More

    ಸಮಸ್ಯೆ ಇತ್ಯರ್ಥಕ್ಕೆ ಕಾಲಾವಕಾಶ ಬೇಕು

    ಗದಗ: ಪಂಚಮಸಾಲಿ 2ಎ ಮೀಸಲಾತಿಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರುವ ಹೋರಾಟವನ್ನು ಸ್ವಾಗತಿಸುತ್ತೇನೆ. ಆದರೆ, ಇಂತಹ ಕ್ಲಿಷ್ಟಕರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಕಾಲಾವಕಾಶ ಬೇಕು. ಈ ಕುರಿತು ಸ್ವಾಮೀಜಿ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೀಸಲಾತಿ ನೀಡುವ ಕುರಿತು ಪೂರಕವಾಗಿ ಸ್ಪಂದಿಸಿದ್ದಾರೆ. ಈಗಾಗಲೇ ನಾನು ಮತ್ತು ಸಚಿವ ಮುರಗೇಶ ನಿರಾಣಿ ಇಬ್ಬರು ಸೇರಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ರ್ಚಚಿಸಿದ್ದೇವೆ. ಮೀಸಲಾತಿ ನೀಡುವ ವಿಚಾರದಲ್ಲಿ ಕಾನೂನು ತೊಡಕು ಎದುರಾಗುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಸ್ವಾಮೀಜಿ ಅವರು ಸಮಯಾವಕಾಶ ನೀಡಬೇಕು. ಸಮಾಜ ಬಾಂಧವರು ಅವಸರ ಮಾಡಬಾರದು’ ಎಂದು ಮನವಿ ಮಾಡಿದರು.

    ಪಂಚಮಸಾಲಿ 2ಎ ಮೀಸಲಾತಿ ಹೋರಾಟವನ್ನು ವಿಜಯೇಂದ್ರ ಹತ್ತಿಕ್ಕಲು ಮುಂದಾಗಿದ್ದಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಆರೋಪ ಮಾಡುತ್ತಿದ್ದಾರೆ ಎಂದರು.

    ಸಿಎಂ ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರು. ಅವರಲ್ಲಿ ಇಂತಹ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಇದೆ. ಹೀಗಾಗಿಯೇ ಅನೇಕ ಸಮಾಜದವರು ಅವರ ಮುಂದೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಇವರಿಂದಲೇ ನಮಗೆ ಮೀಸಲಾತಿ ಸಿಗಬಹುದು ಎಂಬ ವಿಶ್ವಾಸವು ಹೋರಾಟ ಮಾಡುತ್ತಿರುವ ಸಮಾಜದ ಮುಖಂಡರಲ್ಲಿದೆ. ಹೀಗಾಗಿ, ಮುಖ್ಯಮಂತ್ರಿ ಅವರು ಇದೀಗ ಉದ್ಭವಿಸಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇಕ್ಕಟ್ಟಿಗೆ ಸಿಲುಕುವ ಪ್ರಶ್ನೆಯೇ ಇಲ್ಲ ಎಂದು ಅವರು ವಿವರಿಸಿದರು.

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸಮುದಾಯವನ್ನು ಒಡೆಯುವ ಕೆಲಸ ಮಾಡಿದರು. ಆದರೆ, ಬಿಎಸ್​ವೈ ಅವರು ಎಲ್ಲ ಸಮಾಜಗಳಿಗೂ ಇತಿಮಿತಿಯೊಳಗೆ ಸೌಲಭ್ಯ ನೀಡಲು ಸರ್ವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.

    ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂದು ಆರೋಪಿಸುತ್ತಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದು ನೋಡಿಕೊಳ್ಳಲಿ. ಸಿದ್ದರಾಮಯ್ಯ ಬಣ, ಡಿ.ಕೆ. ಶಿವಕುಮಾರ ಬಣ, ಪರಮೇಶ್ವರ ಬಣ ಎಂದು ಕಾಂಗ್ರೆಸ್​ನಲ್ಲಿ ಸೃಷ್ಟಿಯಾಗಿವೆ. ಹೀಗಾಗಿ, ತಮ್ಮ ಪಕ್ಷದಲ್ಲಿ ಎಷ್ಟು ಬಾಗಿಲುಗಳಿವೆ ಎಂದು ಲೆಕ್ಕ ಹಾಕಲಿ ಎಂದು ಸಚಿವ ಸಿ.ಸಿ. ಪಾಟೀಲ ತಿರುಗೇಟು ನೀಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts