More

    ಗಂಗಾ ವಿಲಾಸ ಐಷಾರಾಮಿ ನೌಕೆಗೆ ಇಂದು ಪ್ರಧಾನಿ ಚಾಲನೆ; ದೇಶದ ಅತಿ ದೀರ್ಘ ಒಳನಾಡು ಪ್ರಯಾಣ ಶುರು | 3,200 ಕಿ.ಮೀ. ಉದ್ದದ ಮಾರ್ಗ

    ನವದೆಹಲಿ: ವಾರಾಣಸಿಯಿಂದ ಅಸ್ಸಾಂನ ದಿಬ್ರೂಗಢದ ವರೆಗೆ ಬಾಂಗ್ಲಾದೇಶದ ಮೂಲಕ ಸಾಗುವ ದೇಶದ ಅತ್ಯಂತ ದೊಡ್ಡ ಐಷಾರಾಮಿ ನೌಕೆ ‘ಎಂವಿ ಗಂಗಾ ವಿಲಾಸ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

    ವಾರಾಣಸಿಯ ಗಂಗಾ ನದಿಯ ಸಂತ ರವಿದಾಸ್ ಘಾಟ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ‘ಟೆಂಟ್ ಸಿಟಿ’ಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅಲ್ಲದೆ, 1,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಲವು ಒಳನಾಡು ಸಾರಿಗೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಪ್ರವಾಸೋದ್ಯಮ ಅವಕಾಶಕ್ಕೆ ಉತ್ತೇಜನ ನೀಡಲಿದೆ ಹಾಗೂ ಎರಡು ನೆರೆಹೊರೆ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಇಂಬು ಕೊಡಲಿದೆ ಎಂದು ನಿರೀಕ್ಷಿಸಲಾಗಿದೆ. ಗಂಗಾ ವಿಲಾಸ ನೌಕೆ ಒಟ್ಟು 3,200 ಕಿ.ಮೀ. ಉದ್ದದ ಮಾರ್ಗದಲ್ಲಿ ಪ್ರಯಾಣಿಸಲಿದೆ. ಇಷ್ಟು ಉದ್ದದ ಒಳನಾಡು ಮಾರ್ಗದಲ್ಲಿ ನೌಕಾ ಯಾನಕ್ಕೆ ನಡೆಯಲಿರುವ ಮೊದಲ ಪ್ರಯತ್ನ ಇದಾಗಲಿದೆ. ವಾರಾಣಸಿಯಿಂದ ಹೊರಡುವ ಐಷಾರಾಮಿ ನೌಕೆ ಬಂಗಾಳದ ಮೂಲಕ ಬಾಂಗ್ಲಾದೇಶ ಪ್ರವೇಶಿಸಿ ಅಂತಿಮ ವಾಗಿ ಅಸ್ಸಾಂನ ದಿಬ್ರೂಗಢದಲ್ಲಿ ಲಂಗರು ಹಾಕಲಿದೆ. ಮೊದಲು, ಉತ್ತರ ಪ್ರದೇಶದಲ್ಲಿರುವ ವಾರಾಣಸಿಯಿಂದ ಗಾಝಿಪುರಕ್ಕೆ ಪಯಣಿಸುವ ನೌಕೆ, ಅಲ್ಲಿಂದ ಬಕ್ಸಾರ್ ಮೂಲಕ ಬಿಹಾರ ಪ್ರವೇಶಿಸಿ ಪಟನಾ ತಲುಪಲಿದೆ. ನಂತರ ಫರಕ್ಕಾ ಮೂಲಕ ಪಶ್ಚಿಮ ಬಂಗಾಳಕ್ಕೆ ಸಾಗಿ, ಮುಂದೆ ಮುರ್ಷಿದಾಬಾದ್ ಮೂಲಕ ಕೋಲ್ಕತಾ ತಲುಪುತ್ತದೆ. ಆಮೇಲೆ, ಬಾಂಗ್ಲಾ ರಾಜಧಾನಿ ಢಾಕಾಕ್ಕೆ ತೆರಳಿ ಅಲ್ಲಿಂದ ಗುವಾಹಟಿ ಮೂಲಕ ಭಾರತಕ್ಕೆ ಮರುಪಯಣ ಆರಂಭಿಸುತ್ತದೆ.

    ವಿಶೇಷತೆ ಏನು?

    ಈ ಐಷಾರಾಮಿ ನೌಕೆಯಲ್ಲಿ 3 ಡೆಕ್​ಗಳು, 18 ಸೂಟ್​ಗಳಿವೆ. 36 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. 51 ದಿನಗಳ ಜಲ ಸಂಚಾರವು ದೇಶದ ಸಾಂಸ್ಕೃತಿಕ ಬೇರುಗಳನ್ನು ಸಂರ್ಪಸಲು ಹಾಗೂ ಅವುಗಳ ಸುಂದರ ಅಂಶಗಳನ್ನು ಆಸ್ವಾದಿಸಲು ಒಂದು ಅಪೂರ್ವ ಅವಕಾಶವಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

    32 ವಿದೇಶಿ ಪ್ರಯಾಣಿಕರು: ಶುಕ್ರವಾರ ಆರಂಭವಾಗುವ ಪ್ರಥಮ ಯಾನದಲ್ಲಿ ಸ್ವಿಜರ್ಲೆಂಡ್​ನ 32 ಪ್ರವಾಸಿಗರು ಇರುತ್ತಾರೆ. ಪಯಣದುದ್ದಕ್ಕೂ ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಪಾರ್ಕ್​ಗಳು, ನದಿ ಘಾಟ್​ಗಳ ಸಹಿತ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಜಿಸಲಾಗಿದೆ.

    ಒಬ್ಬರಿಗೆ 12.5 ಲಕ್ಷ ರೂ. ಶುಲ್ಕ: ಪೂರ್ತಿ 52 ದಿನಗಳ ಪ್ರವಾಸಕ್ಕೆ ಪ್ರತಿ ಪ್ರವಾಸಿಗರ ಟಿಕೆಟ್ ಶುಲ್ಕ 12.59 ಲಕ್ಷ ರೂ. ಆಗಿದೆ. ನೌಕೆಗೆ ರಕ್ಷಣೆ ಒದಗಿಸುವ ಹೊಣೆಯನ್ನು ಗಡಿ ಭದ್ರತಾ ಪಡೆಗೆ (ಬಿಎಸ್​ಎಫ್) ವಹಿಸಲಾಗಿದೆ. ಬಿಎಸ್​ಎಫ್ ಈಗಾಗಲೇ ಭಾರತ-ಬಾಂಗ್ಲಾದೇಶ ಗಡಿಯನ್ನು ಕಾಯುತ್ತಿದೆ. ಈ ನೌಕಾಯಾನ ಸೇವೆಗಾಗಿ ಭಾರತ ಕ್ರೂಯಿಸ್ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts