More

    ಕಾಂಡ್ಲಾ ವಾಕ್ ಉದ್ಘಾಟನೆ ಇಂದು

    ಕಾರವಾರ: ಅರಣ್ಯ ಇಲಾಖೆಯಿಂದ ಇಲ್ಲಿನ ಕಾಳಿ ಮಾತಾ ದ್ವೀಪದಲ್ಲಿ ನಿರ್ವಿುಸಿರುವ ರಾಜ್ಯದ ಎರಡನೇ ಕಾಂಡ್ಲಾ ವಾಕ್ ಮಾ.19 ರಂದು ಸಾಯಂಕಾಲ 4 ಗಂಟೆಗೆ ಶಾಸಕಿ ರೂಪಾಲಿ ನಾಯ್ಕ ಅವರಿಂದ ಉದ್ಘಾಟನೆಗೊಳ್ಳಲಿದೆ.

    ಕಾರವಾರ ಕಾಜುಬಾಗದಿಂದ ಅಂದಾಜು ಒಂದು ಕಿಮೀ ಕಾಳಿ ನದಿಯಲ್ಲಿ ಬೋಟ್​ನಲ್ಲಿ ತೆರಳಿದ ನಂತರ ಕಾಳಿ ಮಾತಾ ದೇವಸ್ಥಾನವಿರುವ ಸುಂದರ ದ್ವೀಪವಿದೆ. ಅಲ್ಲಿ 240 ಮೀಟರ್ ಉದ್ದ ಹಾಗೂ ಒಂದೂವರೆ ಮೀಟರ್ ಅಗಲದ ಕಾಂಡ್ಲಾ ವಾಕ್ ನಿರ್ವಿುಸಲಾಗಿದೆ.

    10 ಲಕ್ಷ ರೂಪಾಯಿ ವೆಚ್ಚದಲ್ಲಿ ಮರದ ತುಂಡುಗಳನ್ನು ಬಳಸಿ ನಿರ್ವಿುಸಿದ್ದು, ಓಡಾಟ ಮಾಡಿದಲ್ಲಿ ಸುಂದರ ಪರಿಸರ ಹಾಗೂ ಪಕ್ಷಿ ವೀಕ್ಷಣೆಯ ಅದ್ಭುತ ಅನುಭವ ದೊರೆಯಲಿದೆ. ಈ ಹಿಂದೆಯೇ ಅರಣ್ಯ ಇಲಾಖೆ ಕಾಳಿ ಮಾತಾ ದೇವಸ್ಥಾನವನ್ನು ಕಾಂಡ್ಲಾ ಸಂರಕ್ಷಿತ ತಾಣವನ್ನಾಗಿ ಘೊಷಿಸಿತ್ತು. ಈಗ ಕಾಂಡ್ಲಾ ವನ ವೀಕ್ಷಣೆಗೂ ಅವಕಾಶ ಮಾಡಿಕೊಡಲಾಗುತ್ತಿದೆ.

    ಎರಡು ವರ್ಷಗಳ ಹಿಂದೆ ಹೊನ್ನಾವರದ ಕಾಸರಕೋಡಿನಲ್ಲಿ ಅಲ್ಲಿನ ಡಿಎಫ್​ಒ ಡಾ.ವಸಂತರೆಡ್ಡಿ ಅವರು ಕಾಂಡ್ಲಾ ವಾಕ್ ನಿರ್ವಿುಸಿದ್ದರು. ಅವರು ಕಾರವಾರಕ್ಕೆ ವರ್ಗಾವಣೆಯಾದ ನಂತರ ಇಲ್ಲಿಯೂ ವಿಶೇಷ ಆಸಕ್ತಿ ತೋರಿ ಕಾಂಡ್ಲಾ ವಾಕ್ ನಿರ್ವಿುಸಿದ್ದಾರೆ. ಪರಿಸರ ಪ್ರಿಯರಿಗೆ ಇದೊಂದು ಅದ್ಭುತ ಅನುಭವ ನೀಡುವ ಪ್ರವಾಸಿ ತಾಣವಾಗಲಿದೆ.

    ಏನಿದು ಕಾಂಡ್ಲಾ ವಾಕ್ ..?: ಉಪ್ಪು ಹಾಗೂ ಸಿಹಿನೀರು ಎರಡೂ ಮಿಶ್ರ ವಾತಾವರಣದಲ್ಲಿ, ಹೆಚ್ಚಾಗಿ ನದಿ ಅಳಿವೆ ಪ್ರದೇಶಗಳಲ್ಲಿ ಬೆಳೆಯುವ ಅಪರೂಪದ ಸಸ್ಯ ಕಾಂಡ್ಲಾ. ಅವುಗಳ ಮೇಲೆ ಮರದ ತುಂಡಗಳನ್ನು ಬಳಸಿ ಕಾಲು ಸಂಕದ ಮಾದರಿಯಲ್ಲಿ ಅಟ್ಟಣಿಗೆ ನಿರ್ವಿುಸಲಾಗಿದೆ. ಮೇಲೆ ಚಪ್ಪರದಂತೆ ಇರುವ ಕಾಂಡ್ಲಾ ಗಿಡಗಳು. ಕೆಳಗಡೆ ನೀರು, ಹಕ್ಕಿಗಳ ಚಿಲಿಪಿಲಿಯ ನಡುವೆ ಓಡಾಡುವುದೇ ಅವಿಸ್ಮರಣೀಯ ಅನುಭವ. ಈ ಕಾಂಡ್ಲಾ ವಾಕ್ ಗೋವಾ ಮತ್ತು ಅಂಡಮಾನ್ ದ್ವೀಪ ಪ್ರದೇಶದಲ್ಲಿ ಮಾತ್ರವಿದೆ.

    ಕಾಳಿ ಮಾತಾ ದ್ವೀಪಕ್ಕೆ ತೆರಳಲು ಖಾಸಗಿ ಬೋಟ್ ವ್ಯವಸ್ಥೆ ಇದೆ. ಕಾಂಡ್ಲಾ ವಾಕ್ ವೀಕ್ಷಣೆಗೆ ಕನಿಷ್ಠ ಶುಲ್ಕ ನಿಗದಿಮಾಡಲು ನಿರ್ಧರಿಸಲಾಗಿದೆ.

    | ಡಾ. ವಸಂತರೆಡ್ಡಿ, ಡಿಎಫ್​ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts