More

    ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪೆನ್‌ಡ್ರೈವ್ ಪ್ರಕರಣ: ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಬಂಧನ

    ಬೆಂಗಳೂರು: ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಹಾಸನದ ಮಾಜಿ ಶಾಸಕರಾದ ಬಿಜೆಪಿಯ ಪ್ರೀತಂಗೌಡ ಅವರ ಆಪ್ತನಾದ ಎಚ್.ಪಿ.ಲಿಖಿತ್‌ಗೌಡ ಮತ್ತು ಕಚೇರಿಯ ಸಿಬ್ಬಂದಿ ಚೇತನ್ ಎಂಬಾತನನ್ನು ಶನಿವಾರ ತಡರಾತ್ರಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ವೈರಲ್ ಆಗಿದ್ದು, ‘‘ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಎಲ್ಲಿಯೂ ಹೋಗಿಲ್ಲ, ಸುರಕ್ಷಿತವಾಗಿ ಸಂಬಂಧಿಕರ ಮನೆಯಲ್ಲಿದ್ದೇನೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಎಸ್‌ಐಟಿಯಿಂದ ಇಬ್ಬರ ಬಂಧನ:
    ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ವಿಡಿಯೋ ಮತ್ತು ಪೆನ್‌ಡ್ರೈವ್ ಹಂಚಿಕೆ ಪ್ರಕರಣವು ಮಹತ್ವದ ತಿರುವು ಪಡೆದಿದ್ದು, ಪ್ರಕರಣ ಸಂಬಂಧ ಬಿಜೆಪಿಯ ಮಾಜಿ ಶಾಸಕರ ಆಪ್ತ ಸೇರಿ ಇಬ್ಬರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
    ಹಾಸನದ ಮಾಜಿ ಶಾಸಕರಾದ ಬಿಜೆಪಿಯ ಪ್ರೀತಂಗೌಡ ಅವರ ಆಪ್ತರು ಎನ್ನಲಾದ ಎಚ್.ಪಿ.ಲಿಖಿತ್‌ಗೌಡ ಮತ್ತು ಕಚೇರಿಯ ಸಿಬ್ಬಂದಿ ಚೇತನ್ ಎಂಬಾತನನ್ನು ಶನಿವಾರ ತಡರಾತ್ರಿ ಬಂಧಿಸಲಾಗಿದೆ. ಹಾಸನ ತಾಲೂಕಿನ ಯಲಗುಂದ ಗ್ರಾಮದ ಚೇತನ್ ಮತ್ತು ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಲಿಖಿತ್‌ಗೌಡ ಹಲವು ವರ್ಷಗಳಿಂದ ಪ್ರೀತಂಗೌಡರ ಜತೆ ಗುರುತಿಸಿಕೊಂಡಿದ್ದರು. ಅಲ್ಲದೆ, ಅವರ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.


    ಹಾಸನ ತಾಲೂಕಿನ ಯಲಗುಂದ ಗ್ರಾಮಕ್ಕೆ ಎಸ್‌ಐಟಿಯ ಒಂದು ತಂಡ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದೆ. ಹಾಗೂ ಲಿಖಿತ್‌ನನ್ನು ಮತ್ತೊಂದು ತಂಡ ಶ್ರವಣಬೆಳಗೊಳಕ್ಕೆ ಕರೆದೊಯ್ದು ಪ್ರತ್ಯೇಕವಾಗಿ ಸ್ಥಳ ಮಹಜರು ಮಾಡಿದೆ. ಸ್ಥಳ ಮಹಜರು ಮುಗಿದ ತಕ್ಷಣ ಇಬ್ಬರನ್ನೂ ಎಸ್‌ಐಟಿ ವಶಕ್ಕೆ ಪಡೆದು, ನಗರದ ಎನ್.ಆರ್.ವೃತ್ತದಲ್ಲಿರುವ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದೆ.


    ಪ್ರಜ್ವಲ್‌ರ ಲೈಂಗಿಕ ದೌರ್ಜನ್ಯದ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ವಿಚಾರವಾಗಿ ಆಡಳಿತರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ಕೆಸರೆರಚಾಟ ನಡೆದಿದ್ದು, ಈ ಮಧ್ಯೆ ಪ್ರೀತಂಗೌಡರ ಆಪ್ತರ ಬಂಧನದೊಂದಿಗೆ ಪ್ರಕರಣವು ಮತ್ತೊಂದು ಹೊಸ ತಿರುವು ಪಡೆದಿದೆ. ಇದರೊಂದಿಗೆ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆಯಲ್ಲಿ ಬಿಜೆಪಿ ನಾಯಕರ ಪಾತ್ರವಿರುವ ಬಗ್ಗೆ ಶಂಕೆ ಮೂಡಿದ್ದು, ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
    ಶ್ರವಣಬೆಳಗೊಳದಲ್ಲಿರುವ ಲಿಖಿತ್‌ಗೌಡನ ಮನೆ ಮತ್ತು ಯಲಗುಂದ ಗ್ರಾಮದಲ್ಲಿನ ಚೇತನ್ ಮನೆಯಲ್ಲಿ ಭಾನುವಾರ ಹಲವು ಗಂಟೆ ಶೋಧ ನಡೆಸಿ, ಸ್ಥಳ ಮಹಜರು ಮಾಡಲಾಗಿದೆ. ಅಲ್ಲದೆ, ಅವರಿಬ್ಬರನ್ನೂ ಹಾಸನದ ಸೈಬರ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಲಾಗಿದೆ. ಆರೋಪಿಗಳನ್ನು ಬೆಂಗಳೂರಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಸಂಬಂಧ ಪ್ರಜ್ವಲ್‌ರ ಮಾಜಿ ಕಾರು ಚಾಲಕ ಕಾರ್ತಿಕ್‌ಗೌಡ, ಪುಟ್ಟಿ ಅಲಿಯಾಸ್ ಪುಟ್ಟರಾಜು, ನವೀನ್‌ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಪೊಲೀಸ್ ಠಾಣೆಯಲ್ಲಿ ಏ.೨೩ರಂದು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವರ್ಗಾಯಿಸಲಾಗಿತ್ತು. ನ್ಯಾಯಾಲಯ ಕಾರ್ತಿಕ್‌ಗೌಡ, ಪುಟ್ಟರಾಜು ಮತ್ತು ನವೀನ್‌ಗೌಡರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಎಸ್‌ಐಟಿ ಅಧಿಕಾರಿಗಳು ಇವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ನಡುವೆ ಅಧಿಕಾರಿಗಳು ಪ್ರೀತಂಗೌಡರ ಆಪ್ತರನ್ನು ಬಂಧಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಕಾರ್ತಿಕ್‌ಗೌಡ, ಪುಟ್ಟರಾಜು ಮತ್ತು ನವೀನ್‌ಗೌಡನ ಪತ್ತೆ ಕಾರ್ಯ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts