More

    ಮಹಾನಗರದಲ್ಲಿ ಮೇಳೈಸಿದೆ ಹಳ್ಳಿ ಸೊಗಡು

    ಬಸವರಾಜ ಇದ್ಲಿ ಹುಬ್ಬಳ್ಳಿ
    ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ರಚನೆಯಾಗುವಾಗ ಅವಳಿ ನಗರ ವ್ಯಾಪ್ತಿಯ ಹಲವು ಗ್ರಾಮಗಳನ್ನು ಸೇರಿಸಿಕೊಳ್ಳಲಾಯಿತು. ಅಂತಹ ಕೆಲವು ಹಳ್ಳಿಗಳನ್ನು ಒಳಗೊಂಡಿರುವ 38ರಿಂದ 44ನೇ ವಾರ್ಡ್​ಗಳಲ್ಲಿ ಹಲವು ವಿಶೇಷತೆಗಳು ಅಡಗಿವೆ. ಗ್ರಾಮೀಣ ಸೊಗಡನ್ನು ಇನ್ನೂ ಉಳಿಸಿಕೊಂಡು ಬಂದಿರುವ ಗೋಪನಕೊಪ್ಪ, ಬೆಂಗೇರಿ, ನಾಗಶೆಟ್ಟಿಕೊಪ್ಪ, ಉಣಕಲ್ಲನ ಕೆಲ ಭಾಗಗಳು ಈ ವಾರ್ಡ್​ಗಳಲ್ಲಿವೆ. ಹಾಗಾಗಿ, ಇದೀಗ ರಚನೆಯಾಗಿರುವ ಹೊಸ ವಾರ್ಡ್​ಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಮ್ಮಿಲನ ಎಂದು ಹೇಳಬಹುದಾಗಿದೆ.
    ಈ ಎಲ್ಲ ವಾರ್ಡ್​ಗಳಲ್ಲಿ ಅಭಿವೃದ್ಧಿ ಶಕೆ ಏನೋ ಆರಂಭವಾಗಿದೆ. ಆದರೆ, ವೇಗ ತೀರಾ ಕಡಿಮೆ ಎನ್ನುವುದು ಇಲ್ಲಿ ಸಂಚರಿಸಿದಾಗ ತಿಳಿಯುತ್ತದೆ. ಇಲ್ಲಿನ ಜನರು ಕೂಡ ಅಭಿವೃದ್ಧಿ ವಿಷಯ ಬಂದಾಗ ಇನ್ನಷ್ಟು ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಮೊದಲಿನ ಪಾಲಿಕೆ ಸದಸ್ಯರ ವಾರ್ಡ್​ಗಳು ಬದಲಿ ಯಾಗಿರುವುದರಿಂದ ಹಳಬರು ಟಿಕೆಟ್​ಗಾಗಿ ಅಷ್ಟೇ ಅಲ್ಲ ಟಿಕೆಟ್ ಸಿಕ್ಕ ನಂತರ ಗೆಲುವು ಸಾಧಿಸಲು ಒಂದಿಷ್ಟು ಹೆಚ್ಚು ಶಕ್ತಿ ಹಾಕಬೇಕಾಗಿದೆ.
    ಇನ್ನು ಕೆಲವೆಡೆ ಹೊಸ ಮುಖಗಳು ಅವಕಾಶಕ್ಕಾಗಿ ಕಾಯುತ್ತಿವೆ. ಹೀಗೆ ಹೊಸ ಪ್ರದೇಶಗಳನ್ನು ಒಳಗೊಂಡ ವಾರ್ಡ್​ಗಳಲ್ಲಿ ರಾಜಕೀಯ ಚಟುವಟಿಕೆ ಈಗಷ್ಟೇ ಚುರುಕು ಪಡೆಯಬೇಕಿದೆ. ಹಳಬರು ಮಾತ್ರ ತಮ್ಮದೇ ಆದ ಶೈಲಿಯಲ್ಲಿ ಜನರೊಂದಿಗೆ ಬೆರೆತು ಪರೋಕ್ಷ ಪ್ರಚಾರದಲ್ಲಿ ತೊಡಗಿದ್ದಾರೆ. ಟಿಕೆಟ್ ಖಚಿತವಾದ ನಂತರ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಾರೆ. ಆದರೆ, ಸಾಮಾನ್ಯ ಜನರು ಮಾತ್ರ ಚುನಾವಣೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಯಾಗುವವರ ಮಧ್ಯೆ ನೇರ ಪೈಪೋಟಿ ಇರುವುದು ಕಂಡು ಬರುತ್ತದೆ.
    ಆಮ್ ಆದ್ಮಿ ಪಕ್ಷದವರು 20 ವಾರ್ಡಿನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವುದು ಬಿಟ್ಟರೆ ಬುಧವಾರ ಸಂಜೆಯವರೆಗೂ ಉಳಿದ ಯಾವ ಪಕ್ಷದವರೂ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಲು ವಾರ್ಡ್ ಒಂದಕ್ಕೆ ಸರಾಸರಿ 5 ಜನರು ಟಿಕೆಟ್ ಕೇಳಿ ಅರ್ಜಿ ನಮೂನೆ ಸಲ್ಲಿಸಿದ್ದಾರೆ. ಹಾಗಾಗಿ, ಪಟ್ಟಿ ಅಂತಿಮಗೊಳಿಸುವುದು ಆಯಾ ಪಕ್ಷಗಳ ನಾಯಕರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಇದರ ಮಧ್ಯೆ ತಮ್ಮದೇ ಆದ ಜನಸಂಪರ್ಕ ಹಾಗೂ ಶಕ್ತಿಯೊಂದಿಗೆ ಕೆಲವರು ಪಕ್ಷೇತರರಾಗಿ ನಿಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
    ವಾರ್ಡ್ ನಂಬರ್ 38ರಲ್ಲಿ ಬಿಜೆಪಿಯಿಂದ ಮಾಜಿ ಸದಸ್ಯ ತಿಪ್ಪಣ್ಣ ಮಜ್ಜಗಿ ಪ್ರಬಲ ಆಕಾಂಕ್ಷಿ. ಆಮ್ ಆದ್ಮಿ ಪಕ್ಷವು ಮಲ್ಲಪ್ಪ ತಡಸದ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ವಾರ್ಡ್ ನಂ. 39, 40, 41, 42, 43 ಹಾಗೂ 44ರಲ್ಲಿ ಈ ಹಿಂದಿನ ಸದಸ್ಯರಿಗೆ ಆಯಾ ಪಕ್ಷಗಳು ಟಿಕೆಟ್ ನೀಡುವುದು ಬಹುತೇಕ ಖಚಿತವಾದರೂ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಹಾಗೂ ಮೊದಲಿನ ವಾರ್ಡ್​ಗಳು ಒಡೆದು ಹೋಗಿರುವುದರಿಂದ ಅವರು ಕೂಡ ಇನ್ನೆರಡು ದಿನ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಪಕ್ಷದ ನಾಯಕರು ಅಳೆದು ತೂಗಿ, ಆಕಾಂಕ್ಷಿಗಳ ಗೆಲ್ಲುವ ಶಕ್ತಿ ನೋಡಿಕೊಂಡು ಟಿಕೆಟ್ ಅಂತಿಮಗೊಳಿಸುವ ಚಿಂತನೆಯಲ್ಲಿದ್ದಾರೆ. ಉಣಕಲ್ಲ ಸಾಯಿನಗರ, ಟಿಂಬರ್ ಯಾರ್ಡ್, ಉಣಕಲ್ಲ- ಗೋಪನಕೊಪ್ಪ ರಸ್ತೆ, ಗೋಪನಕೊಪ್ಪ, ಬೆಂಗೇರಿ, ಸಂತೋಷ ನಗರ, ದೇವಾಂಗಪೇಟ, ನಾಗಶೆಟ್ಟಿಕೊಪ್ಪ, ಬದಾಮಿನಗರ, ಕುಸುಗಲ್ಲ ರಸ್ತೆ ಮುಂತಾದ ಪ್ರಮುಖ ಸ್ಥಳಗಳನ್ನು ಈ ವಾರ್ಡ್​ಗಳು ಒಳಗೊಂಡಿವೆ.


    ಅರ್ಧಂಬರ್ಧ ಕಾಮಗಾರಿ: ದಶಕಗಳಿಂದ ಜನಸೇವೆಯಲ್ಲಿರುವ ನಾಯಕರು ಇರುವ ಪ್ರದೇಶಗಳಲ್ಲಿಯೂ ಮೂಲ ಸೌಕರ್ಯಗಳು ಪರಿಪೂರ್ಣವಾಗದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೆಲವೆಡೆ ಸಿಸಿ ರಸ್ತೆಗಳು ಆಗಿವೆ. ಇನ್ನು ಕೆಲವೆಡೆ ಕೆಲಸಗಳೇ ಅರ್ಧಂಬರ್ಧ ಆಗಿವೆ. ಮಳೆ ಬಂದರೆ ನೀರು ಸರಾಗ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಕಸ ವಿಲೇವಾರಿಯು ಬಹುತೇಕ ವಾರ್ಡ್​ಗಳ ದೊಡ್ಡ ಸಮಸ್ಯೆ ಎನ್ನಬಹುದು. ಇಲ್ಲಿಯೂ ಸಿಆರ್​ಎಫ್, ಸ್ಮಾರ್ಟ್ ಸಿಟಿ ಸೇರಿ ಹಲವು ಯೋಜನೆಗಳ ಅಡಿ ಕಾಮಗಾರಿಗಳು ನಡೆದಿವೆ. ಅವುಗಳೆಲ್ಲ ಅಪೂರ್ಣಗೊಂಡಿದ್ದು, ಕಾಲ್ನಡಿಗೆಯೂ ಕೆಲ ರಸ್ತೆಗಳಲ್ಲಿ ದುಸ್ತರ ಎನ್ನುವಂತಿದೆ. ಮಹಾನಗರ ಪಾಲಿಕೆಯಲ್ಲಿ ಸುಮಾರು ಎರಡು ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತ ಇಲ್ಲದ ಸಂದರ್ಭದಲ್ಲಿ ಅಧಿಕಾರಿಗಳನ್ನು ಕೈ ಹಿಡಿದು ಕೆಲಸ ಮಾಡಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಯಾರೂ ಕೇಳುವವರಿಲ್ಲದ ಕಾರಣಕ್ಕೆ ಹಲವೆಡೆ ಮೂಲ ಸೌಕರ್ಯಗಳಾದ ರಸ್ತೆ, ಗಟಾರು, ಒಳಚರಂಡಿ ಮುಂತಾದ ಸಮಸ್ಯೆಗಳು ಎದ್ದು ಕಾಣುತ್ತಿವೆ. ಅಲ್ಲಲ್ಲಿ ರಸ್ತೆ ಬದಿ ಕಸದ ರಾಶಿಗಳು ಕಂಡು ಬರುತ್ತವೆ.
    ವಾರ್ಡ್ ವೈಶಿಷ್ಟ್ಯಗಳು: ಗಂಗೂಬಾಯಿ ಹಾನಗಲ್ ಸಂಗೀತ ಶಾಲೆ, ನೃಪತುಂಗ ಬೆಟ್ಟದ ಅಕ್ಕಪಕ್ಕ ಹೀಗೆ ಹಲವು ಹೆಸರಿಸಬಹುದಾದ ಸ್ಥಳಗಳು ಇಲ್ಲಿವೆ. ಈಚೆಗೆ ಅಭಿವೃದ್ಧಿಯಾದ ಹಲವು ನಗರಗಳೂ ಇಲ್ಲಿವೆ. ಜತೆಗೆ ಕೆಲವೆಡೆ ಸ್ಲಂಗಳು ಸಹ ಇವೆ. ಒಟ್ಟಾರೆ ಗ್ರಾಮೀಣ ಸೊಗಡು, ಸ್ಲಂಗಳು, ನಗರ ಪ್ರದೇಶದ ತಳಕು-ಬಳಕು ಎಲ್ಲವೂ ಇಲ್ಲಿ ಮೇಳೈಸಿವೆ. ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್ ಅವರ ಮನೆಗಳು ಈ ವಾರ್ಡ್​ಗಳ ವ್ಯಾಪ್ತಿಯಲ್ಲಿ ಬರುತ್ತವೆ. ದೇಶದ ಗಮನ ಸೆಳೆದಿರುವ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರವೂ ಇಲ್ಲಿದೆ.


    ಉಣಕಲ್ಲನ ಕೊಪ್ಪಳ ಲೇಔಟ್​ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಈ ಹಿಂದಿನ ಪಾಲಿಕೆ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ಇದೇ ರೀತಿಯ ಅಭಿವೃದ್ಧಿ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಆಶಯ.
    | ವಿರೂಪಾಕ್ಷಪ್ಪ ಮುದಿಗೌಡ್ರ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts