More

    ನೈರ್ಮಲ್ಯ ಕಾಪಾಡುವ ಕಾರ್ಮಿಕರ ಶ್ರಮ ಅನನ್ಯ

    ಎನ್.ಆರ್.ಪುರ: ಪಟ್ಟಣದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ನಗರದ ಜೀವನಾಡಿಗಳಿದ್ದಂತೆ. ಪ್ರತಿನಿತ್ಯ ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ನಗರದ ನೈರ್ಮಲ್ಯ ಕಾಪಾಡುವಲ್ಲಿ ಕಾರ್ಮಿಕರ ಶ್ರಮವಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ಯಾವ ಮುಜುಗರವೂ ಇಲ್ಲದೆ ಕೆಲಸ ಮಾಡುತ್ತಾರೆ ಎಂದರು.
    ಪಪಂ ಸದಸ್ಯರು ಕ್ರೀಡೆ ಮತ್ತಿತರ ಆಟೋಟ ನಡೆಸುವ ಮೂಲಕ ದಿನಾಚರಣೆ ಆಯೋಜಿಸಿರುವುದು ಸಂತಸ ತಂದಿದೆ. ಸಮಾಜದ ಸ್ವಾಸ್ಥೃ ಕಾಪಾಡುವ ಅವರ ಸೇವೆಯನ್ನು ಪರಿಗಣಿಸಿ ಸರ್ಕಾರ ಕಾಯಂಗೊಳಿಸಿದೆ. ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸೇವೆಯನ್ನೂ ಕಾಯಂ ಮಾಡಲು ಪ್ರಯತ್ನಿಸಲಾಗುವುದು. ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿಯೇ ಐದು ಭರವಸೆಗಳಲ್ಲಿ ನಾಲ್ಕನ್ನು ಈಡೇರಿಸಿದೆ ಎಂದು ಹೇಳಿದರು.
    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2013ರಲ್ಲಿ ಸೆ.23ರಂದು ಪೌರಕಾರ್ಮಿಕರ ದಿನಾಚರಣೆ ಆರಂಭಿಸಿತ್ತು. ಪ್ರತಿದಿನ ಬೆಳಗ್ಗೆಯೇ ಪಟ್ಟಣದ ಶುಚಿತ್ವ ಕಾಪಾಡುವ ಕರ್ತವ್ಯವನ್ನು ಪೌರಕಾರ್ಮಿಕರು ನಿರ್ವಹಿಸುತ್ತಾರೆ. ಕಳೆದ ವರ್ಷ ಪ್ರತಿ ವಾರ್ಡ್‌ನಲ್ಲಿ ಸ್ವಚ್ಛತಾ ಆಂದೋಲನ ಆರಂಭಿಸಿ ಸ್ವಚ್ಛನಗರ ಮಾಡಲಾಗಿದೆ. ಪೌರ ಕಾರ್ಮಿಕರಿಗೆ ಉಪಾಹಾರ ಭತ್ಯೆ ಸೇರಿ ಮತ್ತಿತರ ಸವಲತ್ತು ನೀಡಲಾಗುತ್ತಿದೆ. ಸ್ಥಳೀಯ ಪಪಂನ 4 ಜನ ಪೌರಕಾರ್ಮಿಕರಲ್ಲಿ ಇಬ್ಬರನ್ನು ಕಾಯಂ ಮಾಡಲಾಗಿದೆ ಎಂದು ತಿಳಿಸಿದರು.
    ಪಪಂ ಸದಸ್ಯ ಎನ್.ಎಲ್.ಮುಕುಂದ ಮಾತನಾಡಿ, ಕರೊನಾ ಸಂದರ್ಭದಲ್ಲೂ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರು ಶ್ರಮಿಸಿದ್ದರು ಎಂದು ಸ್ಮರಿಸಿದರು.
    ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನೀರು ಸಬರಾಜುದಾರರನ್ನು ಕಾಯಂ ಮಾಡುವಂತೆ ಚಂದ್ರಶೇಖರ್ ಶಾಸಕರಿಗೆ ಮನವಿ ಸಲ್ಲಿಸಿದರು.
    ಪಪಂ ಸದಸ್ಯರಾದ ಕುಮಾರಸ್ವಾಮಿ, ಉಮಾ ಕೇಶವ್, ಮುನಾವರ್‌ಪಾಷಾ, ಜುಬೇದಾ, ರೀನಾ ಮೋಹನ್, ಸೈಯದ್ ವಸೀಂ, ಲೆಕ್ಕಾಧಿಕಾರಿ ಉಷಾ, ಸಿಬ್ಬಂದಿ ಚಂದ್ರಕಾಂತ್, ಲಕ್ಷ್ಮಣ್ ಗೌಡ. ಚಂದ್ರಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts