More

    ಶಿರಾದಲ್ಲಿ ಮೊದಲ ಫೀವರ್ ಕ್ಲಿನಿಕ್ ಆರಂಭ

    ತುಮಕೂರು: ಜಿಲ್ಲೆಯಲ್ಲಿ ಮೊದಲ ಫೀವರ್ ಕ್ಲಿನಿಕ್ ಅನ್ನು ಶಿರಾದಲ್ಲಿ ಆರಂಭಿಸಲಾಗಿದೆ. ದೆಹಲಿಗೆ ತೆರಳಿದ್ದ ಶಿರಾ ಮೂಲದ ವೃದ್ಧ ಕರೊನಾ ಸೋಂಕಿನಿಂದ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾ ಸಾರ್ವಜನಿಕ ಆಸ್ಪತ್ರೆ ಹಾಗೂ ಶಿರಾ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 2 ಫೀವರ್ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ತಿಳಿಸಿದರು.

    ಕರೊನಾ ಸೋಂಕಿತ ಮೃತ ವೃದ್ಧನ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವೆಂದು ಘೋಷಿಸಿದ್ದು, ಈ ವಲಯದ ಮನೆಗಳನ್ನು ಪ್ರತಿದಿನ ಆರೋಗ್ಯ ಸಿಬ್ಬಂದಿ ಸಮೀಕ್ಷೆ ಮಾಡುತ್ತಿದ್ದಾರೆ. ಜ್ವರ, ತಲೆನೋವು, ಕೆಮ್ಮು, ನೆಗಡಿ ಮತ್ತಿತರ ಕರೊನಾ ಸಂಬಂಧಿತ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಫೀವರ್ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಕಳುಹಿಸಲಾಗುವುದು ಎಂದು ಸೋಮವಾರ ಮಾಹಿತಿ ನೀಡಿದರು.

    ಫೀವರ್ ಕ್ಲಿನಿಕ್‌ನಲ್ಲಿ ಪರೀಕ್ಷಿಸಿದ ಬಳಿಕ ಯಾವುದೇ ತೊಂದರೆ ಇಲ್ಲವೆಂದು ದೃಢಪಟ್ಟಲ್ಲಿ ಮಾತ್ರ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುವುದು. ಜ್ವರ ಕಡಿಮೆಯಾಗದೆ ಕೆಮ್ಮಿನಿಂದ ಬಳಲುತ್ತಿದ್ದು ಸಂದೇಹ ಬಂದರೆ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ಇಡಲಾಗುವುದು ಎಂದು ಡಾ.ಚಂದ್ರಿಕಾ ತಿಳಿಸಿದರು.

    ಆರೋಗ್ಯ ಸಿಬ್ಬಂದಿಗೆ ಪ್ರತಿದಿನ ದೂರವಾಣಿ ಕರೆ, ವಿಡಿಯೋ ಹಾಗೂ ಝೂಮ್ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತಿದ್ದು, ಇವರು ಪ್ರತಿದಿನ ಮನೆ-ಮನೆಗೆ ಭೇಟಿ ನೀಡಿ ಕರೊನಾ ವೈರಸ್ ಹರಡುವ ಹಾಗೂ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಸಂಚಾರಿ ವಾಹನದ ಮೂಲಕ ಜಿಲ್ಲಾದ್ಯಂತ ಅರಿವು ಮೂಡಿಸಲಾಗುತ್ತಿದೆ. ಎಲ್‌ಇಡಿ ಪರದೆ ಮೇಲೆ ಜಾಗೃತಿ ಸಂದೇಶ, ಫ್ಲೆಕ್ಸ್ ಅಳವಡಿಕೆ, ಹೋರ‌್ಡಿಂಗ್ಸ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಈವರೆಗೆ 480 ಮಂದಿಯನ್ನು ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗಿದೆ. ಇವರಲ್ಲಿ ತಿಪಟೂರು ತಾಲೂಕಿನ 11, ಪಾವಗಡ-18, ಗುಬ್ಬಿಯ 7, ಚಿಕ್ಕನಾಯಕನಹಳ್ಳಿ – 8, ಕೊರಟಗೆರೆ-2, ಕುಣಿಗಲ್-14, ಮಧುಗಿರಿ-5, ಶಿರಾ-11, ತುರುವೇಕೆರೆ-14 ಹಾಗೂ ತುಮಕೂರು-173 ಜನ ಸೇರಿದಂತೆ ಒಟ್ಟು 263 ಜನರು ಕ್ವಾರೆಂಟೈನ್ (28 ದಿನಗಳನ್ನು ಪೂರ್ಣಗೊಳಿಸಿರುವ ಹೋಂ ಕ್ವಾರೆಂಟೈನ್) ಅವಧಿಯಲ್ಲಿದ್ದಾರೆ. ಅಲ್ಲದೆ, ದೆಹಲಿಯ ತಬ್ಲಿಘ್ ಜಮಾತ್ ಧಾರ್ಮಿಕ ಸಭೆಗೆ ಹೋಗಿ ಬಂದಿರುವ ಸೋಂಕಿತ ಮೃತ ವೃದ್ಧನ ಸಹ ಪ್ರಯಾಣಿಕರು ಸೇರಿದಂತೆ ಒಟ್ಟು 18 ಮಂದಿಯನ್ನು ಸಹ ಐಸೋಲೇನ್ ವಾರ್ಡ್‌ನಲ್ಲಿಟ್ಟು ನಿಗಾವಹಿಸಲಾಗಿದೆ ಎಂದರು.

    ಖಾಸಗಿ ವೈದ್ಯರು ಕ್ಲಿನಿಕ್‌ಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ನಕಲಿ ವೈದ್ಯರನ್ನು ಗುರುತಿಸಿ ಅಂತಹವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗುತ್ತಿದೆ. ಕ್ಲಿನಿಕ್‌ಗಳನ್ನು ಮುಚ್ಚಿಸುತ್ತಿರುವುದರಿಂದ ನಕಲಿ ವೈದ್ಯರು ತಮ್ಮತಮ್ಮ ಮನೆಗಳಲ್ಲಿಯೇ ಪ್ರಾಕ್ಟೀಸ್ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
    ಡಾ.ಬಿ.ಆರ್.ಚಂದ್ರಿಕಾ ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts