More

    2ನೇ ದಿನವೂ ಜನಸಾಮಾನ್ಯರ ಪರದಾಟ

    ಹುಬ್ಬಳ್ಳಿ/ಧಾರವಾಡ: ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿರಿಸಿದ್ದರಿಂದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್​ಗಳು ಶನಿವಾರವೂ ರಸ್ತೆಗೆ ಇಳಿಯಲಿಲ್ಲ.

    ಹೀಗಾಗಿ ಶನಿವಾರವೂ ಪ್ರಯಾಣಿಕರ ಪರದಾಟ ಮುಂದುವರಿದಿತ್ತು. ಇಂದಾದರೂ ಬಸ್​ಗಳು ಸಂಚಾರ ಪ್ರಾರಂಭಿಸಬಹುದೆಂದು ಅನೇಕರು ಅವಳಿ ನಗರದ ನಿಲ್ದಾಣಕ್ಕೆ ಬಂದು ಕಾಯುತ್ತ ಕುಳಿತಿದ್ದರು.

    ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬಂದವರು, ತುರ್ತು ಕಾರ್ಯಕ್ಕಾಗಿ ಬೇರೆ ಊರುಗಳಿಗೆ ತೆರಳುವವರು, ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಬಸ್​ಗಳಿಗಾಗಿ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದು ಕಂಡುಬಂದಿತು.

    ಡಬ್ಬಲ್ ಹಣ ವಸೂಲಿ: ಈ ಮಧ್ಯೆ ಟೆಂಪೊ, ಆಟೋಗಳು ಹೆಚ್ಚಿನ ದರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಸಹ ಕಾಣಿಸಿತು. ಬೆಳಗಾವಿಗೆ 250 ರೂ., ಗದಗಗೆ 150 ರೂ. ಪ್ರತಿ ಪ್ರಯಾಣಿಕರಿಗೆ ವಸೂಲಿ ಮಾಡಲಾಗುತ್ತಿತ್ತು. ಟೆಂಪೊ ಚಾಲಕರು ನಿಲ್ದಾಣದೊಳಗೆ ಆಗಮಿಸಿ, ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಆಟೋ ಚಾಲಕರು ಸಹ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತಿರುವುದು ಇಂದೂ ಮುಂದುವರಿದಿತ್ತು.

    ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ಸಾರಿಗೆ ಬಸ್​ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದವು.

    ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಹೊಸೂರು ಹಾಗೂ ಗೋಕುಲ ರಸ್ತೆಯ ಡಿಪೋಗಳಲ್ಲಿ ಬಸ್​ಗಳು ಸಾಲುಗಟ್ಟಿ ನಿಂತಿದ್ದವು. ಮುಂಜಾಗ್ರತೆಯಾಗಿ ಡಿಪೋ ಹಾಗೂ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

    ಧಾರವಾಡದಲ್ಲಿ ಸಾರಿಗೆ ನೌಕರರು ಸಿಬಿಟಿ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ನಗರ, ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ನಿತ್ಯ 193 ಮಾರ್ಗಗಳಲ್ಲಿ 212 ಬಸ್​ಗಳು ಸಂಚರಿಸುತ್ತವೆ. ಇದರಿಂದ ಎರಡನೇ ದಿನವೂ ಸುಮಾರು 14 ಲಕ್ಷ ರೂ. ನಷ್ಟವಾಗಿದೆ ಎಂದು ಧಾರವಾಡ ಡಿಪೋ ವ್ಯವಸ್ಥಾಪಕ ಎಸ್.ಜಿ. ಬಿರಾದಾರ ತಿಳಿಸಿದರು.

    ಊಟದ ವ್ಯವಸ್ಥೆ: ಸಾರಿಗೆ ನೌಕರರ ಬಂದ್ ಸಮಯದಲ್ಲಿ ಬೇರೆ ವಿಭಾಗಗಳಿಂದ ಹುಬ್ಬಳ್ಳಿಗೆ ಆಗಮಿಸಿ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿರುವ ಚಾಲಕ ಹಾಗೂ ನಿರ್ವಾಹಕರಿಗೆ ಹುಬ್ಬಳ್ಳಿ ವಿಭಾಗದ ಸಿಬ್ಬಂದಿ ಊಟದ ವ್ಯವಸ್ಥೆ ಮಾಡಿದ್ದಾರೆ. ಬೇರೆ ಸಾರಿಗೆ ನಿಗಮ ಹಾಗೂ ಹೊರ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಚಾಲಕ ಹಾಗೂ ನಿರ್ವಾಹಕರು ಬಂದ್​ನಿಂದಾಗಿ ಹುಬ್ಬಳ್ಳಿಯಲ್ಲಿಯೇ ಉಳಿದುಕೊಂಡಿದ್ದಾರೆ. ಅಂಥವರಿಗೆ ಹುಬ್ಬಳ್ಳಿ ವಿಭಾಗದ ಸಿಬ್ಬಂದಿ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದಾರೆ.

    ಚದುರಿದ ನೌಕರರು: ಸಾರಿಗೆ ನೌಕರರನ್ನು ಬಂಧಿಸಲಾಗುತ್ತದೆ ಎಂಬ ಸುದ್ದಿ ಸಂಜೆ ವೇಳೆಗೆ ಹಬ್ಬಿತ್ತು. ಇದೇ ವೇಳೆ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಂದೋಬಸ್ತ್​ನಲ್ಲಿದ್ದ ಸಿಬ್ಬಂದಿಯನ್ನು ಮಾತನಾಡಿಸಿ ಪರಿಸ್ಥಿತಿಯನ್ನು ತಿಳಿದುಕೊಂಡು ಹೋದರು. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಬೆಳಗ್ಗೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಸಾರಿಗೆ ನೌಕರರು ಸಂಜೆ ವೇಳೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದ್ದರು. ಬಂಧನ ಭೀತಿಯೇ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡದಿದ್ದರೆ ಯಾರನ್ನೂ ಬಂಧಿಸುವ ಉದ್ದೇಶವಿಲ್ಲ; ರಕ್ಷಣೆ ನೀಡುವುದಷ್ಟೇ ತಮ್ಮ ಕೆಲಸ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts