More

    ಮಾಲೀಕರ ಮನೆ ದೋಚಿ ಸುಳ್ಳು ಕತೆ ಹೇಳಿದ್ದ ಕೆಲಸದಾಕೆ ಜೈಲಿಗೆ

    ಬೆಂಗಳೂರು: ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕದ್ದು ರಾಬರಿ ಸುಳ್ಳು ಕತೆ ಕಟ್ಟಿದ್ದ ಮನೆ ಕೆಲಸದಾಕೆಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
    ಬಳ್ಳಾರಿ ಮೂಲದ ಶಾಂತಾ (34) ಬಂಧಿತೆ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

    ಆರ್‌ಎಂವಿ ಬಡಾವಣೆಯಲ್ಲಿ ಮಾರುತಿ ಪ್ರಸನ್ನ ದಂಪತಿ, ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಾರೆ. ಇವರ ಮನೆಯಲ್ಲಿ 3 ವರ್ಷದಿಂದ ಮನೆ ಕೆಲಸ ಮಾಡಿಕೊಂಡು ಶಾಂತ ಮತ್ತು ಆಕೆಯ ಇಬ್ಬರು ಮಕ್ಕಳು ನೆಲೆಸಿದ್ದರು. ಜ.17ರಂದು ಮಾರುತಿ ಪ್ರಸನ್ನ ದಂಪತಿ ಥೈಲ್ಯಾಂಡ್‌ಗೆ ಪ್ರವಾಸಕ್ಕೆ ಹೋಗಿದ್ದರು. ಮನೆಯಲ್ಲಿ ಅವರ ಇಬ್ಬರು ಮಕ್ಕಳು ಮತ್ತು ಮನೆ ಕೆಲಸದಾಕೆ, ಆಕೆಯ ಇಬ್ಬರು ಮಕ್ಕಳು ಇದ್ದರು. ಜ.26ರ ಸಂಜೆ ಮನೆ ಮಾಲೀಕರ ಮಕ್ಕಳಾದ ಕೀರ್ತಿವರ್ಧನ್ ಮತ್ತು ಯಜ್ಞೇಶ್, ನ್ಯೂ ಬಿಇಎಲ್ ರಸ್ತೆಯಲ್ಲಿ ಇರುವ ಸ್ನೇಹಿತನ ಮನೆಗೆ ಹೋಗಿ ವಾಪಸ್ ರಾತ್ರಿ 8.45ಕ್ಕೆ ಮನೆಗೆ ಬಂದು ಮಲಗಿದ್ದರು.

    ಬೆಳಗಿನ ಜಾವ 3.40ರಲ್ಲಿ ಕೆಲಸದಾಕೆ ಶಾಂತ, ಬಂದು ಕೀರ್ತಿವರ್ಧನ್‌ನನ್ನು ಎಬ್ಬಿಸಿ ಮನೆಗೆ ಅಪರಿಚಿತ ವ್ಯಕ್ತಿ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಹಿಡಿಯಲು ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿ ಓಡಿ ಹೋದ ಎಂದು ಹೇಳಿದ್ದಳು. ಈ ಬಗ್ಗೆ ಮನೆ ಮಾಲೀಕರು ಕೊಟ್ಟ ದೂರಿನ ಮೇರೆಗೆ ಸದಾಶಿವನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.

    ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದಾಗ ಹೊರಗಿಂದ ಆರೋಪಿಗಳು ಬಂದು ಕೃತ್ಯ ಎಸಗಿರುವ ಯಾವುದೇ ಕುರುಹು ಇರಲಿಲ್ಲ. ಕೊನೆಗೆ ಮನೆ ಕೆಲಸದಾಕೆ ಶಾಂತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿದೆ. ಮಾಲೀಕರ ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಶಾಂತ, ಕಳ್ಳತನಕ್ಕೆ ಸಂಚುರೂಪಿಸಿದ್ದಳು. ಅದೇ ವೇಳೆಗೆ ಮಾಲೀಕರು ವಿದೇಶ ಪ್ರವಾಸಕ್ಕೆ ಹೋಗುವ ಮಾಹಿತಿ ಅರಿತು ಕೃತ್ಯಕ್ಕೆ ಬೇಕಾದ ಎಲ್ಲ ತಯಾರಿ ನಡೆಸಿದ್ದಳು. ಮಾಲೀಕರು ವಿದೇಶಕ್ಕೆ ಹೋಗುತ್ತಿದಂತೆ ಸಿಸಿ ಕ್ಯಾಮರಾ ವೈರ್ ಕಟ್ ಮಾಡಿ ಗ್ಯಾಸ್‌ಲೈಟ್ ಮತ್ತು ಸುತ್ತಿಗೆ ಬಳಸಿಕೊಂಡು ಕಬೋರ್ಡ್ ಬೀಗವನ್ನು ಜಖಂಗೊಳಿಸಿ ಚಿನ್ನಾಭರಣ ದೋಚಿದ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ. ಕಳವು ಮಾಡಿದ್ದ 30 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts