More

    ದೇಶ ರಕ್ಷಣೆಯಲ್ಲಿ ಪಾಲ್ಗೊಂಡ ಸಾರ್ಥಕತೆ ಹೆತ್ತವರ ಧನ್ಯತೆ

    ಆನಂದ್ ಪಾಂಡುರಂಗಿ‘ಆತ ನನಗಷ್ಟೇ ಮಗನಲ್ಲ. ಭಾರತ ಮಾತೆಯ ಮಗ. ಇಡೀ ದೇಶದ ಮಗ. ಭಾರತಾಂಬೆಯ ನೆಲದ ರಕ್ಷಣೆಗೆ ತನ್ನ ಜೀವವನ್ನೇ ಮುಡಿಪಿಟ್ಟು ತ್ರಿವರ್ಣ ಧ್ವಜ ಹೊತ್ತು ಹುತಾತ್ಮನಾದ ಅಪರೂಪದ ಮಗ’ -ಹೀಗೆಂದು ತನ್ನ ಮಗನ ಅಗಲಿಕೆಯ ದುಃಖವಿದ್ದರೂ ಆತನ ಬಗ್ಗೆ ಹೆಮ್ಮೆಯಿಂದ ಹೇಳಿದ್ದು ಹುತಾತ್ಮ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಾಯಿ ಅನುರಾಧಾ.

    ಅವರ ಮಾತಲ್ಲಿ ಕರುಳಕುಡಿ ಕಳೆದುಕೊಂಡ ವಿಷಾದವಿತ್ತು. ಜತೆ ಜತೆಗೆ ಮಗ ದೇಶಕ್ಕಾಗಿ ಹುತಾತ್ಮನಾದ ಎಂಬುದರ ಬಗ್ಗೆ ಹೆಮ್ಮೆಯೂ ಇತ್ತು. ಅವರ ಮಾತು ಆಲಿಸುತ್ತಿದ್ದಂತೆ ಗೊತ್ತಿಲ್ಲದೇ ನನ್ನ ಕಣ್ಣುಗಳೂ ತೇವಾದವು. ನನ್ನದಷ್ಟೇ ಏಕೆ ಆ ಕಾರ್ಯಕ್ರಮದಲ್ಲಿ ನೆರೆದ ಎಲ್ಲರ ಕಣ್ಣಂಚಿನಲ್ಲಿ ಹನಿ ಜಿನುಗಿದವು. ಆ ತಾಯಿಗೂ ಕ್ಷಣ ಕಾಲ ಮಾತೇ ಬರದಂತಾಗಿ ದುಃಖ ಉಮ್ಮಳಿಸಿ ಬಂದಿತು.

    ಇದು ಒಬ್ಬ ಅನುರಾಧಾರ ಪರಿಸ್ಥಿತಿಯಲ್ಲ. ದೇಶಕ್ಕಾಗಿ ಪ್ರಾಣತೆತ್ತ ಮಕ್ಕಳ ಇಂತಹ ಸಾವಿರಾರು ತಾಯಂದಿರು ನಮ್ಮ ಮಧ್ಯೆ ಇದ್ದಾರೆ. ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಇತ್ತೀಚೆಗೆ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ಜತೆ ನಡೆದ ಸಂಘರ್ಷದಲ್ಲಿ ಹುತಾತ್ಮನಾದ. ವೆಂಕಟೇಶ ಹಾಗೂ ಅನುರಾಧಾ ಅವರಿಗೆ ಆತ ಏಕೈಕ ಪುತ್ರ. ಬರೀ 28 ವಯಸ್ಸು. ಎರಡು ವರ್ಷ ಹಿಂದಷ್ಟೇ ಅದಿತಿ ಜತೆ ಸಪ್ತಪದಿ ತುಳಿದಿದ್ದ. 63ನೇ ರಾಷ್ಟಿ›ೕಯ ರೈಫಲ್ಸ್​ನಲ್ಲಿ ಕ್ಯಾಪ್ಟನ್ ಆಗಿದ್ದ. ಕೆಲ ದಿನಗಳಲ್ಲಿ ಮೇಜರ್ ಆಗಿ ಬಡ್ತಿ ಪಡೆಯುವವನಿದ್ದ. ವಿದ್ಯಾರ್ಥಿ ದೆಸೆಯಿಂದಲೇ ದೇಶಸೇವೆಯ ತುಡಿತ ಆತನಲ್ಲಿತ್ತು. ಗಡಿ ರಕ್ಷಣೆಗೆ ನಿಯೋಜನೆಗೊಂಡಿದ್ದ ಆತನಿಗೆ ಬೇರೆಡೆ ಕೆಲಸ ಮಾಡುವ ಅವಕಾಶವಿತ್ತು. ಆದರೆ ಆತ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಗಡಿಯಲ್ಲಿ ಎದೆ ಕೊಟ್ಟು ಎದುರಾಳಿಗಳನ್ನು ಮಟ್ಟ ಹಾಕುವ ಯೋಧನ ಕೆಲಸ. ಕರ್ತವ್ಯದ ವೇಳೆ ಎದುರಾಳಿಗಳ ಜತೆಗಿನ ಸೆಣಸಾಟದಲ್ಲಿ ಎದುರಾಳಿಗಳ ಗುಂಡೇಟಿಗೆ ಹುತಾತ್ಮನಾಗಿ ಅಜರಾಮರನಾದ. ಹೆತ್ತವರಿಗೆ ತುಂಬಲಾರದ ನಷ್ಟ.

    ನಮ್ಮ ಮುಂದೆ ಇರುವ ನಿಜವಾದ ಹೀರೊಗಳೆಂದರೆ ರೈತ ಹಾಗೂ ದೇಶದ ಗಡಿ ಕಾಯುವ ಯೋಧ. ಇವರಿಬ್ಬರು ಇಲ್ಲದಿದ್ದರೆ ನಮ್ಮ ಗತಿ ಅಧೋಗತಿ. ರೈತ ಆಹಾರ ಭದ್ರತೆ ಒದಗಿಸಿದರೆ ಯೋಧ ಜೀವ ರಕ್ಷಣೆ ಕಲ್ಪಿಸುತ್ತಾನೆ. ಆದರೆ ವಿಪರ್ಯಾಸವೆಂದರೆ ಇಂದಿನ ಅನೇಕರಿಗೆ ತಮ್ಮ ಮಕ್ಕಳು ಯೋಧ ಅಥವಾ ರೈತ ಆಗುವುದು ಬೇಕಿಲ್ಲ. ತಿಂಗಳ ಕೊನೆಗೆ ಐದಂಕಿ ಸಂಬಳ, ದೊಡ್ಡ ಬಂಗಲೆ, ಬ್ರಾಂಡೆಡ್ ಕಾರು, ವೀಕೆಂಡ್​ಗೆ ಎರಡೆರಡು ರಜೆ. ವರ್ಷಕ್ಕೊಮ್ಮೆ ವಿದೇಶ ಪ್ರವಾಸ ಭಾಗ್ಯ. ಹೆಂಡತಿಯೂ ಕೈ ತುಂಬಾ ಸಂಬಳ ತರುತ್ತಿರಬೇಕು. ಇಲ್ಲವೇ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರಬೇಕು ಎನ್ನುವ ಅಭಿಲಾಷೆಯೇ ಹೆಚ್ಚು. ಯಾರೊಬ್ಬರೂ ತನ್ನ ಮಗ ಹೊಲದಲ್ಲಿ ಬೆವರು ಸುರಿಸಲಿ ಎಂದು ಹೇಳುವವರಿಲ್ಲ. ರೈತ ಉತ್ತಿ ಬಿತ್ತಿ ಬೆಳೆದರೆ ಮಾತ್ರ ನಮಗೊಂದು ತುತ್ತು ಎನ್ನುವ ನಗ್ನ ಸತ್ಯ ಗೊತ್ತಿದ್ದರೂ ಆ ಕಾಯಕ ಮಾತ್ರ ಬೇಡ. ಈ ಮನಸ್ಥಿತಿ ಬದಲಾಗದ ಹೊರತು ಮನುಷ್ಯನಲ್ಲಿ ಸೇವಾ ಮನೋಭಾವ, ಸಮಾಜಮುಖಿ ವ್ಯಕ್ತಿತ್ವ ನಿರೀಕ್ಷಿಸುವುದು ಸಾಧ್ಯವಿಲ್ಲ.ಮನುಷ್ಯನಿಗೆ ಸಮಾಜಮುಖಿ ಚಿಂತನೆಗಳು ಅಗತ್ಯ. ದೇಶ ತನಗೇನು ಕೊಟ್ಟಿತು ಎನ್ನುವ ಬದಲಾಗಿ ನಾನು ದೇಶಕ್ಕಾಗಿ ಏನು ನೀಡಬಲ್ಲೆ ಎಂಬ ಚಿಂತನೆ ಅಗತ್ಯ. ಯುವಸಮೂಹ ಕೇವಲ ವೈಯಕ್ತಿಕ ಆರ್ಥಿಕ ಸುರಕ್ಷತೆಯತ್ತ ಗಮನ ಹರಿಸುತ್ತಿದೆ. ತನ್ನ ಹಾಗೆ ಉಳಿದವರು, ಸಮಾಜ, ಸಮಷ್ಟಿ ಹಿತದ ಭಾವನೆ ಮನಸ್ಸಿನಲ್ಲಿ ಬಂದಾಗ ಮಾತ್ರ ಆ ವ್ಯಕ್ತಿ ಆ ಕುಟುಂಬಕ್ಕಷ್ಟೇ ಅಲ್ಲ. ಆ ನಾಡಿನ, ದೇಶದ ಆಸ್ತಿಯಾಗುತ್ತಾನೆ.

    ಒಂದು ನೆನೆಪಿನಲ್ಲಿಟ್ಟುಕೊಳ್ಳಿ. ದೇಶದ ಸೇನೆ ಸೇರಿ ಭಾರತಾಂಬೆಯ ರಕ್ಷಣೆೆ ಮಾಡುವ ಸುವರ್ಣಾವಕಾಶ ಎಲ್ಲರಿಗೂ ಸಿಗದು. ಅದೆಷ್ಟು ಜನ್ಮಗಳ ಪುಣ್ಯ, ಗುರುಹಿರಿಯರ ಆಶೀರ್ವಾದದ ಫಲವೋ ಎಂ.ವಿ. ಪ್ರಾಂಜಲ್​ಗೆ ಇಂತಹ ಒಂದು ಅವಕಾಶ ಒದಗಿತು. ಆ ಕರ್ತವ್ಯದಲ್ಲೇ ತಾಯ್ನಾಡಿಗಾಗಿ ಹುತಾತ್ಮನಾದ. ಆತ ದೈಹಿಕವಾಗಿ ನಮ್ಮ ಮಧ್ಯೆ ಇರದಿರಬಹುದು. ಆದರೆ ಆತನ ಸೇವೆ, ಶೌರ್ಯ, ಕಾರ್ಯವೈಖರಿ ಸಮಾಜಕ್ಕೆ ಸ್ಪೂರ್ತಿ, ಮಾದರಿ. ಪ್ರತಿ ಮನೆ ಮನೆಯಲ್ಲಿ ಇಂತಹ ಒಬ್ಬ ಎಂ.ವಿ. ಪ್ರಾಂಜಲ್ ಜನಿಸಿದರೆ ಹೆತ್ತವರ ಜನ್ಮವೂ ಸಾರ್ಥಕ. ದೇಶದ ಭವಿಷ್ಯವೂ ಉಜ್ವಲ. ಮತ್ತೊಮ್ಮೆ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಹಾಗೂ ಆತನ ಕುಟುಂಬಕ್ಕೊಂದು ಸಲಾಂ.

    ಮುಂಬರುವ ಟಿ-20 ವಿಶ್ವಕಪ್​ನಿಂದ ವಿರಾಟ್​ ಕೊಹ್ಲಿಗೆ ಕೊಕ್​; ಕಾರಣ ಹೀಗಿದೆ

    VIDEO| ಮಹಾಶಿವರಾತ್ರಿಯಂದು ಅಪ್ಪು ನೆನೆದು ಭಾವುಕರಾದ ಸದ್ಗುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts