More

    ಶಾಲೆಗಳ ಜೀರ್ಣೋದ್ಧಾರದಿಂದ ಹರಡುತಿದೆ ಅಕ್ಷರಗಳ ಬೆಳಕು

    ಶಾಲೆಗಳ ಜೀರ್ಣೋದ್ಧಾರದಿಂದ ಹರಡುತಿದೆ ಅಕ್ಷರಗಳ ಬೆಳಕು‘ಐಸಿಯುನಲ್ಲಿ ಪೇಷಂಟ್ ಇಲ್ಲ ಅಂತ ಆಸ್ಪತ್ರೆ ಮುಚ್ಚಲ್ಲ. ಸದಸ್ಯರು ಬರಲ್ಲ ಅಂತ ಅಸೆಂಬ್ಲಿ, ಪಾರ್ಲಿಮೆಂಟ್ ಮುಚ್ಚಲ್ಲ. ಮಕ್ಕಳಿಲ್ಲ ಅಂತ ಶಾಲೆ ಮುಚ್ಚೋದು ಸರಿನಾ?’… ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದ ಈ ಡೈಲಾಗ್ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲ, ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬ ಕೆಚ್ಚನ್ನೂ ಎಷ್ಟೋ ಜನರಲ್ಲಿ ಜಾಗೃತಗೊಳಿಸಿತು. ಶಿಕ್ಷಣದ ಸವಾಲುಗಳ ಬಗ್ಗೆ ಚರ್ಚೆಯಾಗುವಾಗಲೆಲ್ಲ ಸರ್ಕಾರಿ ಶಾಲೆಗಳ ದಯನೀಯ ಸ್ಥಿತಿಯ ಕಳವಳ ಗಟ್ಟಿದನಿಯಲ್ಲೇ ಕೇಳಿಬರುತ್ತದೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆಗೆ ಬರಲು ಸಿದ್ಧರಿದ್ದರೂ, ಆಗಲೋ ಈಗಲೋ ಬೀಳುವಂಥ ಕಟ್ಟಡಗಳು, ಸೋರುವ ತರಗತಿ ಕೋಣೆಗಳು, ಮುರಿದ ಬೆಂಚು, ಟೇಬಲ್​ಗಳು, ಕುಡಿಯುವ ನೀರಿಗೂ ತತ್ವಾರದಂಥ ಸ್ಥಿತಿ ಇರುವಾಗ ಅಲ್ಲಿ ಶೈಕ್ಷಣಿಕ ವಾತಾವರಣ ರೂಪುಗೊಳ್ಳಲು ಹೇಗೆ ಸಾಧ್ಯ? ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿನ ಬಹುತೇಕ ಸರ್ಕಾರಿ ಶಾಲೆಗಳು ನಿರ್ವಣವಾಗಿರುವುದು 1930-40ರ ದಶಕದಲ್ಲಿ. ಆ ಕಟ್ಟಡಗಳು ಈಗ ಶಿಥಿಲಾವಸ್ಥೆ ತಲುಪಿದ್ದು, ಕಲಿಕೆಗೆ ಪೂರಕವಾಗುವಂಥ ಸೌಲಭ್ಯಗಳಿಂದ ವಂಚಿತವಾಗಿವೆ.

    ‘ಸರ್ಕಾರಿ ಶಾಲೆ’ ಎಂದರೆ ಅದು ಬರೀ ಭೌತಿಕ ವಿನ್ಯಾಸವಲ್ಲ. ಇಲ್ಲಿ ಅಕ್ಷರಗಳು ಅರಳುತ್ತವೆ, ಬಾಲ್ಯ ನಲಿದಾಡುತ್ತದೆ, ವಿದ್ಯೆ ಉಸಿರಾಡುತ್ತದೆ, ಜ್ಞಾನ ವೃದ್ಧಿಯಾಗುತ್ತದೆ, ಕನಸುಗಳು ಹರಡಿಕೊಳ್ಳುತ್ತವೆ, ಕಲಿಸುತ್ತ ಕಲಿಸುತ್ತ ಶಿಕ್ಷಕರೂ ಮಕ್ಕಳಾಗುತ್ತಾರೆ, ಗೆಳೆಯರ ಕಲರವ ಹೊಸ ಲೋಕವನ್ನೇ ಸೃಷ್ಟಿಸುತ್ತದೆ. ಚಿಣ್ಣರ ಮುಗ್ಧ ಮನಸುಗಳು ಎತ್ತರಕ್ಕೆ ಹಾರಲು ಹೊಸ ರೆಕ್ಕೆಗಳನ್ನು ಕಟ್ಟಿಕೊಳ್ಳುತ್ತವೆ. ಕಲಿಕೆಯ ಒಂದೊಂದೇ ಹಂತ ಆತ್ಮವಿಶ್ವಾಸವನ್ನು ಗಟ್ಟಿಮಾಡುತ್ತ ಹೋಗುತ್ತದೆ. ‘ಇದು ನಮ್ಮ ಶಾಲೆ, ನಮ್ಮ ತರಗತಿ, ನಮ್ಮ ಆಟದ ಅಂಗಳ’ ಎಂಬ ಭಾವಸಂಭ್ರಮ ಸರ್ಕಾರಿ ಶಾಲೆಯನ್ನು ಮಕ್ಕಳ ಎರಡನೇ ಮನೆಯಾಗಿ ಅಷ್ಟೇ ಅಲ್ಲ, ಪ್ರತ್ಯಕ್ಷ ವಿದ್ಯಾದೇಗುಲವಾಗಿಸುತ್ತದೆ. ಆದರೆ, ‘ಶಾಲೆ’ ಎಂದಾಕ್ಷಣ ಅಲ್ಲೊಂದು ಚೇತೋಹಾರಿಯಾದ ಶೈಕ್ಷಣಿಕ ವಾತಾವರಣ ಇರಬೇಕು ಅಲ್ಲವೇ? ದುರ್ಬಲವಾದ ಕಟ್ಟಡಗಳಲ್ಲಿ ಸಶಕ್ತವಾದ ಮನಸ್ಸುಗಳನ್ನು ಕಟ್ಟಲು ಹೇಗೆ ತಾನೆ ಸಾಧ್ಯ? ಈ ಪ್ರಶ್ನೆ ಒಂದಿಷ್ಟು ಕನ್ನಡಿಗರೇ ಆದ ಅನಿವಾಸಿ ಭಾರತೀಯರಿಗೆ ಕಾಡಿದ್ದೇ ತಡ, ಅವರೆಲ್ಲ ಅದು ‘ಸರ್ಕಾರದ ಜವಾಬ್ದಾರಿ’ ಎಂದು ನುಣುಚಿಕೊಳ್ಳಲಿಲ್ಲ. ಬದಲಾಗಿ ಅವರದ್ದೇ ಆದ ಸಣ್ಣ ತಂಡ ರೂಪಿಸಿಕೊಂಡು, ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ಮರುನಿರ್ವಣ ಆರಂಭಿಸಿಯೇ ಬಿಟ್ಟರು. ಒಳ್ಳೆಯ ಸಂಕಲ್ಪ, ಕೆಲಸಗಳಿಗೆ ಸಮಾಜ ನೆರವಾಗುತ್ತದೆ ಎಂಬ ನಂಬಿಕೆ ಮತ್ತೆ ನಿಜವಾಯಿತು. ಒಂದೊಂದೇ ಶಾಲೆಗಳು ಸುಸಜ್ಜಿತ ಕಟ್ಟಡಗಳೊಂದಿಗೆ ಎದೆಯುಬ್ಬಿಸಿ ನಿಂತಾಗ, ಅಲ್ಲಿ ನನಸಾಗಿದ್ದು ನೂರಾರು ಕನಸುಗಳು, ನೂರಾರು ಮಕ್ಕಳ ಆಶಯಗಳು! ಸಂಸ್ಕೃತಿಯ ಉತ್ಥಾನಕ್ಕಾಗಿ ದೇವಸ್ಥಾನಗಳ ಜೀಣೋದ್ಧಾರ ಎಷ್ಟು ಅವಶ್ಯವೋ, ಸಮಾಜದ ನವೋತ್ಕರ್ಷಕ್ಕೆ ಶಾಲೆಗಳ ಜೀಣೋದ್ಧಾರ ಅಷ್ಟೇ ಅವಶ್ಯ.

    ಹೀಗೆ, ಸಮಾಜದ ದೊಡ್ಡ ಕೊರತೆಯನ್ನು ನೀಗಿಸುತ್ತಿರುವ ಲಾಭರಹಿತ ಸ್ವಯಂಸೇವಾ ಸಂಸ್ಥೆ ಓಸ್ಯಾಟ್ ಅಂದರೆ one school at a time. (https://osaat.org/) ಅಮೆರಿಕದಲ್ಲಿ ಐಟಿ ಸೇರಿದಂತೆ ವಿವಿಧ ವೃತ್ತಿಯಲ್ಲಿ ತೊಡಗಿರುವ ಕನ್ನಡಿಗರು ಶಾಲೆಗಳ ಮರುನಿರ್ವಣ ಕಾರ್ಯಕ್ಕೆ ಆಂದೋಲನದ ಸ್ವರೂಪ ನೀಡಿದ್ದಾರೆ. 2003ರಲ್ಲಿ ಅಮೆರಿಕದಲ್ಲಿ ನೋಂದಣಿಯಾಗಿ ಕೆಲಸ ಆರಂಭಿಸಿದ ಈ ಸಂಸ್ಥೆ, ಭಾರತದಲ್ಲಿ ಕೆಲವರು ಇದ್ದು ಶಾಲೆಗಳಿಗೆ ಹೊಸರೂಪ ನೀಡುವುದು ಅಗತ್ಯ ಎಂದು ಸ್ವಲ್ಪ ಸಮಯದಲ್ಲೇ ಮನಗಂಡಿತು. 2005-06ರಲ್ಲಿ ಒಂದಿಷ್ಟು ಎನ್​ಆರ್​ಐಗಳು ಕನ್ನಡನಾಡಿನ ಮಡಿಲಿಗೆ ಮರಳಿದರು. 2011ರಲ್ಲಿ ಸಂಸ್ಥೆಯ ಶಾಖೆ ಭಾರತದಲ್ಲಿ ಕಾರ್ಯಾರಂಭ ಮಾಡಿತು. ವಾದಿರಾಜ್ ಭಟ್ ಮತ್ತು ಅವರ 50 ಸದಸ್ಯರ ತಂಡ ಕಾರ್ಯಹೊಣೆ ಸ್ವೀಕರಿಸಿತು. 2015ರ ಹೊತ್ತಿಗೆ 9-10 ಯೋಜನೆಗಳು ಪೂರ್ಣಗೊಂಡವು. ಆ ಬಳಿಕ ಕೆಲಸ ಮತ್ತಷ್ಟು ಚುರುಕು ಪಡೆದುಕೊಂಡಿತು. 2021ರ ಹೊತ್ತಿಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಮಣಿಪುರ ಸೇರಿ 42 ಯೋಜನೆಗಳು ಪೂರ್ಣಗೊಂಡಿವೆ. 2021ರ ಅಂತ್ಯಕ್ಕೆ 55 ಯೋಜನೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಶಾಲಾಕಟ್ಟಡ, ತರಗತಿ ಕೋಣೆ, ಶೌಚಗೃಹ ನಿರ್ಮಾಣ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಮಾಡಲಾಗಿದೆ. ಪ್ರತಿ ಯೋಜನೆಗೂ ಸರಾಸರಿ 40 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಅಗತ್ಯ ಇರುವಲ್ಲಿ ಹೆಚ್ಚಿನ ಮೊತ್ತವನ್ನೂ ವ್ಯಯಿಸಲಾಗಿದೆ. ಕಳೆದ ವರ್ಷ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯನ್ನು 95 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಈ ಕಟ್ಟಡವನ್ನು ಉದ್ಘಾಟಿಸಿ, ಓಸ್ಯಾಟ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಡಿವಿಜಿ ಹುಟ್ಟಿದ, ಅವರ ಪೂರ್ವಜರ ಮನೆ, ಸರ್ಕಾರಕ್ಕೆ ದಾನವಾಗಿ ಬಂದು, ಶಾಲೆಯಾಗಿ ಪರಿವರ್ತನೆಗೊಂಡಿತು. ಶಿಥಿಲಗೊಂಡಿರುವ ಆ ಕಟ್ಟಡದ ಪುನರ್ ನಿರ್ವಣದ ಹೊಣೆ ಹೊರಲು ಓಸ್ಯಾಟ್ ಸಂಸ್ಥೆ ಸಿದ್ಧವಾಗುತ್ತಿದೆ.

    ಕಟ್ಟಡ ನಿರ್ಮಾಣ ಎಂದರೆ ಅದು ಕೇವಲ ಇಟ್ಟಿಗೆ, ಸಿಮೆಂಟ್​ಗಳ ಮಿಶ್ರಣ ಅಥವಾ ನಾಲ್ಕುಗೋಡೆಗಳ ಆವರಣ ಅಲ್ಲ. ಪ್ರತೀ ಮಗುವಿನಲ್ಲೂ ಕಲಿಕೆಯಲ್ಲಿ ಉತ್ಸಾಹ ಬರುವಂಥ, ಶಿಕ್ಷಕರಿಗೂ ಸ್ಪೂರ್ತಿ ತುಂಬಬಲ್ಲ ವಾತಾವರಣವನ್ನು ಈ ನಿರ್ವಣಗಳ ಮೂಲಕ ಸೃಷ್ಟಿಸಲಾಗುತ್ತಿದೆ. ಇಷ್ಟೊಂದು ಹಣ ಯಾರು ಕೊಡುತ್ತಾರೆ ಎಂಬ ಪ್ರಶ್ನೆ ಕಾಡಬಹುದು. ಅನಿವಾಸಿ ಭಾರತೀಯರ ವೈಯಕ್ತಿಕ ದೇಣಿಗೆ ಮತ್ತು ಕಾಪೋರೇಟ್ ಸಂಸ್ಥೆಗಳ ದೇಣಿಗೆ (ಸಿಎಸ್​ಆರ್) ಮೂಲಕ ಇದು ಸಾಧ್ಯವಾಗಿದೆ. ಒಬ್ಬರೇ ಇಡೀ ಶಾಲೆಯ ಮರುನಿರ್ವಣದ ಹೊಣೆ ಹೊತ್ತ ನಿದರ್ಶನಗಳೂ ಇವೆ. ಅಷ್ಟೇ ಅಲ್ಲ, ಓಸ್ಯಾಟ್ ಯುಎಸ್​ಎ ತಂಡ ಸಂಗೀತ, ನೃತ್ಯ, ಮನರಂಜನೆಯ ಕಾರ್ಯಕ್ರಮಗಳನ್ನು ನಡೆಸಿ, ಹಣ ಸಂಗ್ರಹಿಸುತ್ತದೆ.

    ಶಾಲೆಗಳ ಜೀರ್ಣೋದ್ಧಾರದಿಂದ ಹರಡುತಿದೆ ಅಕ್ಷರಗಳ ಬೆಳಕು
    ಮಾಲೂರು ಶಾಲೆಯ ಹಳೆಯ ಕಟ್ಟಡ

    ‘2025ರ ಹೊತ್ತಿಗೆ 100 ಶಾಲೆಗಳ ಮರುನಿರ್ವಣ ಮಾಡುವ ಗುರಿ ಇದೆ’ ಎಂದು ತಿಳಿಸುತ್ತ ಈ ಪ್ರೇರಣಾದಾಯಿ ಪಯಣದ ಪರಿಣಾಮಗಳನ್ನೂ ವಿವರಿಸಿದರು ಓಸ್ಯಾಟ್ ತಂಡದ ಜಿ.ಕೆ.ಭಟ್, ಸುಧೀರ್ ಹುಲ್ಲುಮನೆ ಮತ್ತು ಎನ್​ವಿಜಿಕೆ ಭಟ್. ಎಲ್ಲೆಲ್ಲಿ ಶಾಲೆಗಳ ಮರುನಿರ್ವಣ ಅಥವಾ ಜೀಣೋದ್ಧಾರವಾಗಿದೆಯೋ ಅಲ್ಲೆಲ್ಲ ಮಕ್ಕಳ ಪ್ರವೇಶಾತಿ ಸಂಖ್ಯೆ ಹೆಚ್ಚಿದೆ, ಕಲಿಕೆಯಲ್ಲಿ, ಫಲಿತಾಂಶದಲ್ಲಿ ಪ್ರಗತಿ ಕಂಡುಬಂದಿದೆ. ಶಾಲೆಗಳ ಆಯ್ಕೆಗೆ ಓಸ್ಯಾಟ್ ಗಟ್ಟಿ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಪ್ರಾಶಸ್ಱ. ಮತ್ತು ಅಲ್ಲಿನ ಪ್ರತಿ ತರಗತಿಗೆ 25 ಮಕ್ಕಳಾದರೂ ಇರಬೇಕು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮಕ್ಕಳ ಅಭಿವೃದ್ಧಿ ಬಗ್ಗೆ, ಎಸ್​ಡಿಎಂಸಿ ಮತ್ತು ಹಳ್ಳಿಯ ಧುರೀಣರು ಶಾಲೆಯ ನಿರ್ವಹಣೆಯ ಬಗ್ಗೆ ಆಸಕ್ತಿ ಹೊಂದಿರಬೇಕು. ಇದನ್ನೆಲ್ಲ ಅವಲೋಕಿಸಲೆಂದೇ ಒಂದು ತಂಡ ಶಾಲೆಗೆ ಭೇಟಿ ನೀಡುತ್ತದೆ. ಈ ಮೇಲ್ಕಂಡ ಅಂಶಗಳೆಲ್ಲ ಪೂರಕವಾಗಿದ್ದರೆ, ಪ್ರೊಜೆಕ್ಟ್ ರಿಪೋರ್ಟ್ ಸಿದ್ಧಗೊಳ್ಳುತ್ತದೆ. ದಾನಿಗಳ ಮುಂದೆ ಅದನ್ನು ಪ್ರಸ್ತುತ ಪಡಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಗುತ್ತಿಗೆ ನೀಡಿ, ನಿಗದಿತ ಕಾಲಮಿತಿಯಲ್ಲಿ ನಿರ್ವಿುಸಲಾಗುತ್ತದೆ. ಮತ್ತು ಮೇಲುಸ್ತುವಾರಿಗಾಗಿ ಓಸ್ಯಾಟ್​ನ ಸ್ವಯಂಸೇವಕರನ್ನು ನಿಯೋಜಿಸಲಾಗುತ್ತದೆ. ಕಟ್ಟಡ ನಿರ್ವಣದ ಬಳಿಕ ಕಂಡುಬರುವ ಸುಧಾರಣೆ, ಬದಲಾವಣೆಗಳನ್ನೂ ಗಮನಿಸಲಾಗುತ್ತದೆ. ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ, ಕೊಡುವ ಕೈಗಳ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಹಾಗಾಗಿ, ಇಡೀ ಹಳ್ಳಿಯ ಹೆಮ್ಮೆಯ ಪ್ರತೀಕವಾಗಿ ಈ ಜ್ಞಾನದೇಗುಲಗಳು ತಲೆಎತ್ತಿವೆ. ಅಲ್ಲದೆ, ಸರ್ಕಾರಿ ಶಾಲೆಗಳು ಹೇಗಿರಬೇಕು ಎಂಬುದಕ್ಕೂ ಮಾದರಿಯಾಗಿವೆ. ಓಸ್ಯಾಟ್​ನ ಮೊದಲ ಯೋಜನೆ ಪೂರ್ಣಗೊಂಡಿದ್ದು ಕಾರ್ಕಳ ತಾಲೂಕಿನ ಬಜಗೊಳಿಯಲ್ಲಿ (2005). ಅಲ್ಲಿ ಮೂರು ತರಗತಿ ಕೋಣೆಗಳನ್ನು ನಿರ್ವಿುಸಿ, ಪೀಠೋಪಕರಣ, ಪಾಠೋಪಕರಣ ಒದಗಿಸಲಾಯಿತು. ಹಳೆಯ ಶಿಥಿಲ ಕಟ್ಟಡವನ್ನು ಕೆಡವಿ ಬನ್ನೇರಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (2007) ನಿರ್ವಿುಸಲಾಯಿತು. ಆಂಧ್ರದ ಕರ್ನಲ್ ಜಿಲ್ಲೆಯ ಪೆದ್ದತುಂಬಲಮ್ ಗ್ರಾಮದ ಜಿಲ್ಲಾ ಪಂಚಾಯತ್ ಹೈಸ್ಕೂಲ್ 2020ರಲ್ಲಿ ಮರುನಿರ್ವಣಗೊಂಡಿದ್ದರೆ, ದಾವಣಗೆರೆ ಜಿಲ್ಲೆ ಸುರಹೊನ್ನೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಜೀಣೋದ್ಧಾರ ಈ ವರ್ಷ ಪೂರ್ಣಗೊಂಡಿದೆ.

    ಕರೊನಾ ಮಹಾಮಾರಿಯ ಅವಧಿಯಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತವಾಗುತ್ತಿರುವುದನ್ನು ಗಮನಿಸಿ, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ನಡುವಿನ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು odisi- osaat digital school infrastructure ಎಂಬ ವಿನೂತನ ಯೋಜನೆಯನ್ನು ಓಸ್ಯಾಟ್ ಕೈಗೊಂಡಿದೆ.

    ಮೂರ್ನಾಲ್ಕು ವಿದ್ಯಾರ್ಥಿಗಳ ತಂಡಕ್ಕೆ ಒಂದು ಟ್ಯಾಬ್ ನೀಡಿ, ಅದರಲ್ಲಿ ಪಾಠ ನೋಡುವಂತೆ, ಕೇಳುವಂತೆ ಮಾಡಲಾಗಿದೆ. ಪ್ರತಿ ಪಾಠದ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ಕಿರುಪರೀಕ್ಷೆಗಳನ್ನು ಎದುರಿಸಲು ಇದು ಸಹಾಯಕವಾಗಿದೆ. ಮಕ್ಕಳ ರಿವಿಜನ್​ಗೂ ಅನುಕೂಲವಾಗಿದ್ದು, ಕಲಿಕೆ ಪರಿಣಾಮಕಾರಿಯಾಗಿದೆ. ಬೇರೆ ಆಪ್​ಗಳು ಡೌನ್​ಲೋಡ್ ಆಗದಂತೆ ಲಾಕ್ ವ್ಯವಸ್ಥೆ ಇದ್ದು, ಪಾಠಕ್ಕೆ ಸಂಬಂಧಿಸಿದ ಸಾಮಗ್ರಿಗಳು ಸುಲಭವಾಗಿ ಲಭ್ಯ ಆಗುತ್ತವೆ. ಮಕ್ಕಳು ಕಲಿಕೆಯ ಯಾವ ಹಂತದಲ್ಲಿದ್ದಾರೆ ಎಂದು ಪರೀಕ್ಷಿಸುವ ಆಯ್ಕೆಯನ್ನೂ ಈ ಟ್ಯಾಬ್ ಮೂಲಕ ಶಿಕ್ಷಕರಿಗೆ ನೀಡಲಾಗಿದೆ. ಕೆಲ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೆ ಬಂದಿದ್ದು, ಹೆಚ್ಚೆಚ್ಚು ವಿದ್ಯಾಮಂದಿರಗಳಿಗೆ ವಿಸ್ತರಿಸುವ ಯೋಜನೆ ಇದೆ.

    ‘ಶಿಕ್ಷಣದಲ್ಲಿ ಮೂಲಸೌಕರ್ಯಗಳ ಕೊರತೆ ನಿವಾರಿಸಿದರೆ, ದೊಡ್ಡ ಬದಲಾವಣೆ ಸಾಧಿಸಿದಂತೆಯೇ. ಅದಕ್ಕಾಗಿ ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ, ನಾವು ಕಲಿತ ಸರ್ಕಾರಿ ಶಾಲೆಯ ನೆನಪುಗಳು ಈ ಕಾರ್ಯಕ್ಕೆ ಪ್ರೇರೇಪಿಸಿವೆ’ ಎಂದು ತಂಡದ ಸದಸ್ಯರು ಹೇಳುವಾಗ, ಸಂತೃಪ್ತಿಯ ಭಾವ ಪ್ರಕಟವಾಗುತ್ತಿತ್ತು. ನಿಮ್ಮ ಹಳ್ಳಿಯ ಶಾಲೆಯೂ ಜೀರ್ಣೋದ್ಧಾರ ಆಗಬೇಕಿದೆಯೇ? ಅದನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವ ಇಚ್ಛಾಶಕ್ತಿ ಇದೆಯೇ? ಹಾಗಿದ್ದರೆ, ನಿಮಗೆ ನೆರವಾಗಲು ಓಸ್ಯಾಟ್ ಸಿದ್ಧವಿದೆ.

    ಸಮಸ್ಯೆಗಳ ಬಗ್ಗೆ ದೂರುತ್ತ ಕಾಲ ತಳ್ಳುವುದಕ್ಕಿಂತ, ಪರಿಹಾರದ ನಿಟ್ಟಿನಲ್ಲಿ ಇಟ್ಟ ಒಂದು ಹೆಜ್ಜೆಯೂ, ಮುಂದೆ ಪರಿವರ್ತನೆಯ ಹೆದ್ದರೆಯನ್ನೇ ನಿರ್ವಿುಸಬಹುದು ಎಂಬುದಕ್ಕೆ ಇಂಥ ಪ್ರಯತ್ನಗಳು, ಕಾರ್ಯಗಳು ಸಾಕ್ಷಿ. ಒಂದೊಂದು ಶಾಲೆಗಳ ಅಭಿವೃದ್ಧಿಯೆಂದರೆ ಅದು ಸಂಸ್ಕೃತಿಯ ಉತ್ಕರ್ಷವೇ ಸರಿ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts