More

    ಮಂಗಳೂರಲ್ಲಿ ದಿನೇದಿನೆ ಹೆಚ್ಚುತ್ತಿದೆ ವಾಹನ ದಟ್ಟಣೆ

    ಮಂಗಳೂರು: ನಗರದಲ್ಲಿ ದಿನೇದಿನೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ತಲೆನೋವಾಗಿ ಪರಿಣಮಿಸಿದೆ. ನಗರದ ಅನೇಕ ಕಡೆ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಸ್ಥಿತಿ ಇದೆ.
    ನಗರದ ಬಹುನಿರೀಕ್ಷೆಯ ಬಹುಅಂತಸ್ತಿನ ಕಾರ್ ಪಾರ್ಕಿಂಗ್ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ, ಆಧುನಿಕ ಸಿಗ್ನಲ್ ವ್ಯವಸ್ಥೆ, ಹೊಸ ಬಸ್‌ಗಳ ನಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ಮಂಗಳೂರು ಮಹಾನಗರದ ವಾಹನ ದಟ್ಟಣೆ ಸಮಸ್ಯೆ ಬಗೆಹರಿದಿಲ್ಲ.

    ನಿಯಮ ಉಲ್ಲಂಘನೆ: ನಗರದ ಬಹುತೇಕ ವಾಣಿಜ್ಯ ಹಾಗೂ ವಸತಿ ಸಮುಚ್ಚಯದ ಮಾಲೀಕರು ಗ್ರಾಹಕರಿಗಾಗಿ ಅಗತ್ಯ ಪಾರ್ಕಿಂಗ್ ಪ್ರದೇಶ ಮೀಸಲಿಟ್ಟಿಲ್ಲ. ಹೀಗಾಗಿ ಜನರು ರಸ್ತೆ ಬದಿಯಲ್ಲೇ ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಿ, ವಾಣಿಜ್ಯ ಸಮುಚ್ಚಯಕ್ಕೆ ತೆರಳಿ ವ್ಯಾಪಾರ ಮುಗಿಸಿ ಹಿಂತಿರುಗುತ್ತಾರೆ. ನಗರದಲ್ಲಿರುವ ಜಾಗಕ್ಕೆ ಚಿನ್ನದ ದರವಿರುವುದರಿಂದ ನಗರ ಹಾಗೂ ಆಸುಪಾಸಿನಲ್ಲಿರುವ ಅಂಗೈ ಅಗಲದಷ್ಟು ಜಾಗವನ್ನೂ ಗ್ರಾಹಕರಿಗಾಗಿ ಅಥವಾ ಸುರಕ್ಷತಾ ಕಾರ್ಯಗಳಿಗೆ ವಿನಿಯೋಗಿಸಲು ಹೆಚ್ಚಿನ ಮಾಲೀಕರು ಸಿದ್ಧರಿಲ್ಲ.

    ರಸ್ತೆಯಲ್ಲೇ ನಿಲುಗಡೆ: ನಗರದ ನಡುವೆಯೇ ಹಲವಾರು ಶಿಕ್ಷಣ ಸಂಸ್ಥೆಗಳಿವೆ. ಕೆಲವು ಶಿಕ್ಷಣ ಸಂಸ್ಥೆಗಳು ತಮ್ಮದೇ ಸಂಸ್ಥೆಯ ವಿದ್ಯಾರ್ಥಿಗಳನ್ನು ಕರೆತರುವ ವಾಹನಗಳನ್ನೂ ಕ್ಯಾಂಪಸ್ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಮಕ್ಕಳನ್ನು ಕೆಳಗಿಳಿಸಲು ಅಥವಾ ಶಾಲೆಯಿಂದ ಮಕ್ಕಳನ್ನು ಪುನಃ ಕರೆದೊಯ್ಯಲು ಶಾಲಾ ವಾಹನಗಳು ಮುಖ್ಯ ರಸ್ತೆಗಳಲ್ಲಿಯೇ ನಿಂತಿರುತ್ತವೆ. ಹೀಗಾಗಿ ಶಾಲೆ ಆರಂಭದ ಸಮಯ ಹಾಗೂ ಸಂಜೆ ಶಾಲೆ ಮುಗಿಯುವ ಅವಧಿಯಲ್ಲಿ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುತ್ತದೆ.

    ವಾಹನ ನೋಂದಣಿಯೂ ಅಧಿಕ

    ಕಳೆದ ಮೂರು ವರ್ಷಗಳಿಂದೀಚೆಗೆ, ಮುಖ್ಯವಾಗಿ ಕರೊನಾ ಸೋಂಕು ಇಳಿಮುಖವಾದ ಬಳಿಕ ಬೈಕ್ ಹಾಗೂ ಕಾರುಗಳ ಖರೀದಿ ನೋಂದಣಿಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಇದೂ ನಗರದಲ್ಲಿ ವಾಹನ ದಟ್ಟಣೆಗೆ ಪ್ರಮುಖ ಕಾರಣವಾಗುತ್ತಿದ್ದು, ಜನಸಾಮಾನ್ಯರನ್ನು ಕಂಗೆಡಿಸುತ್ತಿದೆ. ಆರ್‌ಟಿಒ ಕಚೇರಿ ಮಾಹಿತಿಯ ಪ್ರಕಾರ 2022-23ನೇ ಸಾಲಿನಲ್ಲಿ ಕಾರು, ಬೈಕ್, ಗೂಡ್ಸ್ ವಾಹನಗಳು ಸೇರಿದಂತೆ ಒಟ್ಟು 43,356 ವಾಹನ ನೋಂದಣಿಯಾಗಿದೆ. ಇದರಲ್ಲಿ 29,611 ಬೈಕ್, 9,431 ಕಾರುಗಳು, 1,503 ಗೂಡ್ಸ್ ಕ್ಯಾರಿಯರ್ ವಾಹನ ಸೇರಿದೆ. 2021-22ನೇ ಸಾಲಿನಲ್ಲಿ 23,612 ಬೈಕ್, 7,687 ಕಾರು, 1,028 ಗೂಡ್ಸ್ ಕ್ಯಾರಿಯರ್ ಹಾಗೂ 1,453 ತ್ರಿಚಕ್ರ ವಾಹನ ನೋಂದಣಿಯಾಗಿತ್ತು.

    6 ತಿಂಗಳಲ್ಲಿ 79 ಮಂದಿ ಸಾವು

    ಮಂಗಳೂರು ನಗರದಲ್ಲಿ ವಾಹನಗಳ ದಟ್ಟಣೆ ಜತೆಗೆ ವಾಹನ ಚಾಲಕರ ನಿರ್ಲಕ್ಷೃದಿಂದ ಪ್ರಾಣಹಾನಿ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2023ರ ಜನವರಿಯಿಂದ ಜೂನ್‌ವರೆಗೆ 485 ಅಪಘಾತ ಪ್ರಕರಣ ದಾಖಲಾಗಿದ್ದು, 79 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿತರ ಸಣ್ಣಪುಟ್ಟ ಅಪಘಾತಗಳಲ್ಲಿ 556 ಮಂದಿ ಗಾಯಗೊಂಡಿದ್ದಾರೆ. 2022ರಲ್ಲಿ ಸಂಭವಿಸಿದ 932 ಅಪಘಾತಗಳಲ್ಲಿ 159 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 154 ಮಾರಣಾಂತಿಕ ಅಪಘಾತ ಪ್ರಕರಣ ಸಂಭವಿಸಿದ್ದು, 1,053 ಮಂದಿ ಗಾಯಗೊಂಡಿದ್ದಾರ.

    ಮಂಗಳೂರು ನಗರದ ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತರ ಹಂತದಲ್ಲಿ ಒಂದು ಮಟ್ಟದ ವಿಸ್ತೃತ ಚರ್ಚೆ ನಡೆದಿದೆ. ಪಾರ್ಕಿಂಗ್ ವ್ಯವಸ್ಥೆಗಾಗಿ ನಗರದಲ್ಲಿ ಈಗಾಗಲೇ ಗುರುತಿಸಲಾದ ಸ್ಥಳಗಳಿವೆ. ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಪೊಲೀಸರು, ಮನಪಾ ಅಧಿಕಾರಿಗಳು ಸೇರಿದಂತೆ ಸ್ಥಾಯಿ ಸಮಿತಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. 3- 4 ದಿನಗಳಲ್ಲಿ ಈ ಸಮಿತಿ ಕಾರ್ಯಾರಂಭ ಮಾಡಲಿದೆ. ಸ್ವಲ್ಪ ದಿನಗಳ ಬಳಿಕ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇನ್ನೊಂದು ಸಭೆ ನಡೆಸಿ ಪ್ರಸ್ತಾವಿತ ಯೋಜನೆ ಕುರಿತು ಸಮಾಲೋಚನೆ ನಡೆಯಲಿದೆ.
    ಆನಂದ್ ಸಿ.ಎಲ್., ಆಯುಕ್ತರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts