More

    ಕುಸಿತ ಭೀತಿಯಲ್ಲಿದೆ ಹನೆಹಳ್ಳಿ ಕಿರು ಸೇತುವೆ

    ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

    ಹನೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಮ್ಮ ತಾಯಿ ತೋಡಿಗೆ 60 ವರ್ಷದ ಹಿಂದೆ ನಿರ್ಮಾಣಗೊಂಡ ಕಿರುಸೇತುವೆ ತೀರಾ ದುಸ್ಥಿತಿಯಲ್ಲಿದ್ದು ಕುಸಿಯುವ ಹಂತದಲ್ಲಿದೆ.

    ಬಾರಕೂರು -ಹನೆಹಳ್ಳಿ -ಬಂಡೀಮಠ -ಕೂರಾಡಿ -ಕೊಕ್ಕರ್ಣೆ ಮಾರ್ಗದ ಬಸ್‌ಗಳು ಈ ಕಿರುಸೇತುವೆ ಮೂಲಕ ಹಾದುಹೋಗುತ್ತಿವೆ. ತೀರಾ ಹದಗೆಟ್ಟಿದ್ದ ಈ ರಸ್ತೆಯ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದ ಪರಿಣಾಮ ರಸ್ತೆ ವಿಸ್ತರಣೆಗೊಂಡು ಫೇವರ್ ಫಿನಿಷ್ ಡಾಂಬರು ಕಾಮಗಾರಿ ಆಗಿತ್ತು. ಆದರೆ ಈ ಸೇತುವೆ ಶಿಥಿಲಗೊಂಡಿರುವ ಪರಿಣಾಮ ಈ ರಸ್ತೆ ಅಭಿವೃದ್ಧಿಗೊಂಡರೂ ಪ್ರಯೋಜನಕ್ಕೆ ಸಿಗದಂತಾಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದೆ.

    ರಸ್ತೆ ಕಾಮಗಾರಿ ಆರಂಭವಾಗುವಾಗ ಈ ಕಿರುಸೇತುವೆ ಕೂಡ ವಿಸ್ತಾರಗೊಂಡು ಹೊಸ ಸೇತುವೆ ರಚನೆ ಆಗಬೇಕಿತ್ತು. ರಸ್ತೆಯ ಕಾಮಗಾರಿಗೆ ಕಿರುಸೇತುವೆಗೆ ಅಡ್ಡವಾಗಿ ಕಟ್ಟುಹಾಕಿ ನೀರನ್ನು ಕೊಂಡು ಹೋಗಲಾಗಿತ್ತು. ನೀರು ಆರಿದ ಬಳಿಕ ಬದಲಿ ಮಾರ್ಗ ಮಾಡಿ ರಸ್ತೆ ರಚನೆ ಆಗಬಹುದು ಎನ್ನುವುದು ಸಾರ್ವಜನಿಕರ ನಿರೀಕ್ಷೆಯಾಗಿತ್ತು. ಆದರೆ ಕಿರು ಸೇತುವೆಯ ಎರಡೂ ಭಾಗದಲ್ಲಿ ರಸ್ತೆ ಕಾಮಗಾರಿ ಮಾಡಿದ್ದರೂ ಸೇತುವೆಯನ್ನು ಹಾಗೇ ಬಿಡಲಾಗಿದ್ದು ಸಾರ್ವಜನಿಕರಿಗೆ ಆತಂಕ ತಂದಿದೆ.

    ತೀರಾ ತಿರುವಿನ ಜಾಗದಲ್ಲಿ ಇರುವ ಈ ಕಿರುಸೇತುವೆಯಲ್ಲಿ ಅನೇಕ ಅಫಘಾತಗಳೂ ಸಂಭವಿಸಿದೆ. 60 ವರ್ಷದ ಹಿಂದೆ ಎತ್ತಿನ ಬಂಡಿ ಸಂಚಾರದ ಅವಧಿಯಲ್ಲಿ ರಚನೆಯಾದ ಈ ಕಿರು ಸೇತುವೆಯ ತಳಪಾಯದ ಎರಡೂ ಭಾಗದ ಕಲ್ಲುಗಳು ಕುಸಿದಿವೆ. ಬದಿಯಲ್ಲಿ ಕಟ್ಟಲಾದ ದಂಡೆಯ ಕಲ್ಲುಗಳು ಕುಸಿದಿವೆ. ಸೇತುವೆ ಸ್ಲಾೃಬ್‌ಗೆ ಹಾಕಲಾದ ಕಬ್ಬಿಣ ರಾಡ್‌ಗಳು ಮೇಲೆದ್ದು ಅಪಾಯದ ಮುನ್ಸೂಚನೆ ನೀಡಿವೆ.

    ಸೇತುವೆ ಕುಸಿತಗೊಂಡರೆ ಕೊಕ್ಕರ್ಣೆ- ಉಡುಪಿಗೆ ಹೋಗುವ 4 ಬಸ್ ಸಂಚಾರ ಸ್ಥಗಿತವಾಗುತ್ತದೆ. ತೀರಾ ಭಾರದ ಕಲ್ಲು , ಮರಳು, ಗ್ರ್ಯಾನೆಟ್, ಸಿಮೆಂಟ್ ಸಾಗಾಟ ಮಾಡುವ ಈ ರಸ್ತೆಯ ಕಿರು ಸೇತುವೆ ಕೊಕ್ಕರ್ಣೆಗೆ ಮತ್ತು ನೀಲಾವರ, ಕುಂಜಾಲು, ಮಂದಾರ್ತಿಗೆ ತೀರಾ ಹತ್ತಿರದ ಸಂಪರ್ಕಕೊಂಡಿಯಾಗಿದೆ. ಪ್ರತೀ ದಿನ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಾರ್ಮಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಅಪಾಯ ಸಂಭವಿಸುವ ಮೊದಲು ಮಳೆಗಾಲ ಆರಂಭಕ್ಕೆ ಮುನ್ನ ಈ ಕಿರು ಸೇತುವೆ ಮಾಡುವಂತೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಸಾಮೂಹಿಕವಾಗಿ ಪ್ರತಿಭಟನೆ ನಡೆಸಲು ಸಿದ್ಧತೆಯಲ್ಲಿದ್ದಾರೆ.

    ಈ ಕಿರುಸೇತುವೆ ಸಮೀಪವೇ ನಮ್ಮ ಮನೆಯಿದೆ. ಈ ತನಕ ಅನೇಕ ಬಾರಿ ಬೈಕ್‌ನಿಂದ ಬಿದ್ದು ಗಾಯ, ವಾಹನಗಳ ಅಪಘಾತ ಸಂಭವಿಸಿದ್ದನ್ನು ಕಂಡಿದ್ದೇನೆ. ಸೇತುವೆ ತೀರಾ ದುಸ್ಥಿತಿಯಲ್ಲಿದ್ದು ಕೂಡಲೇ ಹೊಸ ಸೇತುವೆ ಮಾಡುವುದು ಉತ್ತಮ.
    ಶ್ರೀನಿವಾಸ ಆಚಾರ್ಯ ಬೈಲ್‌ಮನೆ
    ಸ್ಥಳೀಯರು

    ರಸ್ತೆಯ ಕಾಮಗಾರಿಯಲ್ಲಿ ಸೇತುವೆ ಬಗ್ಗೆ ಪ್ರಸ್ತಾವನೆ ಇಡಲಾಗಿದೆಯೇ ಎಂದು ನೋಡಿ, ಸೇತುವೆಯನ್ನು ಪರಿಶೀಲನೆ ಮಾಡಿ ಮುಂದಿನ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು.
    ಜಗದೀಶ್ ಭಟ್
    ಸಹಾಯಕ ಕಾರ್ಯಪಾಲಕ ಅಭಿಯಂತರ, ಉಡುಪಿ ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts