More

    ವಿವಾದಿತ ಪ್ರದೇಶಗಳ ಶಾಶ್ವತ ವಿನಿಮಯವಷ್ಟೇ ಸೂಕ್ತ ಪರಿಹಾರ

    ಪ್ರೇಮಶೇಖರ

    ಶ್ಚಿಮದಲ್ಲಿ ಅಕ್ಸಾಯ್ ಚಿನ್ ಮತ್ತು ಪೂರ್ವದಲ್ಲಿ ಅರುಣಾಚಲ ಪ್ರದೇಶಗಳು ಭಾರತ ಹಾಗೂ ಚೀನಾಗಳ ನಡುವಿನ ವಿವಾದಿತ ಪ್ರದೇಶಗಳಲ್ಲಿ ಪ್ರಮುಖವಾದುವು. ಇವುಗಳಲ್ಲಿ ಈಗ ಅಕ್ಸಾಯ್ ಚಿನ್ ಚೀನಾದ ವಶದಲ್ಲೂ ಅರುಣಾಚಲ ಪ್ರದೇಶ ಭಾರತದ ವಶದಲ್ಲೂ ಇವೆ. ಐತಿಹಾಸಿಕ ದಸ್ತಾವೇಜುಗಳು ಮತ್ತು ಭೂಪಟಗಳ ಅಧ್ಯಯನದ ಪ್ರಕಾರ ನಮಗೆ ತಿಳಿಯುವುದೇನೆಂದರೆ ಈ ಎರಡೂ ಪ್ರದೇಶಗಳು ಐತಿಹಾಸಿಕವಾಗಿ ಭಾರತಕ್ಕೆ ಸೇರಿರಲಿಲ್ಲ. ಟಿಬೆಟ್ ಮೇಲೆ ಚೀನಾದ ಸಾರ್ವಭೌಮತ್ವವಿತ್ತು ಮತ್ತು ಅರುಣಾಚಲ ಪ್ರದೇಶದ ವಿವಿಧ ಬುಡಕಟ್ಟುಗಳ ನಾಯಕರು ಟಿಬೆಟ್​ನ ದಲಾಯಿ ಲಾಮಾರ ಸಾಮಂತರಾಗಿದ್ದರು. ಕಳೆದ ಶತಮಾನದ ಆರಂಭದಲ್ಲಿ ಈ ಪ್ರದೇಶವನ್ನು ಬ್ರಿಟಿಷ್ ಭಾರತ ಸೇನಾಕಾರ್ಯಾಚರಣೆಗಳ ಮೂಲಕ ವಶಪಡಿಸಿಕೊಂಡಿತು. ಭಾರತದ ಈ ಆಕ್ರಮಣವನ್ನು ಮತ್ತು ಹೊಸ ಮೆಕ್​ವುಹೋನ್ ರೇಖೆಯನ್ನು ಗಡಿಯಾಗಿ ಅಧಿಕೃತಗೊಳಿಸುವ ಪ್ರಯತ್ನ ನಡೆದದ್ದು 1914ರ ಶಿಮ್ಲಾ ಸಮ್ಮೇಳನದಲ್ಲಿ. ಆದರೆ ಭಾರತ ಪ್ರತಿಪಾದಿಸಿದ ಹೊಸ ಗಡಿಯನ್ನು ಚೀನಾ ಒಪ್ಪಿಕೊಳ್ಳಲಿಲ್ಲ. 1938ರವರೆಗೂ ಸರ್ವೇ ಆಫ್ ಇಂಡಿಯಾ ಸಹ ಈ ಪ್ರದೇಶವನ್ನು ಟಿಬೆಟ್​ನ ಭಾಗವೆಂದೇ ತೋರಿಸುತ್ತಿತ್ತು!

    ಪಶ್ಚಿಮದ ಅಕ್ಸಾಯ್ ಚಿನ್ ಬಗ್ಗೆ ಹೇಳುವುದಾದರೆ ಆ ಪ್ರದೇಶವನ್ನು ಉನ್ನತ ಕಾರಾಕೊರಂ ಪರ್ವತಗಳು ಭಾರತದಿಂದ (ಲಡಾಖ್​ನಿಂದ) ಬೇರ್ಪಡಿಸುತ್ತವೆ. ಆ ಪ್ರದೇಶವನ್ನು ಬ್ರಿಟಿಷ್ ಭಾರತ 20ನೇ ಶತಮಾನದ ಆದಿಭಾಗದಲ್ಲಿ ಭೂಪಟದಲ್ಲಿ ಮಾತ್ರ ಸೇರಿಸಿಕೊಂಡಿತೇ ವಿನಾ ಅದರ ಮೇಲೆ ವಾಸ್ತವ ಹತೋಟಿ ಸ್ಥಾಪಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇದೇ ಪರಿಸ್ಥಿತಿ ಸ್ವಾತಂತ್ರ್ಯ ನಂತರವೂ ಮುಂದುವರಿಯಿತು. ಅಕ್ಸಾಯ್ ಚಿನ್​ನಲ್ಲಿ ಚೀನಿಯರು ರಸ್ತೆಯೊಂದನ್ನು ನಿರ್ವಿುಸಿದ್ದಾರೆಂದು 1956ರಲ್ಲಿ ಭಾರತಕ್ಕೆ ತಿಳಿದದ್ದೇ ಚೀನೀ ಸರ್ಕಾರ ಬೀಜಿಂಗ್​ನಲ್ಲಿ ಹೊರಡಿಸಿದ ಪ್ರಕಟಣೆಗಳಿಂದ!

    ಆನಂತರದ ಮಾತುಕತೆಗಳಲ್ಲಿ ಅಕ್ಸಾಯ್ ಚಿನ್ ಮೇಲೆ ತನ್ನ ಪರಮಾಧಿಕಾರವನ್ನು ಭಾರತ ಮಾನ್ಯ ಮಾಡುವುದಾದರೆ ಅರುಣಾಚಲದ ಮೇಲೆ ಭಾರತದ ಪರಮಾಧಿಕಾರವನ್ನು ತಾನು ಒಪ್ಪಿಕೊಳ್ಳುವುದಾಗಿ ಚೀನಾ ಹೇಳಿತು. ಗಡಿಸಮಸ್ಯೆಯ ಪರಿಹಾರಕ್ಕೆ ಇದೊಂದು ಅತ್ಯಂತ ಸಮರ್ಪಕ ವಿಧಾನವಾಗಿತ್ತು. ಹೇಗೆಂದರೆ ಭೌಗೋಳಿಕವಾಗಿ ಕಾರಾಕೊರಂ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದ ಅಕ್ಸಾಯ್ ಚಿನ್ ಅನ್ನು ಭಾರತ ತನ್ನ ವಶಕ್ಕೆ ತೆಗೆದುಕೊಂಡರೂ ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗುವ ಪರ್ವತ ಕಣಿವೆಗಳಿಂದಾಗಿ ಆ ಪ್ರದೇಶದ ಜತೆ ನಮ್ಮ ಸಂಪರ್ಕ ತಪ್ಪಿಹೋಗುತ್ತದೆ. ಅದೇ ರೀತಿ ಚೀನಾ (ಟಿಬೆಟ್) ಮತ್ತು ಅರುಣಾಚಲ ಪ್ರದೇಶಗಳ ನಡುವೆ ಉನ್ನತ ಹಿಮಾಲಯ ಪರ್ವತವಿದ್ದು ಚಳಿಗಾಲದಲ್ಲಿ ಚೀನೀಯರಿಗೆ ಈ ಪ್ರದೇಶದ ಜತೆ ಸಂಪರ್ಕ ತಪ್ಪಿಹೋಗುತ್ತದೆ. ಹೀಗಾಗಿ ಚೀನಿ ಸಲಹೆಯ ಪರಿಣಾಮವಾಗಿ, ಭೌಗೋಳಿಕವಾಗಿ ಭಾರತದಿಂದ ಪ್ರತ್ಯೇಕವಾದ ಅಕ್ಸಾಯ್ ಚಿನ್ ಚೀನಾಕ್ಕೂ, ಚೀನಾದಿಂದ ಪ್ರತ್ಯೇಕವಾದ ಅರುಣಾಚಲ ಪ್ರದೇಶ ಭಾರತಕ್ಕೂ ದೊರಕುತ್ತಿತ್ತು ಮತ್ತು ಸಮಸ್ಯೆ ಪರಿಹಾರವಾಗುತ್ತಿತ್ತು. ಆದರೆ ನೆಹರೂ ಸರ್ಕಾರ ಅದನ್ನು ತಿರಸ್ಕರಿಸಿ ಎರಡೂ ಪ್ರದೇಶಗಳು ಭಾರತಕ್ಕೆ ಸೇರಬೇಕು ಎಂದು ಪಟ್ಟು ಹಿಡಿಯಿತು. ಇದರ ಪರಿಣಾಮ- 62ರ ಯುದ್ಧ, ಸೋಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ…

    ಯುದ್ಧದ ನಂತರ ನಿರ್ವಣವಾದ ಹತೋಟಿ ರೇಖೆ ಸರಿಸುಮಾರು ಚೀನಾ ಮಾಡಿದ್ದ ಸಲಹೆಗೆ ಅನುಗುಣವಾಗಿಯೇ ಇದೆ. ಆ ಹಳೆಯ ನೀತಿಗೆ ಚೀನೀಯರು ಈಗಲೂ ಬದ್ಧರಾಗಿಯೇ ಇದ್ದರೆ ಅದಕ್ಕನುಗುಣವಾಗಿ ಹತೋಟಿ ರೇಖೆಯ ಆಯಕಟ್ಟಿನ ಸ್ಥಳಗಳಲ್ಲಿ ಎರಡೂ ದೇಶಗಳ ಸುರಕ್ಷೆಗೆ ಹಾನಿ ತಟ್ಟದಂತಹ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ ಅದನ್ನು ಅಧಿಕೃತ ಗಡಿಯೆಂದು ಒಪ್ಪಿಕೊಳ್ಳುವುದಷ್ಟೇ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಮಾರ್ಗ. ಗಡಿಸಮಸ್ಯೆಗೆ ಪರಿಹಾರ ಹುಡುಕಲು 2012ರ ಡಿಸೆಂಬರ್​ನಲ್ಲಿ ದೆಹಲಿಯಲ್ಲಿ ನಡೆದ, ಸೇನಾಧಿಕಾರಿಗಳು, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹಾಗೂ ವಿಶೇಷಜ್ಞರು ಭಾಗವಹಿಸಿದ್ದ ವಿಶೇಷ ಸಮಾವೇಶದಲ್ಲಿ ನಾನು ಈ ಮೇಲಿನ ಮಾತುಗಳನ್ನೇ ಆಧಾರಗಳ ಮೂಲಕ ಪ್ರತಿಪಾದಿಸಿದೆ, ಪ್ರದೇಶಗಳ ಅಂತಿಮ ಹಾಗೂ ಕಾಯಂ ವಿನಿಮಯದ ಹೊರತಾಗಿ ಬೇರಾವ ಪರಿಹಾರವೂ ಇಲ್ಲ ಎಂದು ಹೇಳಿದೆ. ನಂತರ ನನ್ನದೂ ಸೇರಿದಂತೆ ಅಲ್ಲಿ ವ್ಯಕ್ತವಾದ ಸಲಹೆಗಳೆಲ್ಲವನ್ನೂ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ತಲುಪಿಸಲಾಯಿತು. 2013ರ ಅಕ್ಟೋಬರ್​ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಚೀನಾಗೆ ಭೇಟಿ ನೀಡಿದಾಗ ಗಡಿ ಸಮಸ್ಯೆಯ ಪರಿಹಾರಕ್ಕಾಗಿ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಬೀಳಲಿದೆ ಎಂಬ ಸೂಚನೆ ಹೊರಬಿದ್ದಿತ್ತು. ವಿವಾದಿತ ಪ್ರದೇಶಗಳ ಅಂತಿಮ ವಿನಿಮಯವೇ ಆ ಪರಿಹಾರವಾಗಿರಬಹುದೆಂದು ನಾನು ಎಣಿಸಿದ್ದೆ. ಆದರೆ, ಆ ಭೇಟಿ ಸಹ ಹತ್ತರಲ್ಲಿ ಹನ್ನೊಂದಾಗಿ ಮರೆಯಾಗಿಹೋಯಿತು. ಬಹುಶಃ ಲೋಕಸಭಾ ಚುನಾವಣೆಗಳನ್ನು ಮುಂದಿಟ್ಟುಕೊಂಡು ಯುಪಿಎ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಿತೇನೋ. ಆದರೆ ಪ್ರಸಕ್ತ ಎನ್​ಡಿಎ ಸರ್ಕಾರಕ್ಕೆ ಅಂತಹ ಒತ್ತಡಗಳೇನೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ವಿದೇಶನೀತಿಯಲ್ಲಿ ಪ್ರಶಂಸನೀಯ ವಿವೇಕ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ವಿವಾದಿತ ಪ್ರದೇಶಗಳನ್ನು ಕಾಯಂ ಆಗಿ ವಿನಿಮಯಿಸಿಕೊಂಡು ಗಡಿ ಸಮಸ್ಯೆಗೆ ಅಂತ್ಯ ಹಾಡುತ್ತಾರೆಂದೂ, ಆ ಮೂಲಕ ವರ್ಷವರ್ಷವೂ ಗಡಿರಕ್ಷಣೆಗೆಂದು ವ್ಯಯಿಸಲಾಗುತ್ತಿರುವ ಬಿಲಿಯನ್​ಗಟ್ಟಲೆ ಡಾಲರ್​ಗಳನ್ನು ಪ್ರಜಾಹಿತಕ್ಕಾಗಿ ವಿನಿಯೋಗಿಸುವ ಮಾರ್ಗ ಅನುಸರಿಸುತ್ತಾರೆಂದೂ ಆಶಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು )

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts