More

    ಮಿತಿ ಮೀರಿದ ಕಾಡಾನೆಗಳ ಹಾವಳಿ

    ಶನಿವಾರಸಂತೆ; ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ರೈತರು ಅಳಲು ತೋಡಿಕೊಂಡರು.

    ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಈ ಕುರಿತು ಮಾತನಾಡಿ ರೈತರು, ಹಾಸನ ಜಿಲ್ಲೆಯ ಆಲೂರು ಮತ್ತು ಯಸಳೂರು ಮೀಸಲು ಅರಣ್ಯ ಮೂಲಕವಾಗಿ ಕಟ್ಟೆಪುರ ಮೀಸಲು ಅರಣ್ಯಕ್ಕೆ ಬರುವ ಕಾಡಾನೆಗಳು ಜಿಲ್ಲೆಯ ಕಟ್ಟೆಪುರ, ಹಂಪಾಪುರ, ಜರ್ನಾದನಹಳ್ಳಿ, ಯಸಳೂರು, ಬಿಳಹ, ಬೆಂಬಳೂರು, ಮಾದ್ರೆ, ಖ್ಯಾತೆ ಹಾಗೂ ಶನಿವಾರಸಂತೆ ವ್ಯಾಪ್ತಿಯ ಬಾಣಾವಾರ, ಆಲದಮರ, ಆಲೂರು-ಸಿದ್ದಾಪುರದಲ್ಲಿ ಸಂಚರಿಸುತ್ತಿವೆ. ಐದಾರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕಾಡಾನೆಗಳ ಹಿಂಡು ಕಾಫಿ, ಬಾಳೆ ತೋಟ, ಹೊಲಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತವೆ. ಇದರಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತಿರುಗಾಡಲು ಭಯಪಡುವಂತಾಗಿದೆ ಎಂದು ಗಣೇಶ್ ಅಲವತ್ತುಕೊಂಡರು.

    ಶನಿವಾರಸಂತೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಡುವ ಕಾಡಾನೆಗಳು ನಿತ್ಯ ಬಾಳೆತೋಟ, ಜೋಳ, ಸಿಹಿಗೆಣಸು, ಶುಂಟಿ, ಫಸಲನ್ನು ತುಳಿದು ಧ್ವಂಸಗೊಳಿಸುತ್ತವೆ. ರಸ್ತೆಯಲ್ಲೇ ರಾಜಾರೋಷವಾಗಿ ತಿರುಗಾಡುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಇಷ್ಟಾದರೂ ಆನೆಗಳ ಹಾವಳಿಯನ್ನು ನಿಯಂತ್ರಿಸದಿರುವ ಬಗ್ಗೆ ಈ ಭಾಗದ ರೈತರು ಮತ್ತು ಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಅರಣ್ಯ ಇಲಾಖೆಯಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ರೈತರು ಅರೋಪಿಸಿದರು.

    ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 4 ವರ್ಷದ ಹಿಂದೆ ಅರಣ್ಯ ಇಲಾಖೆಯಿಂದ ಒಂದೆರಡು ಪುಂಡಾನೆಗಳನ್ನು ಸೆರೆಹಿಡಿಯಲಾಗಿದ್ದರೂ ಕಾಡಾನೆಗಳ ಹಾವಳಿ ಮಾತ್ರ ನಿಯಂತ್ರಣವಾಗಿಲ್ಲ. ಕಾಡಾನೆ ಹಾವಳಿ ಹೆಚ್ಚಾಗಿರುವ ಕಡೆಗಳಲ್ಲಿ ಕಂದಕ ಹಾಗೂ ಸೋಲಾರ್ ಬೇಲಿ ನಿರ್ಮಿಸಿದೆಯಾದರೂ ಕೆಲವು ಕಡೆಗಳಲ್ಲಿ ಕಂದಕ ನಿರ್ಮಾಣ ಮಾಡುವಾಗ ದೊಡ್ಡ್ಡ ಬಂಡೆಕಲ್ಲುಗಳು ಸಿಗುವುದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಇದರಿಂದ ಕೆಲವು ಕಾಡಾನೆಗಳು ಕಂದಕದಲ್ಲಿರುವ ಬಂಡೆಕಲ್ಲುಗಳನ್ನು ದಾಟಿಕೊಂಡು ಗ್ರಾಮದೊಳಗೆ ಸಲೀಸಾಗಿ ನುಗ್ಗುತ್ತಿವೆ ಎಂದು ಕೃಷಿಕ ಸಂತೋಷ್ ದೂರಿದರು.

    ಗೋಪಾಲಪುರ, ಕೊಡ್ಲಿಪೇಟೆ, ಎಳನೀರುಗುಂಡಿ, ಹಿತ್ಲುಕೇರಿ ಗ್ರಾಮದಲ್ಲಿ ಕಾಡಾನೆಗಳು ಸಂಚರಿಸುತ್ತಿರುವ ಬಗ್ಗೆ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಸೂಚನಾ ಫಲಕ ಮತ್ತು ಬ್ಯಾನರ್‌ಗಳನ್ನು ಅಳವಡಿಸಿ ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು. ಆದರೆ ರಾತ್ರಿ ವೇಳೆ ಕಾಡಾನೆಗಳು ಫಲಕ ಮತ್ತು ಬ್ಯಾನರ್‌ಗಳನ್ನು ಕಿತ್ತು ಹಾಕಿದೆ. ಪ್ರಾಣಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚರ ವಹಿಸಿದರೆ ಸೂಕ್ತ ಎಂದು ರಕ್ಷಿತ್ ಆಗ್ರಹಿಸಿದರು.

    ಕಾಡಾನೆಗಳು ಸಂಚರಿಸುವುದರನ್ನು ಕೆಲ ಯವಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದು, ಆ ಕಾಡಾನೆಗಳು ದಾಳಿ ಮಾಡಲು ಮುನ್ನುಗ್ಗುತ್ತವೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅಶ್ವತ್ಥ್ ಒತ್ತಾಯಿಸಿದರು.

    ಭಯದ ವಾತಾವರಣ ನಿರ್ಮಾಣ
    ಶನಿವಾರಸಂತೆ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಕಾಟ ಹೆಚ್ಚಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಕಾಫಿ, ಬಾಳೆತೋಟ, ಶುಂಠಿ, ಗದ್ದೆಗಳಿಗೆ ಬಂದು ಕೃಷಿ ಫಸಲುಗಳನ್ನು ತುಳಿದು ಧ್ವಂಸಗೊಳಿಸುತ್ತಿವೆ. ಅಲ್ಲದೆ ಹಗಲು ವೇಳೆಯಲ್ಲೂ ತಿರುಗಾಡುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.
    ಅಶ್ವತ್ಥ್ ಕೃಷಿಕ, ಶನಿವಾರಸಂತೆ

    ವೈಜ್ಞಾನಿಕ ತಂತ್ರಜ್ಞಾನ ಬಳಕೆಯಾಗಲಿ
    ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಇದರ ಬದಲಿಗೆ ಕಾಡಾನೆಗಳನ್ನು ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳಬೇಕು. ವೈಜ್ಞಾನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆ ಮಾಡಬೇಕು. ಹಳೆಯ ಪದ್ಧತಿಯಂತೆ ಯಾವುದೇ ಅನುಕೂಲವಿಲ್ಲ. ಬೆಳೆ ಹಾನಿಗೆ ಒಂದಷ್ಟು ಪರಿಹಾರ ನೀಡಿ ಕೈ ತೊಳೆದುಕೊಳ್ಳುವುದು ಸರಿಯಲ್ಲ.
    ರಕ್ಷಿತ್ ಕೊಡಗು ಜಿಲ್ಲಾಧ್ಯಕ್ಷ, ಮಲೆನಾಡು ರಕ್ಷಣಾ ವೇದಿಕೆ

    ಸೆರೆ ಹಿಡಿಯಲು ಪರವಾನಗಿ ನೀಡುತ್ತಿಲ್ಲ
    ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ವೇಳೆಯಲ್ಲಿ ಕಾಡಾನೆಗಳು ಯಸಳೂರು ಮೀಸಲು ಅರಣ್ಯಕ್ಕೆ ಬಂದು ಅಲ್ಲಿಂದ ನೇರವಾಗಿ ನಮ್ಮ ಗದ್ದೆಗಳಿಗೆ ಬರುತ್ತಿದೆ. ಹಾಸನ ಭಾಗದಲ್ಲಿ ಕಾಡಾನೆಗಳನ್ನು ಹಿಡಿಯಲು ಆಗಿಂದಾಗ್ಗೆ ಪರವಾನಗಿ ನೀಡುತ್ತಾರೆ. ಆದರೆ ನಮ್ಮಲ್ಲಿ ಅವಕಾಶ ನೀಡುತ್ತಿಲ್ಲ.
    ಜಯಪ್ಪ ಖ್ಯಾತೆ ಗ್ರಾಮಸ್ಥ

    ರಸ್ತೆಯಲ್ಲಿ ಸಂಚರಿಸಲು ಭಯ
    ಕಾಡಾನೆ ಕಾಟ ಹೆಚ್ಚಾಗುತ್ತಿದೆ. ರಾತ್ರಿ, ಬೆಳಗಿನ ಜಾವದಲ್ಲೂ ಕಾಣಿಸಿಕೊಳ್ಳುತ್ತವೆ. ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತಿದೆ. ಯಸಳೂರು ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ನಂತರ ಕೊಡ್ಲಿಪೇಟೆಯ ಸುತ್ತಮುತ್ತಲಿನ ಅರಣ್ಯದಲ್ಲಿ ಹೆಚ್ಚಾಗಿದೆ. ಜಿಲ್ಲೆಯ ಈ ಭಾಗದಲ್ಲಿ ಕಾಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು.
    ಗಣೇಶ್ ಖ್ಯಾತೆ ಗ್ರಾಮಸ್ಥ

    ಹಾಳಾಗಿರುವ ಸೋಲಾರ್ ಬೇಲಿ
    ಕೊಡ್ಲಿಪೇಟೆ ಭಾಗದ ಕೆಲ ಗ್ರಾಮಗಳು ಕಾಡಾನೆಗಳ ವಾಸಸ್ಥಳವಾಗಿದೆ. ಕಾಡಾನೆಗಳು ನಾಡಿಗೆ ಬರದಂತೆ ಸೋಲಾರ್ ಬೇಲಿ ಅಳವಡಿಸಲಾಗಿದೆಯಾದರೂ ಸರಿಯಾಗಿ ನಿರ್ವಹಣೆ ಮಾಡದೆ ಹಾಳಾಗಿದೆ. ಇದರಿಂದ ಕಾಡಾನೆ ನೇರವಾಗಿ ಬೆಳೆಗಳ ಮೇಲೆ ದಾಳಿ ಮಾಡುತ್ತಿದೆ. ಇದೇ ರೀತಿ ಮುಂದುವರಿದರೆ ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ.
    ಸಂತೋಷ್ ಕೋಣಿಗನಹಳ್ಳಿ ಬೆಸ್ಸೂರು

    ಜಂಟಿ ಕಾರ್ಯಾಚರಣೆ ಅಗತ್ಯ
    ನಮ್ಮ ಗ್ರಾಮ ಹಾಸನ-ಕೊಡಗು ಗಡಿಭಾಗದಲ್ಲಿದೆ. ಹಾಸನ ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಅಲ್ಲಿಂದ ನೇರವಾಗಿ ಬರುವ ಕಾಡಾನೆಗಳು ಗದ್ದೆಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಮುಂದೆ ಕಾರ್ಯಾಚರಣೆ ಮಾಡಬೇಕಾದರೆ ಕೊಡಗು ಮತ್ತು ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆಗೆ ಇಳಿಯಬೇಕು.
    ನಾಗೇಶ್ ಖ್ಯಾತೆ ಗ್ರಾಮ

    ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
    ಪ್ರತಿ ವರ್ಷ ನಾವು ಕಾಡಾನೆಗಳಿಂದ ಬೆಳೆಯನ್ನು ಕಳೆದುಕೊಳ್ಳುತಿದ್ದೇವೆ. ಪ್ರತಿ ಬಾರಿಯೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಾಣ ಮಾಡಿ ಸುಮ್ಮನಾಗುತ್ತಿದ್ದಾರೆ. ಕಾಡಾನೆಗಳೊಂದಿಗೆ ನಾವು ಹೋರಾಟ ಮಾಡುವಂತಾಗಿದೆ. ಹಗಲು ದುಡಿಯುವುದು, ರಾತ್ರಿ ಕಾಡಾನೆ ಬರದಂತೆ ಗದ್ದೆ, ತೋಟಗಳಲ್ಲಿ ಕಾವಲು ಕೂರುವ ಪರಿಸ್ಥಿತಿ ನಮ್ಮದಾಗಿದೆ.
    ರವಿ ಖ್ಯಾತೆ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts