More

    ‘ಕೂಡಿ ಹಾಕಿದ್ರೆ ಊಟಕ್​ ನೀವು ತಂದ್​ ಹಾಕ್ತೀರಾ? ಹಂದಿಗಳಿಗೆ ಏನಾದ್ರೂ ತೊಂದ್ರೆ ಕೊಟ್ರೆ ನೋಡಿ’ !

    ರಾಣೆಬೆನ್ನೂರ: ಈ ಬಾರಿ ಉತ್ತಮ ಮಳೆಯಾದ ಕಾರಣ ಮೆಕ್ಕೆಜೋಳ ಭರಪೂರ ಬೆಳೆದಿದೆ. ನಗರಕ್ಕೆ ಹೊಂದಿಕೊಂಡ ಜಮೀನುಗಳಲ್ಲಿ ಈಗಾಗಲೇ ತೆನೆ ಕಟ್ಟಿದೆ. ಆದರೆ, ರಾತ್ರೋರಾತ್ರಿ ಹಿಂಡು ಹಿಂಡಾಗಿ ದಾಳಿ ಮಾಡುವ ಹಂದಿಗಳು ಸಂಪೂರ್ಣ ಬೆಳೆ ತಿಂದು ಹಾಕುತ್ತಿದ್ದು, ರೈತರ ನಿದ್ದೆಗೆಡಿಸಿದೆ.

    ನಗರದ ಹೊರವಲಯದ ಹಲಗೇರಿ ರಸ್ತೆ, ಯರೇಕುಪ್ಪಿ ರಸ್ತೆ, ದೇವರುಗಡ್ಡ ರಸ್ತೆ, ಪಿ.ಬಿ. ರಸ್ತೆ ಹಾಗೂ ಮಾಗೋಡ ರಸ್ತೆಯುದ್ದಕ್ಕೂ ಇರುವ ನೂರಾರು ಎಕರೆ ಜಮೀನುಗಳಲ್ಲಿ ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಹದವಾದ ಮಳೆಯಾದ ಹಿನ್ನೆಲೆಯಲ್ಲಿ ಬೆಳೆಗಳು ಈಗಾಗಲೇ ತೆನೆ ಕಟ್ಟಿದ್ದು, ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ.

    ಆದರೆ, ಮಾರುತಿ ನಗರ, ಕೊರಚರ ಓಣಿಗಳಲ್ಲಿ ಸಾಕಿರುವ ಹಂದಿಗಳು ರಾತ್ರಿ ಸಮಯದಲ್ಲಿ ರೈತರು ಬೆಳೆದ ಮೆಕ್ಕೆಜೋಳ ಬೆಳೆಯ ಮೇಲೆ ದಾಳಿ ಮಾಡುತ್ತಿವೆ. ಮೆಕ್ಕೆಜೋಳದ ದಂಟುಗಳನ್ನು ಬುಡಸಮೇತ ಕಿತ್ತು ಹಾಕಿ, ಕಾಳು ಕಟ್ಟಿದ ತೆನೆಗಳನ್ನು ತಿನ್ನುತ್ತಿವೆ.

    ಕಳೆದ ಒಂದು ವಾರದಿಂದ ಹಂದಿಗಳ ಕಾಟ ಹೆಚ್ಚಾಗಿದ್ದು, 50ಕ್ಕೂ ಅಧಿಕ ಎಕರೆಯಷ್ಟು ಬೆಳೆ ಹಾನಿ ಮಾಡಿವೆ. ಆದ್ದರಿಂದ ಹಂದಿಗಳ ಕಾಟ ತಡೆಯುವಂತೆ ಕೃಷಿ ಅಧಿಕಾರಿಗಳು, ಗ್ರಾಮೀಣ ಠಾಣೆ ಪೊಲೀಸರಿಗೆ, ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಹಂದಿ ಕಾಟ ತಡೆಯುವ ಬಗ್ಗೆ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.

    ಧಮ್ಕಿ ಹಾಕುವ ಮಾಲೀಕರು: ಹಂದಿಗಳು ದಾಳಿ ಮಾಡುತ್ತಿರುವ ಕುರಿತು ಅವುಗಳ ಮಾಲೀಕರಿಗೆ ತಿಳಿಸಿದರೆ, ‘ಅವು ಮೂಕ ಪ್ರಾಣಿಗಳು, ನಾವೇನು ಮಾಡಬೇಕು. ಸ್ವಲ್ಪ ತಿಂದು ಹೋಗುತ್ತವೆ. ಬಿಡಿ’ ಎನ್ನುವ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಅಲ್ಲದೆ, ಅವುಗಳನ್ನು ಕೂಡಿ ಹಾಕುವಂತೆ ಹೇಳಿದರೆ, ‘ಕೂಡಿ ಹಾಕಿದರೆ ಊಟಕ್ಕೆ ನೀವು ತಂದು ಹಾಕ್ತೀರಾ? ಹಂದಿಗಳಿಗೆ ಏನಾದರೂ ತೊಂದರೆ ಕೊಟ್ಟರೆ ನೋಡಿ’ ಎಂದು ಧಮ್ಕಿ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಆದ್ದರಿಂದ ಕೃಷಿ, ನಗರಸಭೆ ಅಧಿಕಾರಿಗಳು ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಹಂದಿಗಳ ಕಾಟದಿಂದ ರೈತರ ಬೆಳೆಗಳನ್ನು ರಕ್ಷಿಸಬೇಕಿದೆ.

    ಕಣ್ಣೀರು ಹಾಕುವ ಸ್ಥಿತಿಗೆ ರೈತ: ರೈತ ಗುಡ್ಡಪ್ಪ ಕರಿಗಾರ ಎಂಬುವರು ಹಲಗೇರಿ ರಸ್ತೆಯಲ್ಲಿ ಎಕರೆಗೆ 10 ಸಾವಿರ ರೂ.ನಂತೆ 2 ಎಕರೆ ಜಮೀನು ಲಾವಣಿ ಪಡೆದು ಮೆಕ್ಕೆಜೋಳ ಬೆಳೆದಿದ್ದಾರೆ. ಬೀಜ, ಗೊಬ್ಬರ, ಔಷಧಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಬೆಳೆ ಕೂಡ ಉತ್ತಮವಾಗಿ ಬಂದಿದೆ. ಆದರೆ, ಹಂದಿಗಳು ಮೂರ್ನಾಲ್ಕು ದಿನದಲ್ಲಿ ಸಂಪೂರ್ಣ ಬೆಳೆಯನ್ನು ತಿಂದು ಹಾಕಿವೆ. ಸರಿಯಾಗಿ ಕಣ್ಣು ಸಹ ಕಾಣದ ನಾನು ಪತ್ನಿ ಜತೆ ಕಷ್ಟಪಟ್ಟು ಮೆಕ್ಕೆಜೋಳ ಬೆಳೆದಿದ್ದೇನೆ. ಈಗ ಎಲ್ಲ ಬೆಳೆ ಹಂದಿ ಪಾಲಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಕಣ್ಣೀರು ಹಾಕುವುದೊಂದು ಬಾಕಿಯಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಹಂದಿಗಳು ಮೆಕ್ಕೆಜೋಳ ಬೆಳೆ ತಿನ್ನುತ್ತಿರುವ ಕುರಿತು ಹಾಗೂ ಹಂದಿಗಳ ದಾಳಿ ತಡೆಯುವ ಕುರಿತು ಕೃಷಿ ಸಹಾಯಕ ನಿರ್ದೇಶಕರಿಗೆ ಮತ್ತು ನಗರಸಭೆ ಅಧಿಕಾರಿಗಳಿಗೆ ತಿಳಿಸಲಾಗುವುದು. ಬೆಳೆ ಹಾನಿಯಾಗಿರುವ ಕುರಿತು ರೈತರು ಅಧಿಕೃತವಾಗಿ ಪತ್ರದಲ್ಲಿ ಬರೆದು ಕೊಡಬೇಕು.
    | ಸ್ಪೂರ್ತಿ ಜಿ.ಎಸ್., ಕೃಷಿ ಇಲಾಖೆ ಉಪ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts