More

    ರಾಜರ ಚರಿತ್ರೆ ಮಾತ್ರ ಇತಿಹಾಸವಲ್ಲ

    ಎನ್.ಆರ್.ಪುರ: ಇತಿಹಾಸ ಎಂಬುದು ಕೇವಲ ರಾಜರ ಚರಿತ್ರೆಯಲ್ಲ. ಜನಜೀವನ, ಜ್ಞಾನ, ಗಣಿತ, ವಿಜ್ಞಾನ ಸೇರಿದಂತೆ ಸಮಾಜದ ನಿತ್ಯ ಜೀವನದ ಎಲ್ಲ ವಿಚಾರಗಳನ್ನೂ ಒಳಗೊಂಡಿದೆ ಎಂದು ಇತಿಹಾಸ ಸಂಶೋಧಕ ನಾ.ಸುರೇಶ ಕಲ್ಕೆರೆ ಹೇಳಿದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಡೆದ ಪ್ರಾಚೀನ ಭಾರತದಲ್ಲಿ ಜ್ಞಾನವಿಜ್ಞಾನ ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಮಾತನಾಡಿ, ಆಧುನಿಕ ದಿನಗಳಲ್ಲಿರುವ ಏಕಮುಖ ಸಂಚಾರ ರಸ್ತೆ, ರಸ್ತೆ ವಿಭಜಕಗಳು, ಆಧುನಿಕ ಚರಂಡಿ ವ್ಯವಸ್ಥೆ, ಶೌಚಗೃಹ ವ್ಯವಸ್ಥೆಗಳೆಲ್ಲವೂ ಸಿಂಧೂ ಹಾಗೂ ಹರಪ್ಪ ನಾಗರಿಕತೆಯಲ್ಲಿಯೇ ಇದ್ದವು. ಘಾತ ಸಂಖ್ಯೆ, ದಶಮಾನದ ಘಾತ ಸಂಖ್ಯೆಗಳನ್ನು, ಅಕ್ಕಿ, ಕಂಚು, ತುಕ್ಕುಹಿಡಿಯದ ಲೋಹವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಭಾರತ ಎಂದರು.ಸಾರ್ವಜನಿಕ ಆಸ್ಪತ್ರೆ, ಗ್ರಾಪಂಗೆ ಮೊದಲ ಬಾರಿ ಚುನಾವಣೆ ನಡೆಸಿದ್ದು ಚೋಳರು. ಮೌರ್ಯರು ಮೊದಲು ಕಿ.ಮೀ ಕಲ್ಲನ್ನು ಕೊಟ್ಟವರು. ಊರಿನ ರಸ್ತೆ, ಕಾಡಿನ ರಸ್ತೆ ಎಷ್ಟು ಅಳತೆಯಲ್ಲಿರಬೇಕು ಎಂದು ಪರಿಚಯಿಸಿದವರು ಮೌರ್ಯರು. ಚೋಳರು ವಾಸ್ತುಶಿಲ್ಪಕ್ಕೆ ಅದ್ಭುತ ಕೊಡುಗೆ ನೀಡಿದರು. ಪ್ರಾಚೀನ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳ ಜತೆಗೆ ಗಣಿತ, ವಿಜ್ಞಾನ, ಭೂಗೋಳ, ಮಾನವಶಾಸ್ತ್ರವೂ ಇದೆ. ಬೇಲೂರು ಮತ್ತು ಹಳೇಬೀಡು ದೇವಸ್ಥಾನಗಳನ್ನು ಅತ್ಯದ್ಭುತ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಪ್ರಾಚೀನ ಭಾರತದಲ್ಲಿ ಆಧುನಿಕ ಬಹುತೇಕ ವಿಜ್ಞಾನ, ತಂತ್ರಜ್ಞಾನದ ಅರಿವು ಇತ್ತು ಎಂದು ಹೇಳಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶ ಗೌಡ ಮಾತನಾಡಿ, ಭಾರತಕ್ಕೆ 10 ಸಾವಿರ ವರ್ಷಗಳ ಇತಿಹಾಸವಿದೆ. 600ಕ್ಕೂ ಹೆಚ್ಚು ಜಾತಿಯವರು ಒಗ್ಗೂಡಿ ಬದುಕುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. 6 ಧರ್ಮದವರು ಸಮನ್ವಯದಿಂದ ಬದುಕುತ್ತಿದ್ದಾರೆ. ಭಾರತ 200 ವರ್ಷಗಳ ಕಾಲ ವಿದೇಶಿಯರ ಆಳ್ವಿಕೆಗೆ ಒಳಪಟ್ಟಿತ್ತು. ವಿದೇಶಿಯರ ಆಳ್ವಿಕೆಯಲ್ಲಿ ಭಾರತೀಯರು ಮೂಢನಂಬಿಕೆ ಉಳ್ಳವರು, ಅಜ್ಞಾನಿಗಳು, ಕಲ್ಲುಗಳನ್ನು ಪೂಜಿಸುವವರು ಎಂದು ಇತಿಹಾಸ ಬರೆದು ಬೋಧಿಸಲಾಯಿತು. ಆದರೆ ಭಾರತ ಆರ್ಯಭಟ, ನಾಗಾರ್ಜುನನಂಥ ವಿಜ್ಞಾನಿಗಳು ಹಲವು ಕೊಡುಗೆಗಳನ್ನು ನೀಡಿದ ದೇಶ. ಭರತನಾಟ್ಯ, ಪಂಚತಂತ್ರ ಕಥೆಗಳನ್ನು ನೀಡಿದೆ ಎಂದು ತಿಳಿಸಿದರು.ಪ್ರಾಚಾರ್ಯ ಡಾ. ಧನಂಜಯ ಮಾತನಾಡಿ, ಯಾವುದೇ ಸಂಶೋಧನೆ ಮಾಡಬೇಕಾದರೆ ಇತಿಹಾಸ ಜ್ಞಾನ ಅವಶ್ಯಕ. ಇತಿಹಾಸ ಎಂಬುದು ಎಲ್ಲ ವಿಷಯಗಳಿಗೂ ತಳಪಾಯವಿದ್ದಂತೆ ಎಂದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್, ಇತಿಹಾಸ ಉಪನ್ಯಾಸಕಿ ಸವಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts