More

    ತಾಳ್ಮೆ, ವಿವೇಕದಿಂದ ಬದುಕಿನ ಔನ್ನತ್ಯ ಸಾಧನೆ

    ಗೋಕರ್ಣ: ಸಾಧನೆಯಿಂದ ಬರುವ ಯೋಗ್ಯತೆಯನ್ನು ಸಂಪಾದಿಸಲು ಸತತ ಪರಿಶ್ರಮದ ಅಗತ್ಯವಿದೆ. ಇಂತಹ ಯೋಗ್ಯತೆಯೊಂದಿಗೆ ಯೋಗ ಕೂಡಿ ಬರಲು ಕಾಲಕ್ಕೆ ಕಾಯಬೇಕು. ಈ ಕಾಯುವಿಕೆಗೆ ಅವಶ್ಯಕ ಪ್ರೇರಕಶಕ್ತಿಯಾದ ತಾಳ್ಮೆ, ಸಂಯಮ ಮತ್ತು ವಿವೇಕ ವ್ಯಕ್ತಿಯನ್ನು ಔನ್ನತ್ಯಕ್ಕೆ ಏರಿಸುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವದಿಸಿದರು.

    ಗೋಕರ್ಣದ ಅಶೋಕೆಯಲ್ಲಿನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಶನಿವಾರ ಆಯೋಜಿಸಿದ್ದ ಸಂಘಟನಾ ಚಾತುರ್ವಸ್ಯದ ದಿವ್ಯ ಸಂದೇಶವಿತ್ತ ಶ್ರೀಗಳು ವಿವಿಧ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.

    ಯೋಗ ಮತ್ತು ಯೋಗ್ಯತೆ ಎರಡೂ ಭಿನ್ನವಾದುದು. ಒತ್ತಾಯಪೂರ್ವಕವಾಗಿ ಯೋಗ್ಯತೆ ಪಡೆಯುವ ಪ್ರಯತ್ನ ಮಾಡಿದರೆ ಅಥವಾ ಯೋಗ್ಯತೆಯಿಲ್ಲದೆ ಲಭಿಸುವ ಯೋಗ ವಿನಾಶಕ್ಕೆ ಮೂಲವಾಗುತ್ತದೆ. ಇದಕ್ಕೆ ರಾಮಾಯಣದಲ್ಲಿನ ರಾವಣನೇ ಉತ್ತಮ ನಿದರ್ಶನ. ತಮ್ಮ ಯೋಗ್ಯತೆಯ ಅರಿವಿರುವವರು ಎಂದೂ ಬದುಕಿನಲ್ಲಿ ಎಡವಿ ಬೀಳುವುದಿಲ್ಲ. ಪ್ರತಿಯೊಬ್ಬರ ಯೋಗ್ಯತೆಯೂ ಬೇರೆ ಬೇರೆ ಕ್ಷೇತ್ರದಲ್ಲಿರುತ್ತದೆ. ಅದನ್ನು ಅವರವರೇ ಗುರುತಿಸಿಕೊಳ್ಳಬೇಕು. ಬೇಕು ಬೇಕು ಎನ್ನುವ ಹಪಹಪಿಗಿಂತ, ನಮ್ಮದಲ್ಲ ಇದು ಬೇಡ, ಸಾಕು ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳುವುದರಿಂದ, ಅಳವಡಿಸಿಕೊಳ್ಳುವುದರಿಂದ ಮಾತ್ರ ಜೀವನ ಸುಂದರವಾಗುತ್ತದೆ. ಕಾರಣ ಬದುಕಿಗೆ ನಮಗೆ ಬೇಕಾದಷ್ಟನ್ನು ಮಾತ್ರ ಸ್ವೀಕರಿಸುವ ಉದಾತ್ತವನ್ನು ಹೊಂದುವ ಪ್ರಯತ್ನ ನಮ್ಮದಾಗಬೇಕು. ಈ ಪಾಠ ರಾಮಾಯಣದಲ್ಲಿ ನಮಗೆ ಹೆಜ್ಜೆ ಹೆಜ್ಜೆಗೂ ಸಿಗುತ್ತದೆ ಎಂದು ಶ್ರೀಗಳು ವಿಶ್ಲೇಷಿಸಿದರು. ದಶರಥ ಮಹಾರಾಜನ ತ್ರೇತಾಯುಗ ಕಾಲದ ದೃಷ್ಟಾಂತಗಳ ಮೂಲಕ ಯೋಗ ಮತ್ತು ಯೋಗ್ಯತೆಯ ಮಹತ್ವ ಬಣ್ಣಿಸಿ ಆಶೀರ್ವದಿಸಿದರು.

    ವಿವಿಧ ಪರೀಕ್ಷೆಗಳಲ್ಲಿ ಸಾಧನೆಗೈದ ದ.ಕ. ಜಿಲ್ಲೆ ಕಬಕದ ಕ್ಷಿತಿ ಕಶ್ಯಪ್ ಮತ್ತು ಉತ್ತರ ಕನ್ನಡ ಸಿದ್ದಾಪುರದ ಎಚ್.ವಿ. ವಿಶಾಲ್ ಅವರನ್ನು ಶ್ರೀಗಳು ಪುರಸ್ಕರಿಸಿದರು. ಮಂಗಳೂರಿನ ಖ್ಯಾತ ವೈದ್ಯ ಡಾ.ವೇಣುಗೋಪಾಲ ಡಿ. ದಂಪತಿ ವಿಶ್ವವಿದ್ಯಾಪೀಠಕ್ಕೆ 1ಲಕ್ಷ ರೂ. ದೇಣಿಗೆ ಸಮರ್ಪಿಸಿದರು. ಯಲ್ಲಾಪುರದ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮತ್ತು ಭಾರತ ಪರಿಕ್ರಮ ಪಾದಯಾತ್ರೆ ಖ್ಯಾತಿಯ ಸೀತಾರಾಮ ಕೆದಿಲಾಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

    ಶ್ರೀಮಠದ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ ಇತರರಿದ್ದರು. ಸುಬ್ರಾಯ ಅಗ್ನಿಹೋತ್ರಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts