದೆ. ಅನುಭವವಿಲ್ಲದ ಕುಟುಂಬಗಳು ನಮ್ಮಲ್ಲಿ ನ್ಯಾಯ ಯಾಚಿಸಿ ಬಂದರೆ ಕಾನೂನು ಅಡ್ಡಿಯಾಗಿದೆ. ಬೆಳ್ತಂಗಡಿ ನಗರಕ್ಕೆ ಶೀಘ್ರವೇ ಮುಡಾ ಕಾಯ್ದೆಯಿಂದ ವಿನಾಯಿತಿ ಕೊಡಬೇಕು.
    ಫ್ರಾನ್ಸಿಸ್ ಕೆ.ವಿ ವಕೀಲರು, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts