More

    ರಾಣೆಬೆನ್ನೂರಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತ

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ಪರಿಸರ ರಕ್ಷಣೆ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ, ಇದು ಹೇಳಿಕೆಗೆ ಮಾತ್ರ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬರುತ್ತಿಲ್ಲ.

    ನಗರದ ವಿವಿಧ ಮಾರುಕಟ್ಟೆ ಸೇರಿ ತಾಲೂಕಿನಾದ್ಯಂತ ಅವ್ಯಾಹತವಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಫ್ಲೆಕ್ಸ್, ಬ್ಯಾನರ್​ಗಳ ಹಾವಳಿಯೂ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕಳೆದ ಎರಡು ವರ್ಷದ ಹಿಂದೆ ಸರ್ಕಾರ ಹೊರಡಿಸಿದ ಸುತ್ತೋಲೆ ಪ್ರಕಾರ, ಪ್ಲಾಸ್ಟಿಕ್ ನಿಷೇಧಿಸಿ ನಗರಸಭೆಯೂ ಪ್ರಕಟಣೆ ನೀಡಿದೆ. ನಗರಸಭೆ ಸಿಬ್ಬಂದಿಯಿಂದ ಜಾಗೃತಿ ಮೂಡಿಸಲಾಗಿದೆ. ಧ್ವನಿವರ್ಧಕಗಳ ಮೂಲಕ ಪ್ರಚಾರ ನಡೆಸಲಾಗಿದೆ. ಜತೆಗೆ ನೆಪಮಾತ್ರಕ್ಕೆ ಕೆಲ ಪ್ಲಾಸ್ಟಿಕ್ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ನಗರದ ವಿವಿಧ ಮಾರುಕಟ್ಟೆ, ವೃತ್ತ ಸೇರಿ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಬ್ಯಾನರ್, ಫ್ಲೆಕ್ಸ್ ರಾರಾಜಿಸುತ್ತಿವೆ. ಕಿರಾಣಿ ಅಂಗಡಿ, ಹೋಟೆಲ್ ಸೇರಿ ನಾನಾ ಕಡೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಸರ್ಕಾರದ ಸುತ್ತೋಲೆ ಬಂದಾಗ ದಾಳಿ ನಡೆಸಿ ಕೈತೊಳೆದುಕೊಂಡಿರುವ ಅಧಿಕಾರಿಗಳು ಬಳಿಕ ಅದರತ್ತ ಗಮನ ಹರಿಸುತ್ತಿಲ್ಲ ಎಂಬುದು ಪರಿಸರ ಪ್ರೇಮಿಗಳ ಆರೋಪವಾಗಿದೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದರಿಂದ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ. ಚರಂಡಿ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಸೇರುತ್ತಿದ್ದು, ನೀರು ಹರಿಯಲು ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ.

    ಗ್ರಾಪಂ ವ್ಯಾಪ್ತಿಗೂ ವಿಸ್ತರಿಸಬೇಕು: ಗ್ರಾಮೀಣ ಭಾಗದಲ್ಲೂ ಪ್ಲಾಸ್ಟಿಕ್ ಹಾವಳಿ ತಡೆಯುವಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ಕಳೆದ ಎರಡ್ಮೂರು ತಿಂಗಳ ಹಿಂದೆಯೇ ಎಲ್ಲ ಗ್ರಾಪಂಗೆ ಸೂಚನೆ ನೀಡಿ, ಆದೇಶಿಸಿದೆ. ಆದರೆ, ಈವರೆಗೂ ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿಲ್ಲ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಜಾಗೃತಿದಾರರ ಒತ್ತಾಯವಾಗಿದೆ.

    ಹಣ್ಣು, ಹೂವು, ತರಕಾರಿ ವ್ಯಾಪಾರಸ್ಥರಿಂದ ಹಿಡಿದು ಕಿರಾಣಿ, ಹೋಟೆಲ್​ಗಳಲ್ಲೂ ಪ್ಲಾಸ್ಟಿಕ್ ಚೀಲ ಬಳಕೆಯಾಗುತ್ತಿದೆ. ಪರಿಸರ ರಕ್ಷಣೆಗೆ ಮೊದಲು ಪ್ಲಾಸ್ಟಿಕ್ ನಿಷೇಧ ಅಗತ್ಯವಿದೆ. ನಗರಸಭೆ ಸಂಗ್ರಹಿಸುವ ಘನತ್ಯಾಜ್ಯ ಘಟಕದಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿದೆ. ನಗರಸಭೆ ಇದಕ್ಕೆ ಕಡಿವಾಣ ಹಾಕಬೇಕು.

    | ಶಿವಕುಮಾರ, ಪರಿಸರ ಪ್ರೇಮಿ

    40 ಮೈಕ್ರಾನ್​ಗಿಂತ ಹೆಚ್ಚಿರುವ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಕುರಿತು ತಿಳಿವಳಿಕೆ ಮೂಡಿಸಲಾಗಿದೆ. ಆದರೂ ಮಾರಾಟ ಮಾಡುತ್ತಿದ್ದರೆ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts