More

    ಚುನಾವಣೆಗಳಲ್ಲಿ ಮೊಳಗಿದ ಸ್ಲೋಗನ್​ಗಿರಿ!

    ಗರೀಬಿ ಹಟಾವೋ ದೇಶ್ ಬಚಾವೋ- ಕಾಂಗ್ರೆಸ್

    ಇಂದಿರಾ ಗಾಂಧಿ 1971ರಲ್ಲಿ ರೂಪಿಸಿದ ಈ ಘೋಷಣೆ ಆಗಿನ ಕಾಲದಲ್ಲಿ ಭಾರಿ ಜನಪ್ರಿಯವಾಗಿತ್ತು. ‘ಬಡತನ ತೊಲಗಿಸಿ, ದೇಶ ರಕ್ಷಿಸಿ’ ಎಂಬ ಘೋಷಣೆ ಜನಸಾಮಾನ್ಯರನ್ನು ಸೆಳೆಯಿತು ಮತ್ತು ಮತಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮ, ಕಾಂಗ್ರೆಸ್ ಪಕ್ಷಕ್ಕೆ ಅಂದಿನ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪ್ರಾಪ್ತವಾಗಿ ಇಂದಿರಾ ಗಾಂಧಿ ಪ್ರಧಾನಿ ಹುದ್ದೆಯನ್ನು ಏರಿದರು.

    ಇಂದಿರಾ ಹಟಾವೋ, ದೇಶ್ ಬಚಾವೋ- ಜನತಾ ಪಾರ್ಟಿ

    ಲೋಕನಾಯಕ ಜಯಪ್ರಕಾಶ್ ನಾರಾಯಣ್ 1977ರ ಸುಮಾರಿಗೆ ಈ ಸ್ಲೋಗನ್ ಬಳಸಿ ನೀಡಿದ ಕರೆಗೆ ದೇಶಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾ ಯಿತು. ತುರ್ತು ಪರಿಸ್ಥಿತಿ ಹೇರಿಕೆಯಿಂದ ಜನರ ಸಿಟ್ಟಿಗೆ ತುತ್ತಾಗಿದ್ದ ಇಂದಿರಾ ಗಾಂಧಿ ಆ ಚುನಾವಣೆಯಲ್ಲಿ ಭಾರಿ ಸೋಲು ಅನುಭವಿಸಿದರು. ಜನತಾ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

    ಏಕ್ ಶೇರ್​ನಿ, ಸೌ ಲಂಗೂರ್, ಚಿಕ್ಕಮಗ್ಳೂರ್ ಚಿಕ್ಕಮಗ್ಳೂರ್ – ಕಾಂಗ್ರೆಸ್

    ಕರ್ನಾಟಕದ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಸ್ಪರ್ಧಿಸಿದ್ದಾಗ ಅವರ ಪ್ರಚಾರಕ್ಕಾಗಿ ಕಾಂಗ್ರೆಸ್ಸಿಗರು ರೂಪಿಸಿದ ಸ್ಲೋಗನ್ ಇದು. ಕಾಂಗ್ರೆಸ್ ನಾಯಕ ಡಿ.ಬಿ.ಚಂದ್ರೇಗೌಡ ಇಂದಿರಾ ಗಾಂಧಿಗಾಗಿ ತಮ್ಮ ಲೋಕಸಭಾ ಸೀಟನ್ನು ಬಿಟ್ಟುಕೊಟ್ಟರು. ಈ ಉಪಚುನಾವಣೆಯಲ್ಲಿ ಜನತಾಪಕ್ಷದ ವೀರೇಂದ್ರ ಪಾಟೀಲರನ್ನು ಇಂದಿರಾ ಗಾಂಧಿ 77,333 ಮತಗಳ ಅಂತರದಿಂದ ಸೋಲಿಸಿದರು. ಆ ಮೂಲಕ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ದೊರೆಯಿತು.

    ಜಬ್ ತಕ್ ಸೂರಜ್ ಚಾಂದ್ ರಹೇಗಾ, ಇಂದಿರಾ ತೇರಾ ನಾಮ್ ರಹೇಗಾ- ಕಾಂಗ್ರೆಸ್

    ಇಂದಿರಾ ಗಾಂಧಿ ಸಿಖ್ ಅಂಗರಕ್ಷಕರಿಂದ 1984ರಲ್ಲಿ ಹತ್ಯೆಗೀಡಾದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೂಪಿಸಿದ ಸ್ಲೋಗನ್ ಇದು (ಸೂರ್ಯ, ಚಂದ್ರರು ಇರುವವರೆಗೂ ಇಂದಿರಾ ನಿಮ್ಮ ಹೆಸರು ಇರುತ್ತದೆ). ಇಂದಿರಾ ಹತ್ಯೆಯ ಬಳಿಕ ಅನುಕಂಪದ ವಾತಾವರಣ ಸೃಷ್ಟಿಸುವಲ್ಲಿ ಈ ಘೋಶವಾಕ್ಯ ಪ್ರಮುಖ ಪಾತ್ರ ವಹಿಸಿತು. 514 ಸ್ಥಾನಗಳ ಪೈಕಿ 404ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಭಾರಿ ಬಹುಮತ ಪಡೆದುಕೊಂಡು, ಅಧಿಕಾರದ ಗದ್ದುಗೆ ಹಿಡಿಯಿತು.

    ಬಾರಿ ಬಾರಿ ಸಬ್ ಕಿ ಬಾರಿ, ಅಬ್ ಕಿ ಬಾರಿ ಅಟಲ್ ಬಿಹಾರಿ- ಬಿಜೆಪಿ

    ಈ ಸ್ಲೋಗನ್ ಮೊದಲ ಬಾರಿ ಕೇಳಿಬಂದದ್ದು ಲಖನೌ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ. ಕ್ಲೀನ್ ಇಮೇಜ್​ನಿಂದಾಗಿ ಅಟಲ್ ಬಿಹಾರಿ ವಾಜಪೇಯಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಮಾಡಲಾಗಿತ್ತು. ಆಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತಾದರೂ ಕೇವಲ 13 ದಿನ ಮಾತ್ರ ಅಧಿಕಾರದಲ್ಲಿತ್ತು.

    ಮಾ, ಮಾಟಿ, ಮಾನುಷ್- ತೃಣಮೂಲ ಕಾಂಗ್ರೆಸ್ ಪಕ್ಷ

    ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ 2009ರ ಸಾರ್ವತ್ರಿಕ ಚುನಾವಣೆ ವೇಳೆ ರೂಪಿಸಿದ ಸ್ಲೋಗನ್ ಇದು. ಈ ಚುನಾವಣೆಯಲ್ಲಿ ಟಿಎಂಸಿ ಅತಿ ಹೆಚ್ಚು, ಅಂದರೆ 40 ಸ್ಥಾನಗಳ ಪೈಕಿ 19ರಲ್ಲಿ ಜಯ ಗಳಿಸಿತು.

    ಇಂಡಿಯಾ ಶೈನಿಂಗ್- ಬಿಜೆಪಿ

    ಸಾರ್ವತ್ರಿಕ ಚುನಾವಣೆಗಾಗಿ 2004ರಲ್ಲಿ ಬಿಜೆಪಿ ರೂಪಿಸಿದ ಘೊಷವಾಕ್ಯ ಇದು. ಐದು ವರ್ಷಗಳಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಈ ಘೋಷ ವಾಕ್ಯ ಹೊರಡಿಸಿತು ಮತ್ತು ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಇದರಿಂದ ವಾಜಪೇಯಿ ನೇತೃತ್ವದ ಬಿಜೆಪಿಗೆ ಪ್ರಯೋಜನವೇನೂ ಆಗಲಿಲ್ಲ. ಬದಲಿಗೆ ಆ ಚುನಾ ವಣೆಯಲ್ಲಿ ಬಿಜೆಪಿ ಭಾರಿ ಸೋಲು ಅನುಭವಿಸಿತು.

    ಕಾಂಗ್ರೆಸ್ ಕಾ ಹಾಥ್ ಆಮ್ ಆದ್ಮಿ ಕೆ ಸಾಥ್- ಕಾಂಗ್ರೆಸ್

    ಬಿಜೆಪಿಯ ಇಂಡಿಯಾ ಶೈನಿಂಗ್ ಘೊಷವಾಕ್ಯಕ್ಕೆ ಪ್ರತಿಯಾಗಿ ಕಾಂಗ್ರೆಸ್ ರೂಪಿಸಿದ ಈ ಸ್ಲೋಗನ್​ಗೆ

    (ಜನಸಾಮಾನ್ಯರ ಜತೆ ಕಾಂಗ್ರೆಸ್ಸಿನ ಹಸ್ತ) ಮತದಾರರು ಪೂರಕವಾಗಿ ಪ್ರತಿಸ್ಪಂದಿಸಿದರು. 1999ರಿಂದ 2004ರವರೆಗೆ ಅಧಿಕಾರದಲ್ಲಿದ್ದ ಎನ್​ಡಿಎ ಒಕ್ಕೂಟ ಸೋಲು ಅನುಭವಿಸಿತು. ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು, ಡಾ.ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆ ಏರಿದರು.

    ಸಬ್ ಕಾ ಸಾಥ್, ಸಬ್ ಕಾ ವಿಕಾಸ್- ಬಿಜೆಪಿ

    ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ಸಾರ್ವತ್ರಿಕ ಚುನಾವಣೆಗೆ ಹೋದಾಗ ಬಿಜೆಪಿ ರೂಪಿಸಿದ ಸ್ಲೋಗನ್ ಇದು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಯಿತು. ಬಿಜೆಪಿ ಮೊದಲಬಾರಿಗೆ ಸ್ಪಷ್ಟ ಬಹುಮತವನ್ನು ಅಂದರೆ 282 (ಮತ್ತು ಒಟ್ಟಾರೆ ಎನ್​ಡಿಎ 336) ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂತು.

    ಅಬ್ ಕಿ ಬಾರ್, ಚಾರ್ ಸೌ ಪಾರ್- ಬಿಜೆಪಿ

    ಇದು ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಘೊಷಣೆ. 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎನ್​ಡಿಎ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರು ಇಟ್ಟುಕೊಂಡು, ಪ್ರಚಾರ ನಡೆಸುತ್ತಿದ್ದಾರೆ.

    ಮುಂಬೈ: ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts