More

    ಮೇಲ್ಸೇತುವೆ ಯಮಲೋಕಕ್ಕೆ ರಹದಾರಿ

    ಹುಬ್ಬಳ್ಳಿ: ಸುರಕ್ಷಿತ ಹಾಗೂ ಸುಗಮ ವಾಹನ ಸಂಚಾರಕ್ಕೆ ರಹದಾರಿಯಾಗಬೇಕಿದ್ದ ಇಲ್ಲಿನ ದೇಸಾಯಿ ವೃತ್ತದ ಮೇಲ್ಸೇತುವೆ ಅಪಘಾತದ ಯಮಲೋಕಕ್ಕೆ ರಹದಾರಿಯಾಗಿದೆ.

    ದೇಸಾಯಿ ವೃತ್ತದಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 1 ವರ್ಷದ ಹಿಂದೆ ನಿರ್ವಿುಸಿರುವ ಮೇಲ್ಸೇತುವೆಯಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

    ಪಿಂಟೊ ರಸ್ತೆಯಿಂದ ಸರ್ಕ್ಯೂಟ್ ಹೌಸ್​ನತ್ತ ಹೋಗುವ ಸುರಂಗ ಮಾರ್ಗದ ಉದ್ದಕ್ಕೂ ವಾಹನಗಳ ದಟ್ಟಣೆ ಸಾಮಾನ್ಯವಾಗಿದೆ. ಮೇಲ್ಸೇತುವೆ ಕೆಳಗಿನ ಸುರಂಗದ ಅಗಲ ಕಡಿಮೆ ಇರುವುದರಿಂದ ಏಕಕಾಲಕ್ಕೆ ಮುಖಾಮುಖಿಯಾಗಿ ಹೆಚ್ಚಿನ ವಾಹನಗಳು ದಾಟುವುದು ಕಷ್ಟ. ಈ ಮಧ್ಯೆ ಪಿಂಟೊ ರಸ್ತೆಯಿಂದ ಕುಸುಗಲ್ಲ ರಸ್ತೆಯತ್ತ ತೆರಳುವುದಕ್ಕಾಗಿ ಹಾಗೂ ಕುಸುಗಲ್ಲ ರಸ್ತೆಯಿಂದ ಬಂದ ವಾಹನಗಳು ಸರ್ಕ್ಯೂಟ್ ಹೌಸ್​ನತ್ತ ಬಲಗಡೆ ಹೊರಳುವ ಸಂದರ್ಭದಲ್ಲಿ ಇಲ್ಲಿ ದಟ್ಟಣೆ ಹೆಚ್ಚಾಗುತ್ತದೆ. ದಿನಕ್ಕೆ ಕನಿಷ್ಠ 7-8 ಬಾರಿಯಾದರೂ ಇಲ್ಲಿ ವಾಹನಗಳ ದಟ್ಟಣೆ ಸಾಮಾನ್ಯ ಎಂಬಂತಾಗಿದೆ.

    ಕುಸುಗಲ್ಲ ರಸ್ತೆಯಿಂದ ಬರುವ ವಾಹನಗಳು ಪಿಂಟೊ ರಸ್ತೆಯತ್ತ ಸರಳವಾಗಿ ಹೊರಳಿ ಸಾಗುತ್ತವೆ. ಆದರೆ, ಇದೇ ವಾಹನಗಳು ಸರ್ಕ್ಯೂಟ್ ಹೌಸ್​ನತ್ತ ತೆರಳಲು ಬಲಗಡೆ ಹೊರಳುವಾಗ ಅಪಘಾತಗಳು ಸಂಭವಿಸುತ್ತಿವೆ. ಆಟೋ, ಕಾರುಗಳು ಅಪಘಾತಕ್ಕೀಡಾಗುವುದು ಹೆಚ್ಚಾಗಿದೆ. ಇದರಿಂದಾಗಿ ವಾಹನಗಳ ಚಾಲಕರ ಮಧ್ಯೆ ನಿತ್ಯ ಜಗಳ ನಡೆಯುತ್ತಿವೆ. ಈ ಅಪಘಾತ ಹಾಗೂ ಜಗಳ ತಪ್ಪಿಸುವುದಕ್ಕಾಗಿ ಪೂರ್ವ ಸಂಚಾರ ಠಾಣೆ ಪೊಲೀಸರು ಮೇಲ್ಸೇತುವೆಯ ಕುಸುಗಲ್ಲ ರಸ್ತೆಯಿಂದ ಸರ್ವಿಸ್ ರಸ್ತೆಯಲ್ಲಿ ಕೆಳಗೆ ಇಳಿಯುವ ಕಾರು ಹಾಗೂ ಇತರ ದೊಡ್ಡ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದು, ರಸ್ತೆಯ ಪ್ರವೇಶದಲ್ಲಿಯೇ ಬ್ಯಾರಿಕೇಡ್ ಹಾಕಲಾಗಿದೆ.

    ಕುಸುಗಲ್ಲ ರಸ್ತೆಯಿಂದ ಮೇಲ್ಸೇತುವೆಯತ್ತ ಬರುವ ವಾಹನಗಳಿಗೆ ಸರ್ವಿಸ್ ರಸ್ತೆಯ ಡಿವೈಡರ್ ಬಡಿದು ಹಲವಾರು ಅಪಘಾತಗಳು ಸಂಭವಿಸಿವೆ. ರಾತ್ರಿ ಸಮಯದಲ್ಲಿ ಮೇಲ್ಸೇತುವೆಯತ್ತ ಬರುವ ವಾಹನಗಳಿಗೆ ಈ ಡಿವೈಡರ್ ಕಾಣಿಸುವುದು ಕಷ್ಟ. ಮೇಲ್ಸೇತುವೆಯ ಸರ್ವಿಸ್ ರಸ್ತೆಗೆ ಇರುವ ಅವೈಜ್ಞಾನಿಕ ತಿರುವುಗಳನ್ನು ಸರಿಪಡಿಸುವ ಜತೆಗೆ ಡಿವೈಡರ್ ಸುಲಭವಾಗಿ ಕಾಣಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ.

    ಕಾರು ಹಾಗೂ ಇತರ ದೊಡ್ಡ ವಾಹನಗಳು ಮೇಲ್ಸೇತುವೆ ಪಕ್ಕದ ಸರ್ವಿಸ್ ರಸ್ತೆಯಿಂದ ಇಳಿದು, ಸರ್ಕ್ಯೂಟ್ ಹೌಸ್​ನತ್ತ ತಿರುಗುವಾಗ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ವಾಹನ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ಈ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕುತ್ತಿದ್ದೇವೆ.

    | ಎನ್.ಸಿ. ಕಾಡದೇವರ, ಪೂರ್ವ ಸಂಚಾರ ಠಾಣೆ ಇನ್​ಸ್ಪೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts