More

    ತುಂಬಿಕೊಂಡ ಮಲಪ್ರಭಾ ನದಿಯ ಬ್ಯಾರೇಜ್‌ಗಳು

    ಗುಳೇದಗುಡ್ಡ: ಭೀಕರ ಬರದಿಂದ ಬತ್ತಿ ಬರಿದಾಗಿದ್ದ ಮಲಪ್ರಭಾ ನದಿಗೆ ಈಗ ಮತ್ತೆ ಜೀವಕಳೆ ಬಂದಿದೆ. ನವಿಲುತೀರ್ಥ ಜಲಾಶಯದಿಂದ ಬಿಟ್ಟಿರುವ ನೀರು ಸಮೀಪದ ಆಸಂಗಿ ಬ್ಯಾರೇಜ್‌ಗೆ ಬುಧವಾರ ತಲುಪಿದ್ದು, ನದಿ ದಂಡೆಯ ಗ್ರಾಮಗಳ ಜನತೆಯಲ್ಲಿ ಸಂತಸ ತಂದಿದೆ.

    ಕಳೆದ ಬಾರಿ ಹಿಂಗಾರು ಹಾಗೂ ಮುಂಗಾರು ಮಳೆಗಳು ಕೈಕೊಟ್ಟಿದ್ದರಿಂದ ಮಲಪ್ರಭಾ ನದಿ ಸಂಪೂರ್ಣ ಬತ್ತಿಹೋಗಿತ್ತು. ಈ ನದಿಗೆ ತಾಲೂಕಿನಲ್ಲಿ ನಾಲ್ಕಾರು ಕಡೆಗಳಲ್ಲಿ ಕಟ್ಟಿರುವ ಬ್ಯಾರೇಜುಗಳು ಒಣಗಿ ಹೋಗಿದ್ದವು. ಜನವರಿ ತಿಂಗಳಲ್ಲಿ ಒಮ್ಮೆ ನವಿಲುತೀರ್ಥದಿಂದ ನೀರು ಬಿಡಲಾಗಿತ್ತಾದರೂ ಆ ನೀರು ಮಾರ್ಚ್ ವೇಳೆಗೆ ಖಾಲಿಯಾಗಿದ್ದರಿಂದ ಮಾರ್ಚ್ ಮಧ್ಯದಿಂದ ಏಪ್ರಿಲ್ ತಿಂಗಳಿನ ಈ ಬೇಸಿಗೆ ದಿನದಲ್ಲಿ ನದಿಯ ನೀರನ್ನೇ ನಂಬಿದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿತ್ತು. ನದಿಗೆ ನೀರು ಬಿಡುವಂತೆ ಸಾಕಷ್ಟು ಬಾರಿ ಇಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದರು.

    ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಏ.5 ರಂದು 1.0368 ಟಿಎಂಸಿ ನೀರು ಬಿಡಲಾಗಿತ್ತು. ನವಿಲುತೀರ್ಥ ಜಲಾಶಯದ ನೀರು ಬಾದಾಮಿ ತಾಲೂಕಿನ ಬ್ಯಾರೇಜ್‌ಗಳನ್ನು ತುಂಬಿಸಿ, ಗುಳೇದಗುಡ್ಡ ತಾಲೂಕಿನ ಚಿಮ್ಮಲಗಿ, ಲಾಯದಗುಂದಿ ಬ್ಯಾರೇಜ್ ಹಾಗೂ ಆಸಂಗಿ ಬ್ಯಾರೇಜ್‌ಗಳನ್ನು ತುಂಬಿಸಿದೆ. ಮಲಪ್ರಭಾ ನದಿ ಈಗ ತುಂಬಿ ಹರಿಯುತ್ತಿದೆ. ತಾಲೂಕಿನ ಕಾಟಾಪೂರ, ಮಂಗಳಗುಡ್ಡ, ಚಿಮ್ಮಲಗಿ, ನಾಗರಾಳ, ಲಾಯದಗುಂದಿ, ಕೊಟ್ನಳ್ಳಿ, ಕಟಗಿನಹಳ್ಳಿ, ಆಸಂಗಿ, ಆಲೂರ ಎಸ್‌ಪಿ, ಹಳದೂರು, ಇಂಜನವಾರಿ ಗ್ರಾಮಗಳ ರೈತರಿಗೆ, ಜಾನುವಾರುಗಳಿಗೆ ಇದರಿಂದ ಅನುಕೂಲವಾಗಲಿದೆ.

    ಈಗ ಮಲಪ್ರಭಾ ನದಿಗೆ ಬಿಟ್ಟಿರುವ ನೀರನ್ನು ಕೇವಲ ಜನ-ಜಾನುವಾರುಗಳಿಗೆ ಕುಡಿಯಲು ಮಾತ್ರ ಬಳಸಬೇಕು. ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಈಗ ಬಿಟ್ಟಿರುವ ನೀರನ್ನು ಕೃಷಿ ಚಟುವಟಿಕೆಗೆ ಬಳಸಬಾರದು. ನೀರನ್ನು ಪೋಲು ಮಾಡಬಾರದು.
    ಮಂಗಳಾ ಎಂ. ತಹಸೀಲ್ದಾರ್
    ಮಳೆ ಅಭಾವದಿಂದ ಮಲಪ್ರಭಾ ನದಿ ಸಂಪೂರ್ಣ ಬತ್ತಿಹೋಗಿ ಆಸಂಗಿ ಬ್ಯಾರೇಜ್‌ನಲ್ಲಿ ಹನಿ ನೀರು ಇಲ್ಲದ್ದರಿಂದಾಗಿ ಗ್ರಾಮಗಳಲ್ಲಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿತ್ತು. ಈಗ ಶಾಸಕರು ನದಿಗೆ ನೀರು ಹರಿಸಲು ಕ್ರಮ ಕೈಗೊಂಡಿದ್ದು ನಮಗೆಲ್ಲ ಸಂತಸ ತಂದಿದೆ.
    ರೈತ ಮಂಜುನಾಥ ಪಾಟೀಲ, ಮಂಗಳಗುಡ್ಡ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts