More

    ಚೀನಾದಿಂದ ಭಾರತಕ್ಕೆ ಎರಡನೇ ವಿಮಾನ: ಕೊರೊನಾ ಭಯದಲ್ಲಿದ್ದ 323 ಭಾರತೀಯರು ಸ್ವದೇಶಕ್ಕೆ ವಾಪಸ್​

    ನವದೆಹಲಿ: ಕೊರೊನಾ ವೈರಸ್​ ದಾಳಿ ಎದುರಿಸುತ್ತಿರುವ ಚೀನಾದಿಂದ ಭಾರತೀಯರನ್ನು ಹೊತ್ತು ತಂದ ಎರಡನೇ ವಿಮಾನ ಇಂದು ದೆಹಲಿಯಲ್ಲಿ ಭೂಸ್ಪರ್ಷ ಮಾಡಿದೆ. ಏಳು ಮಾಲ್ಡೀವ್ಸ್ ​ನಾಗರಿಕರು ಸೇರಿದಂತೆ 323 ಭಾರತೀಯರನ್ನು ಸುರಕ್ಷಿತವಾಗಿ ಚೀನಾದಿಂದ ಭಾರತಕ್ಕೆ ತಂದಿಳಿಸಲಾಗಿದೆ.

    ಇಂದು ಮುಂಜಾನೆ 3.10ಕ್ಕೆ ವಿಮಾನವು ಚೀನಾದ ವುಹಾನ್​ನಿಂದ ಹೊರಟಿತ್ತು. ಬೆಳಗ್ಗೆ 9.45ಕ್ಕೆ ಸರಿಯಾಗಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಭೂಸ್ಪರ್ಷ ಮಾಡಿದೆ. ಒಟ್ಟು 323 ಭಾರತೀಯರಿದ್ದ ವಿಮಾನದಲ್ಲಿ 211 ವಿದ್ಯಾರ್ಥಿಗಳು ಹಾಗೂ ಇಬ್ಬರು ಮಕ್ಕಳು ಇದ್ದರು ಎನ್ನಲಾಗಿದೆ. ಮಾಲ್ಡೀವ್ಸ್​ನ ಏಳು ನಾಗರಿಕರನ್ನು ವಿಮಾನ ಹೊತ್ತು ತಂದಿದೆ. ಈ ವಿಚಾರವಾಗಿ ಕೃತಜ್ಞತೆ ತಿಳಿಸಿರುವ ಮಾಲ್ಡೀವ್ಸ್​ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿ, “ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಡಾ.ಎಸ್​.ಜಯಶಂಕರ್​ ಅವರಿಗೆ ಧನ್ಯವಾದಗಳು. ರಾಯಭಾರಿಗಳಾದ ವಿಕ್ರಮ್ ಮಿಸ್ರಿ ಮತ್ತು ಸುಂಜಯ್ ಸುಧೀರ್ ಮತ್ತು ಅವರ ತಂಡಗಳಿಗೆ ವಿಶೇಷ ಧನ್ಯವಾದಗಳು” ಎಂದು ಟ್ವೀಟ್​ ಮಾಡಿದ್ದಾರೆ.

    ಎರಡನೆಯ ವಿಮಾನದಲ್ಲಿ ಭಾರತೀಯರನ್ನು ಹತ್ತಿಸಿಕೊಳ್ಳುವ ಸಮಯದಲ್ಲಿ ನಾಲ್ವರು ಭಾರತೀಯರಲ್ಲಿ ವಿಪರೀತ ಉಷ್ಣತೆ ಕಂಡುಬಂದ ಕಾರಣ ಅವರನ್ನು ವಿಮಾನದೊಳಗೆ ಹತ್ತಿಸಿಕೊಳ್ಳಲಾಗಿಲ್ಲ. ಮೊನ್ನೆ ಚೀನಾದಿಂದ ಭಾರತಕ್ಕೆ ಭಾರತೀಯರನ್ನು ಕರೆತರಲು ಮೊದಲ ವಿಮಾನ ತೆರಳಿದ್ದಾಗ ಅಲ್ಲಿ ಆರು ಭಾರತೀಯರಲ್ಲಿ ಹೆಚ್ಚಿನ ಉಷ್ಣತೆ ಕಂಡುಬಂದಿದ್ದು ಅವರನ್ನು ಅಲ್ಲಿಯೇ ಬಿಟ್ಟು ಬರಲಾಗಿತ್ತು.

    ಇದೀಗ ವುಹಾನ್​ನಿಂದ ಭಾರತಕ್ಕೆ ಬಂದಿರುವ ಭಾರತೀಯರನ್ನು ದೆಹಲಿ ಬಳಿಯ ಮಾನೇಸರ್​ನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಸೌಲಭ್ಯವೊಂದರಲ್ಲಿ ಇಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts