More

    ಗಮನಸೆಳೆಯುತ್ತಿರುವ ಪತ್ರಕರ್ತರ ಮಾಹಿತಿ..!

    ಮುದ್ದೇಬಿಹಾಳ: ಪಟ್ಟಣದ ಬಸ್ ನಿಲ್ದಾಣ ಪ್ರವೇಶದ್ವಾರದಲ್ಲಿ ಕೀರ್ತಿ ಸಾಗರ ಹೋಟೆಲ್ ಮುಂಭಾಗವಿರುವ ವಿಜೇಂದ್ರ ಪಾನ್‌ಶಾಪ್ ಸ್ಥಳೀಯ ಪತ್ರಕರ್ತರ ಹೆಸರು ಮತ್ತು ಅವರ ಮೊಬೈಲ್ ಸಂಖ್ಯೆಗಳನ್ನು ಎಲ್ಲರಿಗೂ ಉಚಿತವಾಗಿ ತಿಳಿಸಿಕೊಡುವ ಮೂಲಕ ಪತ್ರಕರ್ತರ ಪಾನ್‌ಶಾಪ್ ಹೆಸರಿಗೆ ಅನ್ವರ್ಥಕವಾಗಿ ಸಾರ್ವಜನಿಕರ, ಸಂಘಟನೆಗಳ ಗಮನ ಸೆಳೆಯುತ್ತಿದೆ.

    30 ವರ್ಷಗಳ ಹಿಂದೆ ಈ ಪಾನ್‌ಶಾಪ್ ಪ್ರಾರಂಭಿಸಲಾಗಿತ್ತು. ಆಗೆಲ್ಲ ಬಸ್ ನಿಲ್ದಾಣದ ಒಳಭಾಗದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳಿಗೆ ಸುದ್ದಿ ನೀಡಲು ಕೆಲವು ರಾಜ್ಯಮಟ್ಟದ, ವಿಭಾಗಮಟ್ಟದ, ಸ್ಥಳೀಯ ಪತ್ರಿಕೆಗಳ ಬಾಕ್ಸ್ ಅಳವಡಿಸಲಾಗಿತ್ತು. ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ಬಾಕ್ಸ್ ಅಳವಡಿಸುವ ಪದ್ಧತಿ ಕೈಬಿಡಲಾಗಿತ್ತು. ಹೊಸದಾಗಿ ಬಸ್ ನಿಲ್ದಾಣ ನಿರ್ಮಾಣಗೊಂಡ ನಂತರ ಬಾಕ್ಸ್ ಅಳವಡಿಕೆ ಹೆಚ್ಚು ಕಡಿಮೆ ನಿಂತು ಹೋಗಿತ್ತು.

    ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ಧುರೀಣರು ತಮ್ಮ ಸುದ್ದಿ, ಮಾಹಿತಿ ನೀಡಲು ಪತ್ರಕರ್ತರನ್ನು ಹುಡುಕುವ ಪರಿಸ್ಥಿತಿ ಇತ್ತು. ಆಗೆಲ್ಲ ಜನರು, ಸಂಘ ಸಂಸ್ಥೆಗಳವರು ಈ ಪಾನ್‌ಶಾಪ್‌ಗೆ ಬಂದು ಪತ್ರಕರ್ತರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪಾನ್‌ಶಾಪ್ ಮಾಲೀಕ ಅಶೋಕ ಇರಕಲ್, ಪಂಡಿತ ಇರಕಲ್ ಸಹೋದರರು ಸಾರ್ವಜನಿಕರು, ಸಂಘ ಸಂಸ್ಥೆಗಳವರ ಮಾಹಿತಿ ನೀಡಿ ಸಹಕರಿಸುತ್ತಿದ್ದರು.

    ಮೊಬೈಲ್ ಬಳಕೆ ಪ್ರಾರಂಭಗೊಂಡು ಜನಪ್ರಿಯತೆ ಪಡೆದುಕೊಂಡ ಮೇಲೆ ಪಾನ್‌ಶಾಪ್‌ನವರು ಸಾರ್ವಜನಿಕರಿಗೆ ಪತ್ರಕರ್ತರ ಮೊಬೈಲ್ ಸಂಖ್ಯೆಗಳನ್ನು ಬೇಸರಿಸಿಕೊಳ್ಳದೆ ನೀಡುತ್ತಿದ್ದರು. ಇತ್ತೀಚೆಗೆ ಪಾನ್‌ಶಾಪ್‌ನ ವ್ಯಾಪಾರ ವೃದ್ಧಿಸಿದ ಮೇಲೆ ಗ್ರಾಹಕರಿಗೆ ಪಾನ್ ಮತ್ತಿತರ ವಸ್ತುಗಳನ್ನು ಕೊಡುವಾಗೆಲ್ಲ ಯಾರಾದರೂ ಪತ್ರಕರ್ತರ ಮೊಬೈಲ್ ಸಂಖ್ಯೆ ಕೇಳಿದರೆ ಕೊಡುವುದು ವಿಳಂಬವಾಗತೊಡಗಿತ್ತು. ಹಲವರು ಪಾನ್‌ಶಾಪ್‌ನವರ ವಿರುದ್ಧ ಬೇಸರಿಸಿಕೊಳ್ಳುತ್ತಿದ್ದರು.

    ಇದನ್ನರಿತ ಪಂಡಿತ್ ಅವರು ಪಾನ್‌ಶಾಪ್ ಅಂಗಡಿಯ ತಗಡಿನ ಗೋಡೆ, ಮೇಲ್ಭಾಗದ ಪ್ಯಾನಲ್ ಮೇಲೆ ಪ್ರಮುಖ ಪತ್ರಿಕೆಗಳು, ಅವುಗಳನ್ನು ಪ್ರತಿನಿಧಿಸುವ ವರದಿಗಾರರ ಹೆಸರು ಮತ್ತು ಮೊಬೈಲ್ ಸಂಖ್ಯೆ ಬರೆಸಿ ಅನುಕೂಲ ಮಾಡಿಕೊಟ್ಟರು. ಸುದ್ದಿ ಕೊಡಲು ಯಾರಿಗಾದರೂ ಪತ್ರಕರ್ತರ ಅವಶ್ಯಕತೆಯಿದ್ದಲ್ಲಿ ಈ ಪಾನ್‌ಶಾಪ್‌ನತ್ತ ಒಮ್ಮೆ ನೋಡಿದರೆ ಸಾಕು ಅಲ್ಲಿ ತಮಗೆ ಬೇಕಾದ ಪತ್ರಿಕೆ ಮತ್ತು ಪತ್ರಕರ್ತರ ಮಾಹಿತಿ ಮೊಬೈಲ್ ಸಂಖ್ಯೆ ಸಮೇತ ದೊರೆಯುವಂತಾಯಿತು.

    ಸುದ್ದಿ ಕೊಡಲು ಬಸ್ ನಿಲ್ದಾಣಕ್ಕೆ ಬಂದರೆ ಸಾಕು ಅಲ್ಲಿರುವ ವಿಜೇಂದ್ರ ಪಾನ್‌ಶಾಪ್‌ನಲ್ಲಿ ಎಲ್ಲ ಮಾಹಿತಿ ದೊರೆಯುತ್ತದೆ ಎನ್ನುವ ಸಂದೇಶ ಎಲ್ಲ ಕಡೆ ಹರಡಿ ಈ ಪಾನ್‌ಶಾಪ್ ಪತ್ರಕರ್ತರ ಪಾನ್‌ಶಾಪ್ ಎಂದು ಹೆಸರು ಮಾಡತೊಡಗಿದೆ. ಪಾನ್‌ಶಾಪ್ ಮಾಲೀಕ ಪಂಡಿತ್ ಅವರ ಈ ಸೇವೆ ಪತ್ರಕರ್ತರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts