More

    ಬಿಡಾಡಿ ದನಗಳ ಆಟಾಟೋಪ

    ನರೇಗಲ್ಲ: ಪಟ್ಟಣದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆಯಲ್ಲಿ ಹಿಂಡು ಹಿಂಡಾಗಿ ಅಡ್ಡಾಡುವುದರಿಂದ ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

    ಪ್ರಮುಖ ರಸ್ತೆಯಲ್ಲಿರುವ ಅಂಗಡಿ, ಹೋಟೆಲ್ ಎದುರು, ರಸ್ತೆ ಮಧ್ಯ ಹೀಗೆ ಎಲ್ಲೆಂದರಲ್ಲಿ ಹಿಂಡುಹಿಂಡಾಗಿ ತಿರುಗುವುದು, ಮಲಗುವುದು, ಕಾದಾಡುವುದು ಸರ್ವೆಸಾಮಾನ್ಯವಾಗಿದೆ. ದೊಡ್ಡ ವಾಹನಗಳು ಎಷ್ಟೇ ಹಾರ್ನ್ ಹಾಕಿದರೂ ಕ್ಯಾರೆ ಅನ್ನದೇ ಸಂಚರಿಸುತ್ತವೆ. ಪೊಲೀಸ್ ಠಾಣೆಯಿಂದ ಹಳೇ ಬಸ್ ನಿಲ್ದಾಣದ ವರೆಗೆ ದನಗಳಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದು, ಸಂಚಾರ ಪೊಲೀಸರಿಗೆ ಅವುಗಳನ್ನು ಓಡಿಸುವುದೇ ಕಾಯಕವಾಗಿದೆ. ಬಿಡಾಡಿ ದನಗಳು ಇಷ್ಟೆಲ್ಲ ತೊಂದರೆ ಕೊಡುತ್ತಿದ್ದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಗಾಂಧಿ ಭವನ, ಪೊಲೀಸ್ ಠಾಣೆ, ಶ್ರೀ ಹುಚ್ಚಿರೇಶ್ವರ ಮಠದ ರಸ್ತೆ, ಗಣೇಶ ದೇವಸ್ಥಾನ ಆವರಣ, ದರ್ಗಾ ಆವರಣ, ಕಾಲೇಜ್ ರಸ್ತೆ ಹೀಗೆ ಎಲ್ಲ ವೃತ್ತ ಹಾಗೂ ಪ್ರಮುಖ ರಸ್ತೆಯಲ್ಲಿ ಬಿಡಾಡಿ ದನಗಳು ಠಿಕಾಣಿ ಹೂಡಿರುತ್ತವೆ. ಇವು ಕಾದಾಟ ಶುರು ಮಾಡಿದರೆ ಯಾರಿಗೂ ಹೆದರುವುದಿಲ್ಲ. ವಾಹನಗಳಿಗೆ ಅಡ್ಡ ಬಂದು, ಪಾದಚಾರಿಗಳಿಗೆ ಇರಿದು ಗಾಯಗಳಾಗಿ ಕೈಕಾಲು ಮೂಳೆಗಳು ಮುರಿದ ಘಟನೆಗಳು ನಡೆದಿವೆ.

    ಪ್ರತಿ ಸೋಮವಾರ ಪಟ್ಟಣದ ಗಣೇಶ ಗುಡಿ ಹತ್ತಿರ ಜರುಗುವ ಸಂತೆಯಲ್ಲೂ ಬಿಡಾಡಿ ದನಗಳ ಹಾವಳಿ ಎಲ್ಲೆಮೀರಿದೆ. ಸಂತೆ ಸ್ಥಳ ಬಹಳಷ್ಟು ಕಿರಿದಾಗಿದ್ದು, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಸಂತೆಯನ್ನು ಪ್ರವೇಶಿಸುವ ಬಿಡಾಡಿ ದನಗಳು ತರಕಾರಿಗೆ ಬಾಯಿ ಹಾಕುತ್ತ, ಜನರನ್ನು ತಿವಿಯುತ್ತ ಭಯಹುಟ್ಟಿಸುತ್ತಿವೆ. ಇವುಗಳನ್ನು ನಿಯಂತ್ರಿಸುವಲ್ಲಿ ಪಪಂ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ವ್ಯಾಪಾರಿಗಳು, ಸಾರ್ವಜನಿಕರ ಆರೋಪವಾಗಿದೆ.

    ಬಿಡಾಡಿ ದನಗಳ ಆಟಾಟೋಪದಿಂದಾಗಿ ಅಮಾಯಕರ ಜೀವಕ್ಕೆ ಆಪತ್ತು ಬರುತ್ತಿದೆ. ಈ ಹಿಂದೆ ಸಾಕಷ್ಟು ಬಾರಿ ಬಿಡಾಡಿ ದನಗಳ ಹಾವಳಿ ಕುರಿತು ಪಪಂ ಅಧಿಕಾರಿಗಳಿಗೆ ತಿಳಿಸಿದ್ದರೂ ಈವರೆಗೂ ಯಾವುದೆ, ಕ್ರಮ ಜರುಗಿಸಿಲ್ಲ. ದಿನೇದಿನೆ ಸಮಸ್ಯೆ ಹೆಚ್ಚುತ್ತಿದ್ದರೂ ಪಪಂನವರಿಗೆ ಗಂಭೀರತೆ ಅರ್ಥವಾಗುತ್ತಿಲ್ಲ. ಇನ್ನು ಮುಂದಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಬೇಕು.

    | ಬಸವರಾಜ ಕೊಟಗಿ, ಯಲ್ಲಪ್ಪ ಕುರಿ, ಸಿಕಂದರ ಕುದರಿ, ಮಂಜುನಾಥ ಕಮಲಾಪೂರ

    ಪಟ್ಟಣದಲ್ಲಿ ಕೊಂಡವಾಡ ಇಲ್ಲ. ಬಿಡಾಡಿ ದನಗಳನ್ನು ಹಿಡಿದು ಸಮೀಪದ ಗೋ ಶಾಲೆಗೆ ರವಾನಿಸುವ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮತ್ತು ಸರ್ವ ಸದಸ್ಯರೊಂದಿಗೆ ರ್ಚಚಿಸಲಾಗುತ್ತದೆ. ನಂತರ ಬಿಡಾಡಿ ದನಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ.

    | ಮಹೇಶ ನಿಡಶೇಶಿ, ಪಪಂ ಮುಖ್ಯಾಧಿಕಾರಿ, ನರೇಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts