More

    ದಾಸ ಸಾಹಿತ್ಯದ ಹಿರಿಮೆ ದೊಡ್ಡದು

    ಧಾರವಾಡ: ಹರಿದಾಸರು ಪರಿಪರಿಯಾಗಿ ಭಕ್ತಿ ಪರವಾಗಿ ಹಾಡಿದ ಸಾಹಿತ್ಯವೇ ದಾಸ ಸಾಹಿತ್ಯ. ವೇದ, ಉಪನಿಷತ್, ಭಗವದ್ಗಿತೆಯಂತಹ ಮೂಲ ಸಂಸ್ಕೃತ ಭಾಷೆಯಲ್ಲಿನ ಸಿದ್ಧಾಂತಗಳನ್ನು ಕನ್ನಡ ಭಾಷೆಯಲ್ಲಿ ಜನರಿಗೆ ತಲುಪುವಂತೆ ಮಾಡಿರುವುದು ಹರಿದಾಸ ಸಾಹಿತ್ಯದ ಹಿರಿಮೆ. ಇದನ್ನು ಯುವಜನರಿಗೆ ತಿಳಿಸಿಕೊಡಬೇಕಿದೆ ಎಂದು ಪಂ. ಡಾ. ವೆಂಕಟನರಸಿಂಹಾಚಾರ್ಯ ಜೋಶಿ ಹೇಳಿದರು.

    ಉತ್ತರಾದಿಮಠ ದತ್ತಿ ನಿಮಿತ್ತ ಕರ್ನಾಟಕ ವಿದ್ಯಾವರ್ಧಕ ಸಂಘ, ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2021 ಪ್ರದಾನ ಹಾಗೂ ನರಹರಿ ಅವತಾರ ಕುರಿತು ಅವರು ಉಪನ್ಯಾಸ

    ನೀಡಿದರು. ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ವಿಶ್ವಭಾರತಿ ವೇದಪೀಠದ ಅಧ್ಯಕ್ಷ ಡಾ. ಸಮೀರಾಚಾರ್ಯ ಕಂಠಪಲ್ಲೀ ಮಾತನಾಡಿ, ಒಳ್ಳೆಯದನ್ನು ಮಾತ್ರ ಸ್ವೀಕರಿಸಿ ದುಷ್ಕೃತ್ಯದಿಂದ ದೂರ ಉಳಿಯಲು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲ ತಾಯಂದಿರ ಜವಾಬ್ದಾರಿ. ಜತೆಗೆ ಶುಚಿತ್ವ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದೂ ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಆನಂದ ಪಾಂಡುರಂಗಿ ಮಾತನಾಡಿ, ಮೊಬೈಲ್​ನಿಂದ ಯುವ ಜನಾಂಗವನ್ನು ದೂರ ಮಾಡುವುದು ಕಷ್ಟ. ದಾಸ ಸಾಹಿತ್ಯದ ಜತೆಗೆ ನಮ್ಮ ಸಂಸ್ಕೃತಿ ಪರಿಚಯವು ವೇದಿಕೆಗಳಲ್ಲಿ ಮಾತ್ರವಲ್ಲದೆ, ಮನೆ ಮನೆಗೆ ತಲುಪಬೇಕು ಎಂದರು. ವಿದ್ವಾನ್ ಗೋವಿಂದ ನವಲಗುಂದ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ನಡೆದ ನರಹರಿ ಸ್ಮರಣೆ ಭಜನಾಮೃತ ಹಾಡುಗಳ ಸ್ಪರ್ಧೆಯಲ್ಲಿ ಗೋಕಾಕದ ಶ್ರೀ ಸತ್ಯವೀರ ತೀರ್ಥ ಭಜನಾ ಮಂಡಳ (ಪ್ರಥಮ), ಹುಬ್ಬಳ್ಳಿಯ ನೇತ್ರಾವತಿ ಭಜನಾ ಮಂಡಳ (ದ್ವಿ), ಮಾರ್ತಾಂಡೇಶ್ವರ ಭಜನಾ ಮಂಡಳ (ತೃ) ಹಾಗೂ ಹನುಮಂತ ನಗರದ ಅಂಜನಾ ಭಜನಾ ಮಂಡಳ ಸಮಾಧಾನಕರ ಬಹುಮಾನ ಪಡೆಯಿತು. ಪ್ರಥಮ ಸ್ಥಾನ ಪಡೆದ ಶ್ರೀ ಸತ್ಯವೀರ ತೀರ್ಥ ಭಜನಾ ಮಂಡಳಿಗೆ ಎಸ್​ಡಿಎಂ ದಂತ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೃತಿಕಾ ಗುತ್ತಲ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ-2021 ಪ್ರದಾನ ಮಾಡಿದರು.

    ಸ್ಪರ್ಧೆ ನಿರ್ಣಾಯಕರಾಗಿ ಅಖಿಲ ಭಾರತ ಬ್ರಾಹ್ಮಣ ಸಭಾ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ, ಅನುರಾಧಾ ಕುಲಕರ್ಣಿ, ಸುಜಾತ ಗುರವ ಆಗಮಿಸಿದ್ದರು. ಸಂಘದ ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ. ಗುತ್ತಲ, ಎಸ್.ಬಿ. ಗಾಮನಗಟ್ಟಿ, ಶ್ರೀಧರ ಕುಲಕರ್ಣಿ, ಮಹಿಳಾ ಮಂಡಳ ಸದಸ್ಯರು, ಇತರರು ಇದ್ದರು. ಪ್ರಕಾಶ ಉಡಿಕೇರಿ, ಶಿವಾನಂದ ಭಾವಿಕಟ್ಟಿ, ಸರೋಜಾ ರಾವ್ ನಿರೂಪಿಸಿದರು. ಸತೀಶ ತುರುಮರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts