More

    ಸೊರಗಿದ ಸುರಗಿಕೊಪ್ಪದ ಬೆಳೆಗಾರ

    ರಮೇಶ ಹಾರ್ಸಿಮನೆ ಸಿದ್ದಾಪುರ

    ದೇಶಾದ್ಯಂತ ಲಾಕ್​ಡೌನ್ ಜಾರಿ ಹಾಗೂ ಅಕಾಲಿಕ ಮಳೆಯಿಂದಾಗಿ ಹೂವು ಬೆಳೆದ ಬೆಳೆಗಾರನ ಜೀವನವೇ ಬಾಡಿ ಹೋಗುವಂತಾಗಿದೆ.

    ತಾಲೂಕಿನ ಗ್ಲಾಡಿಯೋಲಸ್ (ನಾಗದಾಳಿ ಹೂ) ಏಕೈಕ ಬೆಳೆಗಾರರಾದ ತ್ಯಾಗಲಿ ಗ್ರಾಪಂ ವ್ಯಾಪ್ತಿಯ ಸುರಗಿಕೊಪ್ಪದ ಮಹಾಬಲೇಶ್ವರ ಸುಬ್ರಾಯ ಹೆಗಡೆ ಅವರು ಹನ್ನೆರಡು ವರ್ಷಗಳಿಂದ 20 ಗುಂಟೆ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಆದರೆ, ಲಾಕ್​ಡೌನ್​ನಿಂದ ಹೂವಿನ ಬೆಳೆಗೆ ಮಾರುಕಟ್ಟೆ ಇಲ್ಲದಂತಾಗಿದೆ.

    ಕಷ್ಟಪಟ್ಟು ಬೆಳೆದ ಹೂವು ಮಾರುಕಟ್ಟೆಗೆ ಹೋಗುವ ಸಂದರ್ಭದಲ್ಲಿಯೇ ಸಾರಿಗೆ ನೌಕರರ ಮುಷ್ಕರ, ನಂತರ ಕರೊನಾ ಲಾಕ್​ಡೌನ್ ನಿಂದಾಗಿ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ಹೂವು ಬಾಡುವಂತಾಯಿತು. ಈ ನಡುವೆ ಅಕಾಲಿಕವಾಗಿ ಬಿದ್ದ ಮಳೆಯಿಂದಾಗಿ ಬೆಳೆ ಮತ್ತಷ್ಟು ಹಾಳಾಗುತ್ತಿದೆ. ಅದರಲ್ಲಿಯೂ ಈ ಹೂವಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಹೀಗಾಗಿ, ಇದನ್ನು ಬೆಂಗಳೂರಿಗೆ ಕಳುಹಿಸಬೇಕು. ಈಗ ವಾಹನ ಸಂಚಾರ ಇಲ್ಲದ್ದರಿಂದ ಅಲ್ಲಿಗೂ ಕಳುಹಿಸಲು ಆಗುತ್ತಿಲ್ಲ.

    ಬೇಡಿಕೆ ಸಮಯ: ಪ್ರತಿವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೆಚ್ಚು ಬೇಡಿಕೆ. ಈ ವೇಳೆ ಮದುವೆ, ವಿವಿಧ ಸಮಾರಂಭಗಳು ಇರುವುದರಿಂದ ಈ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಲಾಕ್​ಡೌನ್​ನಿಂದ ಈ ವರ್ಷ ಕಾರ್ಯಕ್ರಮಗಳು ತೀರಾ ಕಡಿಮೆಯಾಗಿವೆ. ಇದ್ದರೂ ತಲುಪಿಸಲಾಗದ ಅಸಹಾಯಕ ಸ್ಥಿತಿ ಬೆಳೆಗಾರನದ್ದಾಗಿದೆ.

    ಕಳೆದ ವರ್ಷವೂ ನಷ್ಟ: ಕಳೆದ ವರ್ಷ ಕೂಡ ಉತ್ತಮವಾಗಿ ಬೆಳೆದಿದ್ದ ಹೂವುಗಳನ್ನು ಲಾಕ್​ಡೌನ್ ಕಾರಣಕ್ಕೆ ಮಾರಾಟ ಮಾಡಲಾಗದೆ ಹೂವಿನ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದರು. ಈ ವರ್ಷವೂ ಉತ್ತಮ ಬೆಳೆ ಬಂದಿತ್ತು. ಆದರೆ, ಬೆಳೆ ಬರುವ ಸಮಯದಲ್ಲಿ ಗಾಳಿ- ಮಳೆಯ ಹೊಡೆತ ಹಾಗೂ ಸದ್ಯದ ಲಾಕ್​ಡೌನ್​ನಿಂದಾಗಿ ಬೆಳೆ ಬೆಳೆಯುವುದೇ ಸಾಕು ಎಂಬಂತಾಗಿದೆ ಎನ್ನುತ್ತಾರೆ ರೈತರು.

    ಮಹಾಬಲೇಶ್ವರ ಹೆಗಡೆ ಅವರು ಹೂವನ್ನು ಚೆನ್ನಾಗಿ ಬೆಳೆಯುತ್ತಿದ್ದಾರೆ. ಕರೊನಾ ಲಾಕ್​ಡೌನ್​ನಿಂದಾಗಿ ಕಳೆದ ವರ್ಷ ಹಾಗೂ ಈ ವರ್ಷವೂ ಹಾನಿ ಆಗಿದೆ. ಅವರು ಹೂವು ಬೆಳೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

    | ಅರುಣ ಎಚ್.ಜಿ.

    ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿದ್ದಾಪುರ

    ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಗ್ಲಾಡಿಯೋಲಸ್ ಬೆಳೆಯಲು ಆರಂಭಿಸಿದ್ದೇನೆ. ಕಳೆದ ವರ್ಷ ಲಾಕ್​ಡೌನ್​ನಿಂದ, ಈ ವರ್ಷ ಸಾರಿಗೆ ನೌಕರರ ಮುಷ್ಕರ ಮತ್ತು ಲಾಕ್​ಡೌನ್​ನಿಂದಾಗಿ ಹೂವು ಮಾರಾಟ ಮಾಡಲು ಆಗಿಲ್ಲ. ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ. ಲಾಕ್​ಡೌನ್ ಮುಂದುವರಿದಿರುವುದರಿಂದ ಬೆಳೆದ ಬೆಳೆಗೆ ಮಾರುಕಟ್ಟೆಯೇ ಇಲ್ಲದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕಾಗಿದೆ.

    | ಮಹಾಬಲೇಶ್ವರ ಎಸ್. ಹೆಗಡೆ ಸುರಗಿಕೊಪ್ಪ

    ಹೂವು ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts