More

    ಸಂಪಾದಕೀಯ| ಕೃಷಿ ವಲಯಕ್ಕೆ ಆತಂಕ; ಅತಿವೃಷ್ಟಿ, ಅನಾವೃಷ್ಟಿಯ ವಿಪರ್ಯಾಸದ ಪರಿಸ್ಥಿತಿ

    ಉತ್ತರ ಭಾರತದ ವಿವಿಧೆಡೆಯಲ್ಲಿ ಮಳೆಯ ಅಬ್ಬರದಿಂದಾಗಿ ಸಾವನ್ನಪ್ಪಿದವರ ಸಾವಿನ ಸಂಖ್ಯೆ 116 ತಲುಪಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮ ದೇಶದ ಕೆಲವೆಡೆ ಅತಿವೃಷ್ಟಿಯಾಗುತ್ತಿದ್ದರೆ, ಇನ್ನು ಹಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆಯ ಜೂಜಾಟದ ಪರಿಸ್ಥಿತಿಯಿಂದಾಗಿ ದೇಶದ ಬಹುಸಂಖ್ಯೆಯ ಜನರ ಜೀವನಾಧಾರ ಹಾಗೂ ಆದಾಯ ಮೂಲವಾಗಿರುವ ಕೃಷಿ ವಲಯದ ಉತ್ಪಾದನೆ ಕುಂಠಿತವಾಗುವ ಭೀತಿ ತಲೆದೋರಿದ್ದು, ಇದರ ಪರಿಣಾಮವಾಗಿ ಆಹಾರ ಧಾನ್ಯಗಳ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ.

    2023ರ ಮೊದಲ ನಾಲ್ಕು ತಿಂಗಳುಗಳಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್​ವರೆಗಿನ 120 ದಿನಗಳಲ್ಲಿ 84 ದಿನ ಭಾರತವು ಹವಾಮಾನ ವೈಪರೀತ್ಯವನ್ನು ಅನುಭವಿಸಿರುವುದು ಆತಂಕಕಾರಿ ಸಂಗತಿಯಾಗಿದೆ. ಅಲ್ಲದೆ, ಈ 84 ದಿನಗಳಲ್ಲಿ 58 ದಿನ ವಿವಿಧೆಡೆ ಆಲಿಕಲ್ಲು ಮಳೆ ಸುರಿದಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಭಾರತದ ಫಲವತ್ತಾದ ಉತ್ತರ, ಮಧ್ಯ ಮತ್ತು ಪಶ್ಚಿಮ ಬಯಲು ಪ್ರದೇಶಗಳಲ್ಲಿ ಮಾಗಿದ, ಚಳಿಗಾಲದಲ್ಲಿ ನೆಟ್ಟ ಬೆಳೆಯಾದ ಗೋಧಿಗೆ ವ್ಯಾಪಕ ಹಾನಿಯಾಗಿ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಆಹಾರ ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ. ಭಾರತವು ಜಾಗತಿಕವಾಗಿ ಅತಿಹೆಚ್ಚು ಅಕ್ಕಿ ರಫ್ತು ಮಾಡುವ ದೇಶವಾಗಿದೆ. ಆದರೀಗ, ಬೆಲೆ ಏರಿಕೆಯಾಗಿರುವುದರಿಂದ ಹಾಗೂ ಎಲ್ ನಿನೋ ಪರಿಣಾಮದಿಂದಾಗಿ ಬೆಳೆ ಅಭಾವ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಕ್ಕಿ ರಫ್ತು ನಿಷೇಧ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಆಲೋಚಿಸುತ್ತಿದೆ.

    ಅತಿವೃಷ್ಟಿಯ ಪರಿಣಾಮವಾಗಿ ಹಿಮಾಚಲ ಪ್ರದೇಶದಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ, ಭೂಕುಸಿತದಿಂದಾಗಿ 80 ಮಂದಿ ಮೃತಪಟ್ಟಿದ್ದಾರೆ. 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯುಂಟಾಗಿದೆ. ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿದ್ದು ರಸ್ತೆ, ಮೆಟ್ರೊ ಸಂಚಾರ ಅಸ್ತವ್ಯಸ್ತವಾಗಿದೆ. ಮತ್ತಷ್ಟು ಮಳೆ ಸುರಿದರೆ ಜನರ ಜೀವನ ಅಪಾಯಕ್ಕೆ ಸಿಲುಕುವ ಸಾಧ್ಯತೆ ಕಂಡುಬರುತ್ತಿದೆ.

    ಇನ್ನು ರಾಜ್ಯದ ಅನೇಕ ಪ್ರದೇಶಗಳಲ್ಲಿ ವಾಡಿಕೆಗಿಂತ ಸಾಕಷ್ಟು ಪ್ರಮಾಣದಲ್ಲಿ ಮಳೆಯ ಕೊರತೆಯಾಗಿರುವುದು ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಲವು ಪ್ರದೇಶಗಳಲ್ಲಿ ರೈತರು ಬಿತ್ತನೆಯನ್ನೂ ಮಾಡಿಲ್ಲವಾದ್ದರಿಂದ ಕೃಷಿ ವಲಯಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೀವ್ರ ಮಳೆಯಿಂದ ಒಂದಿಷ್ಟು ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಆದೇಶಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯದ ವಿವಿಧೆಡೆಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಮುಂದಿನ ದಿನಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದ್ದು, ಇದರಿಂದ ಉಂಟಾಗಬಹುದಾದ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ, ಜಿಲ್ಲೆ, ತಾಲ್ಲೂಕು ಆಡಳಿತಗಳು ಪೂರ್ವ ಸಿದ್ಧತೆಗಳೊಂದಿಗೆ ಮುಂಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ.

    ರಾಜ್ಯದಲ್ಲಿ ಮತ್ತೆ ಮಳೆ ಬಿರುಸು; ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

    ಪ್ರಧಾನಿ ಮೋದಿಗೆ ಫ್ರಾನ್ಸ್​​ನಲ್ಲಿ ಭವ್ಯ ಸ್ವಾಗತ: ಬಾಸ್ಟಿಲ್ ಡೇ ಪಥಸಂಚಲನದಲ್ಲಿ ಭಾಗಿ, ದ್ವಿಪಕ್ಷೀಯ ರಕ್ಷಣಾ ಸಂಬಂಧದ ಬಗ್ಗೆ ಮಾತುಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts