More

    ಬಿಸಿಲ ತಾಪ ಅರೇಬಿಕಾ ಕಾಫಿಗೆ ಕಂಟಕ

    ಹಿರಿಕರ ರವಿ ಸೋಮವಾರಪೇಟೆ

    ಕಳೆದ ಮೂರು ವಾರಗಳಿಂದ ತಾಲೂಕಿನಾದ್ಯಂತ ಬಿಸಿಲ ಧಗೆ ಹೆಚ್ಚುತ್ತಿದೆ. ಇದರಿಂದ ಕಾಫಿ ತೋಟಗಳಲ್ಲಿ ಗಿಡಗಳು ಒಣಗುತ್ತಿದ್ದು, ಅರೇಬಿಕಾ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಅರೇಬಿಕಾ ಮತ್ತು ರೊಬಸ್ಟಾ ಕಾಫಿಗಿಡಗಳನ್ನು ಉಳಿಸಿಕೊಳ್ಳಲು ಹಾಗೂ ಹೂ ಅರಳಿಸಲು ತೋಟಗಳಿಗೆ ಕೊಳವೆ ಬಾವಿಗಳಿಂದ ವಿದ್ಯುತ್ ಪಂಪ್‌ಸೆಟ್‌ಗಳ ಮೂಲಕ ನೀರು ಹರಿಸುವ ಪ್ರಯತ್ನ ನಡೆದಿದೆ. ಇನ್ನೊಂದು ಕಡೆ ಅತೀಯಾದ ಬಿಸಿಲಿನ ತಾಪಕ್ಕೆ ಅರೇಬಿಕಾ ಕಾಫಿ ಗಿಡಗಳು ಬಿಳಿಕಾಂಡಕೊರಕ ರೋಗಬಾಧೆ((ಕ್ಸೈಲೋಟ್ರೀಕಸ್‌ಕ್ವಾಡ್ರಿಪಸ್) ಗೆ ತುತ್ತಾಗಿ ಬೆಳೆಗಾರರು ಆತಂಕಗೊಂಡಿದ್ದಾರೆ.

    ಅಕ್ಟೋಬರ್‌ನಲ್ಲಿ ಕೀಟಬಾಧೆ ಕಾಣಿಸಿಕೊಂಡರೆ, ನಂತರ ಮಾರ್ಚ್‌ನಲ್ಲೂ ಕೀಟಗಳ ಸಂತಾನೋತ್ಪತಿಯಾಗುತ್ತದೆ. ಪ್ರಸಕ್ತ ವರ್ಷ ಫೆಬ್ರವರಿಯಲ್ಲೇ ರೋಗಪೀಡಿತ ಅರೇಬಿಕಾ ಕಾಫಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಈಗ ರೋಗಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಬೆಳೆಗಾರರು ಹೇಳಿದರು.

    ಬಿಳಿಕಾಂಡ ಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ, ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿರುವುದರಿಂದ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ 4ರಿಂದ 5 ವರ್ಷಗಳು ಬೇಕಾಗುತ್ತದೆ. ಕೊಡಗು ಜಿಲ್ಲೆಯ ಮಟ್ಟಿಗೆ ಅತಿಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ 50 ಕೆ.ಜಿ.ತೂಕದ ಅರೇಬಿಕಾ ಪಾರ್ಚ್‌ಮೆಂಟ್‌ಗೆ 13,800 ರೂ. ಹಾಗೂ ಅರೇಬಿಕಾ ಚೆರ‌್ರಿಗೆ 6800 ರೂ. ಸಿಕ್ಕಿದೆ. ಎಕರೆಯೊಂದರಲ್ಲಿ 600 ರಿಂದ 700 ಕಾಫಿಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ 25 ರಿಂದ 40 ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗುತ್ತಿವೆ. ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ, ಶಾಂತಳ್ಳಿ, ಸುಂಠಿಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕಾಫಿ ತೋಟದಲ್ಲಿ ಕಾಂಡಕೊರಕ ಕೀಟಬಾಧೆ ಹೆಚ್ಚಾಗಿದೆ.

    ರೊಬಸ್ಟಾ ಕಾಫಿಗೆ ಬೇರಿ ಬೋರರ್ ಕೀಟ ಬಾಧೆಯಿಂದಲೂ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಗಿಡದ ಬುಡದಲ್ಲಿ ಬಿದ್ದಿರುವ ಕಾಫಿ ಕಾಯಿಯನ್ನು ಹೆಕ್ಕಲೇಬೇಕಾದ ಅನಿವಾರ್ಯತೆ ಇದೆ. ಕಾಫಿ ಬೀಜವನ್ನು ತಿನ್ನುವ ಕೀಟಗಳ ಸಂತಾನೋತ್ಪತಿ ಹೆಚ್ಚಾಗಿ ಮುಂದಿನ ಫಸಲಿಗೂ ಹಾನಿ ಮಾಡುವ ಸಂಭವಿರುವುದರಿಂದ ಬಿದ್ದ ಕಾಫಿಯನ್ನು ಹೆಕ್ಕಬೇಕಾಗಿದೆ. ಕಾಫಿ ಬೀಜವನ್ನು ಹೆಕ್ಕಲು ಕಾರ್ಮಿಕರ ಕೊರತೆಯಿಂದ. ಅಲ್ಲದೆ ದುಪ್ಪಟ್ಟು ಕೂಲಿ ಕೇಳುತ್ತಿರುವುದರಿಂದ ಆರ್ಥಿಕ ನಷ್ಟವನ್ನು ಬೆಳೆಗಾರರು ಅನುಭವಿಸಬೇಕಾಗಿದೆ ಎಂದು ಬೆಳೆಗಾರ ವಿಜಯ್ ಕುಮಾರ್ ಹೇಳಿದರು. ಈಗ ಅರೇಬಿಕಾ ಕಾಫಿ ತೋಟದಲ್ಲೂ ಬೇರ‌್ರಿ ಬೋರರ್ ಹಾವಳಿ ಜಾಸ್ತಿ ಆಗಿರುವುದರಿಂದ ಕಾಫಿಯಲ್ಲಿ ನಷ್ಟದ ಕೃಷಿಯಾಗಲಿದೆ ಎಂದರು.

    ಅರೇಬಿಕಾ ಕಾಫಿ: ಕೊಡಗು ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 74,495 ಹೆಕ್ಟೇರ್‌ನಲ್ಲಿ ರೋಬಸ್ಟಾ, 28,030 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 28,540 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶ ಆಗಿರುವುದರಿಂದ 22,940 ಹೆಕ್ಟೇರ್‌ನಲ್ಲಿ ಅರೇಬಿಕಾ, 5,600 ಹೆಕ್ಟೇರ್‌ನಲ್ಲಿ ರೊಬಸ್ಟಾ ಬೆಳೆಯಲಾಗುತ್ತಿದೆ.

    ಪ್ರತಿ ವರ್ಷ ನಾನಾ ಕಾರಣಗಳಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದೆ. ಬೋರ್‌ವೆಲ್, ಹೊಳೆ, ಕೆರೆಗಳಿಂದ ನೀರನ್ನು ಹಾರಿಸಿ ಗಿಡ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅತೀಯಾದ ಕೂಲಿಯಿಂದ ಕಾಫಿ ತೋಟಗಳ ನಿರ್ವಹಣೆ ಕಷ್ಟಕರವಾಗಿ, ಕಾಫಿ ತೋಟಗಳು ರೋಗಪೀಡಿತವಾಗಿವೆ. ಸರ್ಕಾರ ಸಣ್ಣಬೆಳೆಗಾರರ 10 ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ರಸಾಯನಿಕ ಗೊಬ್ಬರಗಳಿಗೆ ಅತೀ ಹೆಚ್ಚಿನ ಸಬ್ಸಿಡಿ ಕೊಡಬೇಕು. ಫಸಲು ಹಾನಿಗೆ ಸೂಕ್ತ ಪರಿಹಾರ ನೀಡಬೇಕು.

    ವಿ.ಎಂ.ಗೌತಮ್, ಕಾಫಿ ಬೆಳೆಗಾರ, ಕಿರಗಂದೂರು ಗ್ರಾಮ.

    ಉತ್ಪಾದನಾ ವೆಚ್ಚ ಕಡಿಮೆಯಾಗಲಿ: ಪ್ರಸಕ್ತ ವರ್ಷ ಅತೀ ಹೆಚ್ಚು ತಾಪಮಾನವಿದೆ. ಕಾಫಿ ತೋಟಗಳಲ್ಲಿ ಉತ್ಪಾದನಾವೆಚ್ಚ ಕಡಿಮೆ ಮಾಡಿಕೊಳ್ಳಬೇಕು. ಮೊದಲು ಮಣ್ಣು ಪರೀಕ್ಷೆ ಮಾಡಿಕೊಳ್ಳಬೇಕು. ಮಣ್ಣಿನ ರಸಾಯನಿಕ ಗೊಬ್ಬರ ಬಳಸಬೇಕು. ಉಷ್ಣಾಂಶಕ್ಕೆ ಬಿಳಿ ಕಾಂಡಕೊರಕಗಳ ಹಾವಳಿ ಹೆಚ್ಚಾಗುತ್ತದೆ. ರೋಗಪೀಡಿತ ಗಿಡಗಳನ್ನು ಕಿತ್ತು ಕೂಡಲೆ ಕಾಂಡಗಳನ್ನು ಸುಟ್ಟು ನಾಶಮಾಡಬೇಕು ಅಥವಾ ಕೆರೆಗಳಲ್ಲಿ 20ದಿನಗಳ ಕಾಲ ಕಾಂಡಗಳನ್ನು ಮುಳುಗಿಸಿಡಬೇಕು. ನಂತರ ತೆಗದು ಉಪಯೋಗಿಸಬಹುದು. ಕೀಟಪೀಡಿತ ಕಾಂಡಗಳನ್ನು ರಸ್ತೆ ಬದಿಯಲ್ಲಿ ಸಂಗ್ರಹಿಸಿದರೆ ಕೀಟಗಳು ಹಾರಿ ಇನ್ನೊಂದು ಅರೋಗ್ಯವಂತ ಗಿಡಗಳಿಗೆ ಸೇರಿಕೊಳ್ಳುತ್ತವೆ. ಬೆಳೆಗಾರರು ಸಾಮೂಹಿಕವಾಗಿ ರೋಗಪೀಡಿತ ಗಿಡಗಳನ್ನು ಕಿತ್ತು ಕೀಟಗಳನ್ನು ನಾಶಮಾಡಬೇಕು. ಬೆಳೆಗಾರರು ನೆರಳು ನಿರ್ವಹಣೆಯನ್ನು ಸೂಕ್ತ ಸಮಯದಲ್ಲೇ ಮಾಡಬೇಕು. ಹದವಾದ ನೆರಳು ಇದ್ದರೆ ಕಾಫಿ ಗಿಡಗಳು ಅರೋಗ್ಯವಾಗಿರುತ್ತವೆ ಎಂದು ಕಾಫಿ ಮಂಡಳಿ ಉಪನಿರ್ದೇಶಕ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts