More

    ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆಯಿಂದ ನಿರ್ಮಾಣವಾಗಲಿದೆ ವಿನೂತನ ವೃತ್ತ

    ವಿಕ್ರಮ ನಾಡಿಗೇರ ಧಾರವಾಡ

    ನಗರದಲ್ಲಿ ಅನೇಕ ಸಂಚಾರ ವೃತ್ತಗಳಿದ್ದು, ಹೆಚ್ಚಿನವುಗಳಿಗೆ ಯಾವುದೇ ಆಕರ್ಷಣೆ ಇಲ್ಲ. ನಿರ್ಮಾಣದ ಬಳಿಕ ಸರಿಯಾಗಿ ನಿರ್ವಹಣೆಯಾಗದಿರುವುದರಿಂದ ವೃತ್ತಗಳು ಯಾರ ಗಮನವನ್ನೂ ವಿಶೇಷವಾಗಿ ಸೆಳೆಯುವುದಿಲ್ಲ. ಇದರ ಮಧ್ಯೆ ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನ ವತಿಯಿಂದ ಹೊಸ ಮಾದರಿ ವೃತ್ತ ನಿರ್ವಿುಸಲು ಉದ್ದೇಶಿಸಲಾಗಿದ್ದು, ಕೆಲಸ ಪ್ರಾರಂಭಿಸಲಾಗಿದೆ.

    ಉಳವಿ ಚನ್ನಬಸವೇಶ್ವರ ಹಲವರ ಆರಾಧ್ಯ ದೈವ. ದೇವಸ್ಥಾನವು ಪ್ರಮುಖ ಧಾರ್ವಿುಕ ಕೇಂದ್ರವಾಗಿದೆ. ವಿವಿಧ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನೆರವೇರಿಸುವ ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆಯು, ಸ್ವಂತ ಖರ್ಚಿನಲ್ಲಿ ಇಲ್ಲಿಯ ಮುಖ್ಯ ಅಂಚೆ ಕಚೇರಿ ಬಳಿ ವೃತ್ತ ನಿರ್ವಿುಸಲಿದೆ. ಇದು ಹೆಸರಿಗೆ ಮಾತ್ರ ಸಂಚಾರ ವೃತ್ತವಾಗಿರದೆ, ರಸ್ತೆಯ ಅಂದ ಹೆಚ್ಚಿಸುವುದರೊಂದಿಗೆ ಜನರಿಗೆ ಧಾರ್ವಿುಕ ಮಾಹಿತಿಯನ್ನೂ ನೀಡುವಂತಿರುತ್ತದೆ. ವೃತ್ತದಲ್ಲಿ 9 ಅಡಿ ಎತ್ತರದ ಚನ್ನಬಸವಣ್ಣನವರ ಕಂಚಿನ ಮೂರ್ತಿ ಜತೆಗೆ, ಅಷ್ಟಾವರಣ, ಪಂಚಾಚಾರ ಹಾಗೂ ಷಟ್​ಸ್ಥಲಗಳ ಮಾಹಿತಿ ನೀಡಲಾಗುತ್ತದೆ.

    ವೃತ್ತದ ಅನತಿ ದೂರದಲ್ಲೇ ಉಳವಿ ಚನ್ನಬಸವೇಶ್ವರ ದೇವಸ್ಥಾನ ಇದೆ. ಹೀಗಾಗಿ, ಸೂಕ್ತ ಜಾಗ ನೀಡಲು ಮಹಾನಗರ ಪಾಲಿಕೆ ಒಪ್ಪಿದರೆ ವೃತ್ತ ನಿರ್ವಿುಸುವುದಾಗಿ ದೇವಸ್ಥಾನದ ಸಮಿತಿ ಪತ್ರ ಬರೆದು ತಿಳಿಸಿತ್ತು. ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ರ್ಚಚಿಸಿ, 2004ರಲ್ಲಿ ಅನುಮತಿ ನೀಡಲಾಗಿತ್ತು. ಆದರೆ, ಕಾರಣಾಂತರದಿಂದ ಕೆಲಸ ಆರಂಭವಾಗಿರಲಿಲ್ಲ. ಕೆಲ ದಿನಗಳ ಹಿಂದೆ ಕೆಲಸ ಆರಂಭಿಸಲಾಗಿದ್ದು, ಮಾರ್ಚ್ ಅಂತ್ಯದೊಳಗೆ ವೃತ್ತ ಅನಾವರಣಗೊಳಿಸುವ ಉದ್ದೇಶ ಹೊಂದಲಾಗಿದೆ.

    180 ಚದರ ಅಡಿಯಷ್ಟು ಜಾಗದಲ್ಲಿ ಅಂದಾಜು 17 ಲಕ್ಷ ರೂ. ವೆಚ್ಚದಲ್ಲಿ ವೃತ್ತ ನಿರ್ಮಾಣವಾಗಲಿದೆ. ಬೇಸ್​ವೆುಂಟ್ ಮೇಲೆ ಅಷ್ಟ ಕೋನಾಕಾರದ ಕಟ್ಟೆ ನಿರ್ವಿುಸಿ, ಅಷ್ಟಾವರಣ ನಮೂದಿಸಲಾಗುತ್ತದೆ. ಇದರ ಮೇಲಿನ 5 ಕೋನಾಕಾರದ ಕಟ್ಟೆ ಮೇಲೆ ಪಂಚಾಚಾರ ಹಾಗೂ 6 ಮೆಟ್ಟಿಲುಗಳನ್ನು ನಿರ್ವಿುಸಿ ಷಟ್​ಸ್ಥಲಗಳನ್ನು ನಮೂದಿಸಲಾಗುತ್ತದೆ. ಕಟ್ಟೆಯ ಮೇಲೆ ಉಳವಿ ಚನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದರ ಸುತ್ತ ಗಿಡಗಳನ್ನು ನೆಡಲಾಗುತ್ತದೆ. ಸಂಚಾರ ವೃತ್ತವೊಂದಕ್ಕೆ ಧಾರ್ವಿುಕ ಸ್ಪರ್ಶ ನೀಡುವ ಉಳವಿ ಬಸವೇಶ್ವರ ಸಂಸ್ಥೆ ಉದ್ದೇಶ ಒಳ್ಳೆಯದಿದ್ದು, ಆಧ್ಯಾತ್ಮಿಕ ಚಿಂತನೆಗಳ ಸಮ್ಮಿಳಿತದ ಹೊಸ ಮಾದರಿಯ ಸರ್ಕಲ್ ಆಗಿ ಗಮನ ಸೆಳೆಯಲಿದೆ.

    ವೃತ್ತ ನಿರ್ವಣಕ್ಕೆ ಪಾಲಿಕೆ ಅನುಮತಿ ಕೋರಲಾಗಿತ್ತು. ಆಯುಕ್ತರು ಒಪ್ಪಿದ ಬಳಿಕ ಕಾಮಗಾರಿ ಆರಂಭಿಸಲಾಗಿದೆ. ಕೊಲ್ಹಾಪುರದಲ್ಲಿ ಮೂರ್ತಿ ಸಿದ್ಧವಾಗುತ್ತಿದ್ದು, ಈ ಮಾಸಾಂತ್ಯದಲ್ಲಿ ಸಿಗಲಿದೆ. ಮಾರ್ಚ್ ನಲ್ಲಿ ವೃತ್ತ ಅನಾವರಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ.

    | ಟಿ.ಎಲ್. ಪಾಟೀಲ ದೇವಸ್ಥಾನ ಸಮಿತಿ ಟ್ರಸ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts