More

    ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಹಿರಿದು

    ಬಾಗಲಕೋಟೆ: ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಶಸ ಪಡೆಗಳ ಧ್ವಜಗಳನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಗುರುವಾರ ಅನಾವರಣಗೊಳಿಸಿದರು.

    ಡಿಸಿ ಜಾನಕಿ ಕೆ.ಎಂ. ಮಾತನಾಡಿ, ದೇಶದಲ್ಲಿ ಸೈನಿಕರ ಪಾತ್ರ ಮಹತ್ವವಾಗಿದ್ದು, ಸೈನಿಕರು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶ ರಕ್ಷಣೆಗಾಗಿ ವೀರಮರಣ ಹೊಂದಿದ ಯೋಧರ ಕುಟುಂಬಗಳಿಗಾಗಿ ಹಾಗೂ ದೇಶದ ರಕ್ಷಣಾ ಪಡೆ ಉನ್ನತಿಗಾಗಿ ಧ್ವಜನಿಧಿ ಸಂಗ್ರಹಣೆಯಿಂದ ಬಂದ ಮೊತ್ತ ಬಳಕೆಯಾಗುತ್ತದೆ. ಎಲ್ಲ ನಾಗರಿಕರು ಧ್ವಜನಿಧಿ ಸಂಗ್ರಹಣೆಯಲ್ಲಿ ಸ್ವ-ಇಚ್ಛೆಯಿಂದ ಪಾಲ್ಗೊಳ್ಳಲು ತಿಳಿಸಿದರು.

    ಪ್ರತಿ ವರ್ಷ ಜಿಲ್ಲೆಗೆ ಒಟ್ಟು 4 ಲಕ್ಷ ರೂ. ಗುರಿ ನಿಗದಿ ಇದ್ದು, ಕಳೆದ ವರ್ಷ ಗುರಿಗಿಂತ ಹೆಚ್ಚು ಧ್ವಜ ಮಾರಾಟ ಮಾಡಿ ನಿಧಿ ಸಂಗ್ರಹಿಸಲಾಗಿದೆ. ಗುರಿ ಸಾಧನೆಯಿಂದಾಗಿ ರಾಜಭವನಕ್ಕೆ ಜಿಲ್ಲಾಧಿಕಾರಿಗಳನ್ನು ಕರೆಯಿಸಿ ಪಾರಿತೋಷಕ ನೀಡಿದ್ದಾರೆ ಎಂದು ಸೈನಿಕ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ಹಾಗೂ ತಹಸೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದಾಗ ಪ್ರಸಕ್ತ ವರ್ಷವೂ ಗುರಿಗಿಂತ ಹೆಚ್ಚು ಧ್ವಜನಿಧಿ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲು ಹೇಳಿದರು.

    ಮಾಜಿ ಸೈನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಅವರ ಬೇಡಿಕೆಗಳನ್ನು ಪಟ್ಟಿ ಮಾಡಿಕೊಡಲು ಅಮರೇಶ ಪಮ್ಮಾರ ಅವರಿಗೆ ಸೂಚಿಸಿದರು. ಮುಖ್ಯವಾಗಿ ಮಾಜಿ ಸೈನಿಕರಿಗೆ ಕಲಾಭವನ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ. ಇನ್ನೂ ಕಟ್ಟಡ ನಿರ್ಮಾಣ ಕಾರ್ಯ ಶುರುವಾಗಿಲ್ಲ ಎಂದು ತಿಳಿಸಿದಾಗ ಸಂಬಂಧಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ಡಿಸಿ ವಿಚಾರಿಸಿದರು. ಅನುಮೋದನೆ ಪತ್ರ ಬಂದಿದೆ, ಹೊರತು ಅದಕ್ಕೆ ಸಂಬಂಧಿಸಿದ ಅನುದಾನ ಬಂದಿಲ್ಲ. ಅನುದಾನ ಬಿಡುಗಡೆಯಾದ ಮೇಲೆ ಕೆಲಸ ಪ್ರಾರಂಭಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು.

    ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ಮಾಜಿ ಸೈನಿಕರು, ಹುತಾತ್ಮ ಯೋಧರ ಕುಟುಂಬಕ್ಕೆ ಹಾಗೂ ಅಂಗವಿಕಲರಿಗೆ ನಿವೇಶನ ಕೊಡುವುದಾಗಿ ತಿಳಿಸಿದ್ದು, ಇಲ್ಲಿಯವರೆಗೆ ಯಾರಿಗೂ ನಿವೇಶನ ನೀಡಿಲ್ಲ. ಮೂರನೇ ಯೂನಿಟ್ ಅಭಿವೃದ್ಧಿಗೊಳ್ಳುತ್ತಿದ್ದು, ಮಾಜಿ ಸೈನಿಕರಿಗೆ ನಿವೇಶನ ಮೀಸಲಿರಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮಾಜಿ ಸೈನಿಕರು ಕೋರಿದರು. ಸೈನಿಕ ಮಂಡಳಿ ಸಭೆ ಸಹ ನಡೆದಿಲ್ಲ. ಸಭೆ ನಡೆಸುವ ಕುರಿತು ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 10ನೇ ತರಗತಿವರೆಗೆ ಮಾತ್ರವಿದ್ದು, 12 ತರಗತಿವರೆಗೆ ವಿಸ್ತರಣೆ ಮಾಡಲು ಕ್ರಮವಹಿಸುವಂತೆ ಮಾಜಿ ಸೈನಿಕರು ಮನವಿ ಮಾಡಿದರು.

    ಸೈನಿಕ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಸುಬೇದಾರ ರಾಠೋಡ ಸೇರಿ ಮಾಜಿ ಸೈನಿಕರು, ಹುತಾತ್ಮ ಯೋಧರ ಕುಟುಂಬಸ್ಥರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರ್ಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts