More

    ಹುಲ್ಲುಗಾವಲಿನಲ್ಲಿ ಕ್ವಾರಿಗೆ ಗ್ರಾಮಸ್ಥರ ವಿರೋಧ

    ರಾಣೆಬೆನ್ನೂರ: ತಾಲೂಕಿನ ಕಜ್ಜರಿ ಗ್ರಾಪಂ ವ್ಯಾಪ್ತಿಯ ಹುಲ್ಲುಗಾವಲು ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಬಂದ್ ಆಗಿದ್ದ ಕಲ್ಲು ಗಣಿಗಾರಿಕೆ ಮತ್ತೇ ಶುರುವಾಗಿದೆ.

    ಹುಲ್ಲುಗಾವಲು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 15 ಜನ ಗುತ್ತಿಗೆದಾರರಿಗೆ ಪರವಾನಗಿ ನೀಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಕಳೆದ ಅಕ್ಟೋಬರ್​ನಲ್ಲಿ ಹುಲ್ಲುಗಾವಲು ಪ್ರದೇಶದ ರಸ್ತೆಗಳಲ್ಲಿ ಗುಂಡಿ ತೋಡಿ ವಾಹನ ಸಂಚಾರ ಸ್ಥಗಿತಗೊಳಿಸುವ ಮೂಲಕ ಗಣಿಗಾರಿಕೆ ತಡೆದಿದ್ದರು. ಹೀಗಾಗಿ ಒಂದು ತಿಂಗಳಿಂದ ಕಲ್ಲು ಗಣಿಗಾರಿಕೆ ಬಂದ್ ಆಗಿತ್ತು. ಆದರೆ, ಇದೀಗ ಗುತ್ತಿಗೆದಾರರು ಗುಂಡಿಗಳನ್ನು ಮುಚ್ಚಿ ಕಲ್ಲು ಗಣಿಗಾರಿಕೆ ಆರಂಭಿಸಿದ್ದಾರೆ. ಇದರಿಂದ ರೋಸಿಹೋದ ಗ್ರಾಮದ ರೈತರು ಶುಕ್ರವಾರ ಸ್ಥಳಕ್ಕೆ ಆಗಮಿಸಿ ಗಣಿಗಾರಿಕೆ ಬಂದ್ ಮಾಡಿಸಿದರು.

    ‘ಕಜ್ಜರಿ ಸುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಹುಲ್ಲುಗಾವಲು ಪ್ರದೇಶ ಬಹಳ ಅವಶ್ಯವಿದೆ. ಕಳೆದ ತಿಂಗಳು ಗುಂಡಿ ತೋಡಿದ್ದರಿಂದ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಆದರೆ, ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಮತ್ತೆ ಶುರು ಮಾಡಿದ್ದಾರೆ. ಗ್ರಾಮಸ್ಥರು ಇಷ್ಟೊಂದು ಹೋರಾಟ ಮಾಡಿದರೂ ಕ್ಷೇತ್ರದ ಶಾಸಕರಾಗಲಿ, ಜಿಪಂ ಅಧ್ಯಕ್ಷರಾಗಲಿ, ಅಧಿಕಾರಿಗಳಾಗಲಿ ಈವರೆಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ರೈತರ ಅಳಲು ಕೇಳಿಲ್ಲ. ಗ್ರಾಮಸ್ಥರು ಬಂದಾಗ ಗಣಿ ಗುತ್ತಿಗೆದಾರರು ಕಲ್ಲು ತೆಗೆಯುವುದನ್ನು ಬಂದ್ ಮಾಡುತ್ತಾರೆ. ನಾವು ಹೋದ ನಂತರ ಮತ್ತೆ ಆರಂಭಿಸುತ್ತಾರೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನದಲ್ಲಿ ಇದೇ ರೀತಿ ಗಣಿಗಾರಿಕೆ ಮುಂದುವರಿಸಿದರೆ, ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಗ್ರಾಮಸ್ಥ ಸಂಜೀವ ಮೋಟೆಬೆನ್ನೂರ ಸೇರಿ ಇತರರು ಎಚ್ಚರಿಸಿದರು.

    ಕಜ್ಜರಿ ಗ್ರಾಮ ವ್ಯಾಪ್ತಿಯ ಹುಲ್ಲುಗಾವಲು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಕಂದಾಯ ಇಲಾಖೆಯಿಂದ ಯಾವುದೇ ರೀತಿಯ ಎನ್​ಒಸಿ ನೀಡಿಲ್ಲ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದರೂ ಗಣಿಗಾರಿಕೆ ನಿಲ್ಲಿಸಿಲ್ಲವಾದರೆ, ಗಣಿ ಇಲಾಖೆಯರಿಗೆ ಸೂಚಿಸಿ ಕೂಡಲೆ ಅದನ್ನು ಬಂದ್ ಮಾಡಿಸಲು ತಿಳಿಸಲಾಗುವುದು.
    | ಬಸನಗೌಡ ಕೋಟೂರ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts