More

    ಮುಂದೇನು ಎಂಬುದೇ ಪ್ರಶ್ನೆ!

    ಬೆಂಗಳೂರು: ಕನ್ನಡ ಚಿತ್ರರಂಗ ಸ್ವಲ್ಪ ನಿಟ್ಟುಸಿರುಬಿಟ್ಟಿದೆ. ಲಾಕ್​ಡೌನ್​ನಿಂದಾಗಿ ಕಳೆದ ಎರಡು ತಿಂಗಳುಗಳಿಂದ ಎಲ್ಲಾ ತರಹದ ಚಟುವಟಿಕೆಗಳನ್ನು ಬಂದ್ ಮಾಡಿದ ಚಿತ್ರರಂಗ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಬಹುದು ಎಂದು ಸರ್ಕಾರ ಹೇಳುತ್ತಿದ್ದಂತೆಯೇ ಗರಿಗೆದರಿದೆ. ಸದ್ದಿಲ್ಲದೆ ಹಲವು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.

    ಹೌದು, ಅರ್ಧಕ್ಕೆ ನಿಂತಿದ್ದ ಹಲವು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂದುವರೆದಿವೆ. ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಡಬ್ಬಿಂಗ್ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಗಣೇಶ್, ದಿಗಂತ್ ಮುಂತಾದವರು ಡಬ್ಬಿಂಗ್​ನಲ್ಲಿ ಭಾಗವಹಿಸಿದ್ದಾರೆ. ಇನ್ನು ‘ಕೆಜಿಎಫ್ – ಚಾಪ್ಟರ್ 2’ ಚಿತ್ರದ ಸಂಗೀತದ ಕೆಲಸಗಳು ನಡೆಯುತ್ತಿರುವ ವಿಚಾರ ಗೊತ್ತೇ ಇದೆ. ಹೀಗೆ ಬೆಂಗಳೂರಿನ ಹಲವು ಸ್ಟುಡಿಯೋಗಳಲ್ಲಿ ಹಲವು ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ಕೆಲವು ಚಿತ್ರತಂಡಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆಂಧ್ರ ಸೇರಿದಂತೆ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವುದರಿಂದ ಮತ್ತು ಅಲ್ಲಿನ್ನೂ ಕೆಲಸಕ್ಕೆ ಅನುಮತಿ ನೀಡಿಲ್ಲವಾದ್ದರಿಂದ, ಆ ಚಿತ್ರಗಳ ಕೆಲಸ ಇನ್ನಷ್ಟೇ ಶುರುವಾಗಬೇಕಿದೆ. ಈ ಮಧ್ಯೆ, ಇನ್ನೂ ಚಿತ್ರ ಪ್ರದರ್ಶನ ಯಾವಾಗಿನಿಂದ ಪ್ರಾರಂಭವಾಗುತ್ತದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲದಿರುವುದಿರಂದ, ಲಾಕ್​ಡೌನ್ ಸಂಪೂರ್ಣವಾಗಿ ಮುಗಿದು, ಎಲ್ಲಾ ಒಂದು ಹಂತಕ್ಕೆ ಬಂದ ಮೇಲೆ ಕೆಲಸ ಶುರು ಮಾಡುವ ಯೋಚನೆಯಲ್ಲಿ ಹಲವು ಚಿತ್ರತಂಡಗಳಿವೆ.

    ಇದನ್ನೂ ಓದಿ  ಅಂಫಾನ್ ಚಂಡಮಾರುತ ಸಂತ್ರಸ್ತರ ರಕ್ಷಣೆ ವೇಳೆಯೂ ಕರೊನಾ ನಿಯಮ ಪಾಲನೆ!

    ಬಿಡುಗಡೆಯಲ್ಲಿ ಏರುಪೇರು

    ಚಿತ್ರ ಪ್ರದರ್ಶನ ಯಾವಾಗ ಪ್ರಾರಂಭ ಎಂಬ ಅನಿಶ್ಚಿತತೆ ಒಂದು ಕಡೆ. ಪ್ರದರ್ಶನ ಪ್ರಾರಂಭವಾದರೂ ಜನ ಬರುತ್ತಾರಾ ಎಂಬ ಭಯ ಇನ್ನೊಂದು ಕಡೆ. ಇದೆಲ್ಲದರಿಂದ ಚಿತ್ರದ ಬಿಡುಗಡೆಯಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು, ದೊಡ್ಡ ದೊಡ್ಡ ಚಿತ್ರಗಳ ಬಿಡುಗಡೆ ಇನ್ನೇನಿದ್ದರೂ ಜುಲೈ ತಿಂಗಳ ಕೊನೆಗೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸರಿಯಾಗಿ ಜುಲೈ 31ರಂದು ವರಮಹಾಲಕ್ಷ್ಮೀ ಹಬ್ಬವಿದೆ. ಅಲ್ಲಿಂದ ಒಂದರಹಿಂದೊಂದು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಗಂತ ಆಗಸ್ಟ್​ನಿಂದ ಎಲ್ಲವೂ ಸರಿಹೋಗಲಿದೆ ಎಂದು ಹೇಳುವುದು ಕಷ್ಟ. ಕರೊನಾ ಆರ್ಭಟ ಇದೇ ರೀತಿ ಮುಂದುವರೆದಲ್ಲಿ, ಆಗ ಚಿತ್ರ ಪ್ರದರ್ಶನ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳೂ ಇವೆ.

    ಮಳೆಗಾಲ ಬೇರೆ ಮುಂದಿದೆ

    ಈ ಕುರಿತು ಮಾತನಾಡುವ ‘ರಾಬರ್ಟ್’ ನಿರ್ದೇಶಕ ತರುಣ್ ಸುಧೀರ್, ‘ನಮ್ಮ ಚಿತ್ರ ಸಿದ್ಧವಿದೆ. ಸೆನ್ಸಾರ್​ಗೂ ಅಪ್ಲೈ ಮಾಡಲಾಗಿದೆ. ಸೆನ್ಸಾರ್​ನಿಂದ ಪ್ರಮಾಣ ಪತ್ರ ಸಿಕ್ಕರೂ, ಚಿತ್ರದ ಬಿಡುಗಡೆ ಯಾವಾಗ ಎಂದು ಹೇಳುವುದು ಕಷ್ಟ. ಏಕೆಂದರೆ, ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಜೂನ್, ಜುಲೈ ಎಂದರೆ ಸಹಜವಾಗಿಯೇ ಭಯವಿರುತ್ತದೆ. ಮಳೆಗಾಲವಾದ್ದರಿಂದ ಜನ ಬರುತ್ತಾರೋ, ಇಲ್ಲವೋ ಎಂಬ ಆತಂಕ ಇರುತ್ತದೆ. ಈಗ ಅದರ ಜತೆಗೆ ಕರೊನಾ ಆತಂಕವೂ ಇರುವುದರಿಂದ, ಚಿತ್ರ ಪ್ರದರ್ಶನ ಯಾವಾಗನಿಂದ ಶುರುವಾಗುತ್ತದೆ ಎಂದು ಹೇಳುವುದೇ ಕಷ್ಟ. ಹಾಗಾಗಿ ಚಿತ್ರದ ಬಿಡುಗಡೆಯ ಬಗ್ಗೆ ನಾವಿನ್ನೂ ಯಾವುದೇ ಪ್ಲಾನ್ ಮಾಡಿಲ್ಲ’ ಎಂದು ಹೇಳುತ್ತಾರೆ.

    ಬಿಡುಗಡೆ ಸ್ಪಷ್ಟತೆ ಇಲ್ಲ

    ಇನ್ನು ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ದರ್ಶನ್ ಅಭಿನಯದ ‘ರಾಬರ್ಟ್’, ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’, ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ಧ್ರುವ ಸರ್ಜಾ ಅಭಿನಯದ ‘ಪೊಗರು’, ‘ದುನಿಯಾ’ ವಿಜಯ್ ಅಭಿನಯದ ‘ಸಲಗ’ ಮುಂತಾದ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ, ಸದ್ಯಕ್ಕೆ ಯಾವಾಗ ಬಿಡುಗಡೆ ಎಂದು ಚಿತ್ರತಂಡದವರಿಗೂ ಸ್ಪಷ್ಟತೆ ಇಲ್ಲ.

    ಈಗಲೇ ಏನು ಪ್ಲಾನ್ ಮಾಡಿದರೂ ಪ್ರಯೋಜನವಿಲ್ಲ. ಮೊದಲಿಗೆ ಚಿತ್ರ ಪ್ರದರ್ಶನ ಪ್ರಾರಂಭವಾಗಬೇಕು. ಆ ನಂತರದ ಸ್ಥಿತಿ-ಗತಿಗಳನ್ನೆಲ್ಲಾ ನೋಡಿಕೊಂಡು, ದೊಡ್ಡ ಚಿತ್ರಗಳ ನಿರ್ವಪಕರೆಲ್ಲಾ ಮಾತಾಡಿಕೊಂಡು, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಹಾಗಾಗಿ ಈಗಲೇ ಹೇಳುವುದು ಕಷ್ಟ.

    ಸೂರಪ್ಪ ಬಾಬು ‘ಕೋಟಿಗೊಬ್ಬ 3’ ನಿರ್ಮಾಪಕ

    ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts