More

    ಭಟ್ಕಳ ತಾಲೂಕಿನ ಜನರ ಬದುಕು ಮೂರಾಬಟ್ಟೆ

    ಟ್ಕಳ: ತಾಲೂಕಿನಲ್ಲಿ ಮಳೆ ಆರ್ಭಟಿಸಿ ಒಂದು ವಾರ ಕಳೆದರೂ ಅದು ಸೃಷ್ಟಿಸಿದ ಅವಾಂತರದಿಂದ ಜನ ಇನ್ನೂ ಹೊರಬರಲಾಗದೆ ಪರಿತಪಿಸುತ್ತಿದ್ದಾರೆ.

    ತಾಲೂಕಿನಲ್ಲಿ ಕಳೆದ ವಾರ ಸುರಿದ ಮಳೆ ಎಲ್ಲರ ಬದುಕನ್ನೇ ಕಸಿದುಕೊಂಡಿದೆ. ಅಂಗಡಿಕಾರರು, ಹೋಟೆಲ್ ಉದ್ಯಮ, ವಾಹನ ಮಾಲೀಕರು ದಿಕ್ಕು ಕಾಣದಂತಾಗಿದ್ದಾರೆ. ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಧರೆ ಕುಸಿದ ಪರಿಣಾಮ ಅಡಕೆ, ತೆಂಗು ತೋಟಗಳಿಗೆ ನೀರಿನೊಂದಿಗೆ ಮಣ್ಣು ಬಂದು ನಿಂತಿದೆ. ಇದನ್ನು ತೆರವುಗೊಳಿಸುವುದು ರೈತರಿಗೆ ಸವಾಲಾಗಿದೆ.

    ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಭೂ ಕುಸಿತ ಕಂಡು ಬಂದಿದೆ. ಹೆಗ್ಗದ್ದೆ ಸೇರಿದಂತೆ ಕೆಲ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಕೆಲವು ಪ್ರದೇಶಗಳಲ್ಲಿ ಬಾವಿಗಳೂ ಮುಚ್ಚಿ ಹೋಗಿವೆ. ಮಹಾಮಳೆಗೆ ಎಲ್ಲೆಡೆ ನೀರಿನ ಹರಿವು ಹೆಚ್ಚಾಗಿದೆ.

    ತಾಲೂಕಿನ ಗ್ರಾಮೀಣ ಭಾಗ ಸೇರಿ ಪಟ್ಟಣದಲ್ಲೂ ಹಲವರು ಅಡಕೆ ಮಲ್ಲಿಗೆ ಬೆಳೆಯುತ್ತಾರೆ. ತಾಲೂಕಿನಲ್ಲಿ 0.45 ಹೆಕ್ಟೇರ್ ಅಡಕೆ ತೋಟಕ್ಕೆ ಹಾನಿಯಾದರೆ, 0.05 ಹೆಕ್ಟೇರ್ ಮಲ್ಲಿಗೆ ಕೃಷಿ ಭೂಮಿ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಒಟ್ಟು 5 ಹೆಕ್ಟೇರ್ ತೋಟಗಾರಿಕೆ ಭೂಮಿಗೆ ಹಾನಿಯಾಗಿದ್ದು, ಎನ್​ಡಿಆರ್​ಎಫ್ ಮಾರ್ಗಸೂಚಿ ಅನ್ವಯ ಹೆಕ್ಟೇರ್​ಗೆ 28 ಸಾವಿರ ರೂ. ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ ಎಂದು ತಿಳಿದು ಬಂದಿದೆ.

    ಕೃಷಿಕರಿಗೂ ಬಿಡದ ಗೋಳು: ತಾಲೂಕಿನ ಜಾಲಿ, ಮುಟ್ಟಳ್ಳಿ, ಬೇಂಗ್ರೆ, ಉಳ್ಮಣ್ಣ, ತಲಾಂದ, ಗೋಳಿಬಿಳೂರು, ಹೆಜ್ಜಿಲು ಸೇರಿ ವಿವಿಧ ಭಾಗಗಳಲ್ಲಿ ಅಪಾರ ಪ್ರಮಾಣದ ಕೃಷಿ ಭೂಮಿ ನಾಶವಾಗಿದೆ. ಕೆಲವೆಡೆ ನೀರು ನಿಂತು ಬೆಳೆ ಕೊಳೆತು ಹೋಗಿದ್ದರೆ, ಕೆಲವೆಡೆ ಗುಡ್ಡದ, ಒಡ್ಡಿನ ಮಣ್ಣು ಗದ್ದೆ ಸೇರಿದೆ. ಗುಡ್ಡದ ಮಣ್ಣು ಸೇರಿದ ಕೃಷಿ ಭೂಮಿಗಳಲ್ಲಿ ಈ ಬಾರಿಯ ಮುಂಗಾರು ಬೆಳೆ ಬೆಳೆಯದಂತಾಗಿದೆ. ಇಲಾಖೆ ಗುಂಟೆಗೆ 136 ರೂ. ಪರಿಹಾರ ನೀಡುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ತಾಲೂಕಿನಲ್ಲಿ ಮಳೆಯಿಂದಾಗಿ ನಾಶವಾದ ಕೃಷಿಭೂಮಿಗಳ ಸರ್ವೆ ಕಾರ್ಯ ಕಳೆದ ಒಂದು ವಾರದಿಂದ ನಡೆಯುತ್ತಿದೆ. ಮಾಹಿತಿ ಸಂಗ್ರಹಿಸಿ ಕಂದಾಯ ಇಲಾಖೆಗೂ ನೀಡಲಾಗಿದೆ. ಜಂಟಿ ಸರ್ವೆ ಬಳಿಕ ಪರಿಹಾರ ಪೋರ್ಟಲ್​ನಲ್ಲಿ ರೈತರಿಗೆ ಹಣ ಬಿಡುಗಡೆಯಾಗಲಿದೆ.

    | ಮೇಘನಾ, ಎಒ, ಕೃಷಿ ಇಲಾಖೆ ಭಟ್ಕಳ

    ಮಹಾಮಳೆಗೆ ಭೂ ಕುಸಿತ ಉಂಟಾಗಿ ತೋಟದಲ್ಲಿ ಮಣ್ಣಿನ ರಾಶಿ ಸಂಗ್ರಹವಾಗಿದೆ. ಅಡಕೆ ಮರಕ್ಕೆ ತೀವ್ರ ಹಾನಿಯಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು. ತೋಟದಲ್ಲಿರುವ ಮಣ್ಣು ರಾಶಿಯನ್ನು ಹೇಗೆ ತೆರವುಗೊಳಿಸಬೇಕೆನ್ನುವುದು ಚಿಂತೆಯಾಗಿದೆ.

    | ಶ್ರೀಧರ ಹೆಬ್ಬಾರ, ಕೃಷಿಕ, ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts