More

    ಕಟ್ಟಕಡೆಯ ವ್ಯಕ್ತಿಗೂ ತಲುಪಲಿದೆ ಹೊಸ ಯೋಜನೆ

    ಹುಬ್ಬಳ್ಳಿ: ಉಜ್ವಲ, ಜನಧನ, ಗರೀಬ ಕಲ್ಯಾಣ, ಡಿಜಿಟಲ್ ವಿಲೇಜ್ ಸೇರಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಎಲ್ಲ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಹೇಳಿದರು.

    ಸೋಮವಾರ ಇಲ್ಲಿಯ ಖಾಸಗಿ ಹೋಟೆಲ್​ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಐವರು ಕರೊನಾ ಸೇನಾನಿಗಳನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವತಂತ್ರ ಭಾರತದ 75 ವರ್ಷಗಳಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್​ನ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಒಡೆದು ಆಳುವ ನೀತಿಯಿಂದ ದೇಶದ ಅಭಿವೃದ್ಧಿ ಕುಂಠಿತಗೊಂಡಿತ್ತು ಎಂದು ಟೀಕಿಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಮಾತನಾಡಿ, ಜೈಲಿಗೆ ಹೋಗಿಬಂದವರ ಮೆರವಣಿಗೆ ಮಾಡುವುದನ್ನು ನೋಡಿದ್ದೇವೆ. ಆದರೆ, ಈ ಯಾತ್ರೆ ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂಥದ್ದು ಎಂದು ಹೇಳಿದರು.

    ಕಾಂಗ್ರೆಸ್ ಅಧೋಗತಿಗೆ ಹೋಗುತ್ತಿರುವುದನ್ನು ಮನಗಂಡ ಆ ಪಕ್ಷದ ಮಾಜಿ ಮುಖ್ಯಮಂತ್ರಿ ಒಬ್ಬರು ಜ್ಯೋತಿಷ್ಯದ ಅಂಗಡಿ ತೆರೆದಿದ್ದಾರೆ. ಕಾಂಗ್ರೆಸ್​ಗೆ ಶಾಶ್ವತ ನಿರುದ್ಯೋಗ ಖಚಿತ ಎಂದು ಟೀಕಿಸಿದರು.

    ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಮಾಜಿ ಪ್ರಧಾನಿ ದಿ. ಎ.ಬಿ. ವಾಜಪೇಯಿ ಅವರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಕಾಂಗ್ರೆಸ್ ತನ್ನ ಅವಸಾನಕ್ಕೆ ನಾಂದಿ ಹಾಡಿದೆ. ಪ್ರತಿಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಲಹೆ ನೀಡಬೇಕಿದ್ದ ಕಾಂಗ್ರೆಸ್, ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ತನ್ನ ದೌರ್ಬಲ್ಯ ತೋರಿಸಿಕೊಂಡಿದೆ ಎಂದು ವ್ಯಂಗ್ಯವಾಡಿದರು.

    ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಅಧಿಕಾರಕ್ಕೆ ಬರಲಿದೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಾನೂನು ಹೋರಾಟದ ಮೂಲಕ ಮಹದಾಯಿ ನೀರು ತರುವುದು ಖಚಿತ ಎಂದು ಹೇಳಿದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಂಜೀವ ಮತಂದೂರು, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಹಾಗೂ ಇತರರಿದ್ದರು.

    ಇಂಜಿನಿಯರ್​ಗಳಿಂದ ಭೇಟಿ: ಹುಬ್ಬಳ್ಳಿ-ಧಾರವಾಡದಲ್ಲಿ ಉದ್ಯಮ ಸ್ಥಾಪನೆಗೆ ಉತ್ತಮ ವಾತಾವರಣ ಇದೆ. ಐಟಿ ತಂತ್ರಜ್ಞಾನದ ಸದ್ಬಳಕೆ ಹಾಗೂ ಉದ್ಯೋಗ ಸೃಷ್ಟಿ ನಮ್ಮ ಮೊದಲ ಆದ್ಯತೆ ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಹೇಳಿದರು. ಅವಳಿ ನಗರದಲ್ಲಿ ಸಾಫ್ಟ್​ವೇರ್ ಸಂಸ್ಥೆಗಳನ್ನು ಸ್ಥಾಪಿಸುವಂತೆ ಸಾಫ್ಟ್​ವೇರ್ ಇಂಜಿನಿಯರ್​ಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅವರು ಮಾತನಾಡಿದರು. ಕೋವಿಡ್ ನಂತರ ವರ್ಚುವೆಲ್ ಸೆಟ್​ಅಪ್​ಗೆ ಐಟಿ ಕಂಪನಿಗಳು ಆಸಕ್ತಿ ತೋರುತ್ತಿವೆ. ಇದಕ್ಕೆ ಪೂರಕವಾಗಿ ಉತ್ತರ ಕರ್ನಾಟಕದಲ್ಲಿ ಗುಣಮಟ್ಟದ ಇಂಟರ್​ನೆಟ್ ಸೌಲಭ್ಯ, ಡಾಟಾ ಸ್ಟೋರೇಜ್ ಸೌಲಭ್ಯ, ಸೈಬರ್ ಭದ್ರತೆಯ ವ್ಯವಸ್ಥೆ ಆಗಬೇಕಿದೆ ಎಂದರು. ಸಾಫ್ಟ್​ವೇರ್ ಇಂಜಿನಿಯರ್​ಗಳಾದ ಅಮಿತ ಕುಲಕರ್ಣಿ, ಗೌರೀಶ ಮಜ್ಜಗಿ, ರಂಜಿತ ಕುಮಾರ, ಸೌಮ್ಯ ಇತರರು ಇದ್ದರು.

    ಕೌಶಲಾಭಿವೃದ್ಧಿ ರಾಜಧಾನಿ ಆಗಲಿದೆ ಹುಬ್ಬಳ್ಳಿ: ಹುಬ್ಬಳ್ಳಿಯನ್ನು ಕೌಶಲ ಅಭಿವೃದ್ಧಿಯ ರಾಜಧಾನಿಯನ್ನಾಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ ಚಂದ್ರಶೇಖರ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರ್ಕಾರದೊಂದಿಗೆ ರ್ಚಚಿಸಲಾಗುವುದು ಎಂದರು.

    ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ ಕಟ್ಟಡ ನಿರ್ವಿುಸಿದೆ. ಆದರೆ, ಕೋವಿಡ್​ನಿಂದಾಗಿ ಪೂರ್ಣಾವಧಿ ಕಾರ್ಯ ಪ್ರಾರಂಭಿಸಿಲ್ಲ. ಈ ಕುರಿತು ಇನ್ಪೋಸಿಸ್ ಪ್ರಮುಖರೊಂದಿಗೂ ರ್ಚಚಿಸಿ, ಶೀಘ್ರ ಹುಬ್ಬಳ್ಳಿಯಲ್ಲಿ ಪೂರ್ಣಪ್ರಮಾಣದ ಕಾರ್ಯ ಪ್ರಾರಂಭಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

    ಕೋವಿಡ್ ಸಮಯದಲ್ಲಿ ಇಂಧನ ದರ ಇಳಿಕೆ ಸಾಧ್ಯವಿರಲಿಲ್ಲ. ಆರ್ಥಿಕ ಸಮಸ್ಯೆ ಮಧ್ಯೆಯೂ ಕೇಂದ್ರ ಸರ್ಕಾರ ದೇಶದ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿದೆ. ಬಂಡವಾಳ ಹೂಡಿಕೆ ಮೇಲೆ ದುಷ್ಪರಿಣಾಮವಾಗಬಾರದೆಂಬ ಉದ್ದೇಶದಿಂದ ಕಾಪೋರೇಟ್ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು ಎಂದರು.

    ಪೆಗಾಸಿಸ್ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದವು. ಪೆಗಾಸಿಸ್ ಬಗ್ಗೆ ಮುಕ್ತವಾಗಿ ರ್ಚಚಿಸಲಾಗುವುದೆಂಬ ಭರವಸೆಯನ್ನು ಸರ್ಕಾರ ನೀಡಿದರೂ, ಪ್ರತಿಪಕ್ಷಗಳು ಚರ್ಚೆಗೆ ಸಿದ್ಧರಾಗಲಿಲ್ಲ ಎಂದು ಹೇಳಿದರು.

    ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ ಹಾಗೂ ಕಲ್ಲಿದ್ದಲು ಹಗರಣದ ಬಗ್ಗೆ ರ್ಚಚಿಸಲು ಅವಕಾಶ ನೀಡುವಂತೆ ಬಿಜೆಪಿ ಪ್ರತಿಭಟಿಸಿತ್ತು. ಆದರೆ, ಈಗ ಕಾಂಗ್ರೆಸ್ ಯಾವುದೇ ರೀತಿಯ ಚರ್ಚೆಯನ್ನು ಅಪೇಕ್ಷಿಸದೇ ಕಲಾಪಕ್ಕೆ ಅಡ್ಡಿಪಡಿಸಿರುವುದಾಗಿ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts