More

    ಶಿಕ್ಷಕರಿಬ್ಬರನ್ನು ಆರೋಪ ಮುಕ್ತಗೊಳಿಸಿದ ಹೈಕೋರ್ಟ್

    ಬೆಂಗಳೂರು: ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪಾತ್ರದಾರರು ಎಂದು ಹೇಳುತ್ತೇವೆ. ಅವರು ವಿದ್ಯಾರ್ಥಿಗಳನ್ನು ಖಂಡಿಸುವುದು ಆತ್ಮಹತ್ಯೆಗೆ ಪ್ರಚೋದನೆ ಎಂಬುದಾಗಿ ಹೇಳಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಶಾಲೆಯೊಂದರ ಶಿಕ್ಷಕಿಯರನ್ನು ಆರೋಪಮುಕ್ತಗೊಳಿಸಿ ಆದೇಶಿಸಿದೆ.

    ಬೆಂಗಳೂರಿನ ಲಕ್ಕಸಂದ್ರದ ಮೇರಿ ಇಮ್ಮಾಕ್ಯುಲೇಟ್ ಹೈಸ್ಕೂಲ್‌ನ ಶಾಲಾ ಪ್ರಾಂಶುಪಾಲೆ ಎ.ಸಿ.ಮರಿಯಾ ಲೈಲಾ ಮತ್ತು ಶಿಕ್ಷಕಿ ಫಿಲೋಮಿನಾ ಇಮ್ಯಾನ್ಯುಯಲ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಬಸವರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಶಿಕ್ಷಣದ ಕುರಿತು ಗಮನ ಹರಿಸದಿರುವುದು, ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದಕ್ಕಾಗಿ ಅಥವಾ ಶಾಲೆ ಹಾಗೂ ತರಗತಿಗಳಿಗೆ ಹಾಜರಾಗುವುದಕ್ಕೆ ವಿದ್ಯಾರ್ಥಿನಿಯರನ್ನು ಶಿಕ್ಷಕರು ಖಂಡಿಸುವುದು ಸಾಮಾನ್ಯವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

    ಪ್ರಕರಣ ಸಂಬಂಧ ಅರ್ಜಿದಾರರು ಸ್ವಯಂಪ್ರೇರಿತ ಹೇಳಿಕೆ ಸೇರಿ ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಶಾಲೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಉತ್ತಮ ಸಾಧನೆ ಮಾಡಿರಲಿಲ್ಲ. ಆದಕಾರಣ ಅರ್ಜಿದಾರ ಶಿಕ್ಷಕರು ಅವರಿಗಾಗಿ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಬೋಧನೆ ಮಾಡಿದ್ದಾರೆ ಎಂಬುದು ತಿಳಿಯಲಿದೆ. ಶಿಸ್ತು ವಿದ್ಯಾರ್ಥಿಗಳನ್ನು ವಿಶ್ಲೇಷಣಾತ್ಮಕ ಪಾತ್ರ ಮತ್ತು ಕೌಶಲವನ್ನು ಸುಧಾರಣೆ ಮಾಡಲಿದೆ. ಜತೆಗೆ ಜೀವನದಲ್ಲಿ ಯಶಸ್ವಿಯಾಗಲು ಪ್ರಮುಖವಾಗಿರಲಿದೆ ಎಂದು ತಿಳಿಸಿದೆ.

    ವಿದ್ಯಾರ್ಥಿಗಳಿಗೆ ಅರ್ಜಿದಾರ ಆರೋಪಿಗಳು ಕಿರುಕುಳ ನೀಡಿರುವ ಅಂಶವನ್ನು ಸಾಬೀತುಪಡಿಸಲು ವಿಫಲವಾಗಿವೆ. ಜತೆಗೆ, ಅರ್ಜಿದಾರರು ಆತ್ಮಹತ್ಯೆಗೆ ಯಾವ ರೀತಿಯಲ್ಲಿ ಜವಾಬ್ದಾರರು ಎಂಬುದನ್ನು ತಿಳಿಯುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಆರೋಪ ಸಾಬೀತಾಗುವುದಿಲ್ಲ. ಆರೋಪ ಸಾಬೀತು ಪಡಿಸಲು ದೃಢವಾದ ಪುರಾವೆಗಳಿಲ್ಲ ಎಂದು ಪೀಠ ತಿಳಿಸಿದೆ.

    ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದನ್ನು ತಿಳಿಯಲು ಸಾಕ್ಷ್ಯಾಧರಗಳು ಲಭ್ಯವಿಲ್ಲದಿದ್ದಾಗ ಮೃತರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಸಾಕಾಗುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ ಅರ್ಜಿದಾರನ್ನು ಖುಲಾಸೆಗೊಳಿಸಿ ಆದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts