More

    ಕರೊನಾ ಲಸಿಕೆ ಹಾಕಿಸಿಕೊಂಡ ವಧು ಬೇಕಾಗಿದ್ದಾಳೆ!

    ಕರೊನಾ ಲಸಿಕೆ ಹಾಕಿಸಿಕೊಂಡ ವಧು ಬೇಕಾಗಿದ್ದಾಳೆ!ಗಂಡ: ವ್ಯಾಕ್ಸಿನ್ ಹಾಕಿಸಿಕೊಂಡೆಯಾ ಚಿನ್ನಾ?

    ಹೆಂಡತಿ: ಹೌದು

    ಗಂಡ: ಮತ್ತೆ ಫೇಸ್​ಬುಕ್​ನಲ್ಲಿ ಫೋಟೊ ಅಪ್ಲೋಡ್ ಮಾಡೇ ಇಲ್ಲಾ?

    ಹೆಂಡತಿ: ಫೋಟೋ ತೆಗೆಸಿಕೊಂಡು ಇಟ್ಟಿದೀನಿ. 30 ವರ್ಷದ ಮೇಲ್ಪಟ್ಟು ಅಂತ ಅನೌನ್ಸ್ ಮಾಡ್ತಾರಲ್ಲಾ, ಆಗ ಅಪ್ಲೋಡ್ ಮಾಡ್ತೀನಿ…

    ***

    ಜಾಹೀರಾತು

    ಎರಡೂ ಡೋಸ್ ಕರೊನಾ ಲಸಿಕೆ ಹಾಕಿಸಿಕೊಂಡ ವಧು ಬೇಕಾಗಿದ್ದಾಳೆ

    ವಾಪಸ್ ಬಂದ ಉತ್ತರ

    45 ವರ್ಷ ಮೇಲ್ಪಟ್ಟವರು ಮಾತ್ರ ಇದ್ದಾರೆ, ಆಗಬಹುದೇ?

    ***

    ಕರೊನಾಕ್ಕೆ ಉತ್ತಮ ಲಸಿಕೆ

    ದಿನಾಲೂ ಎರಡು ಬೆಳ್ಳುಳ್ಳಿ ತಿನ್ನಿರಿ. ಇದರಿಂದ ಕರೊನಾ ವೈರಸ್ ಸಾಯದಿರಬಹುದು. ಆದರೆ ಜನರು ನಿಮ್ಮ ಹತ್ತಿರ ಬರುವುದಿಲ್ಲ.

    ***

    ವಾಟ್ಸಪ್, ಫೇಸ್​ಬುಕ್, ಟ್ವಿಟರ್ ಇತ್ಯಾದಿ ತಾಣಗಳಲ್ಲಿ ಹರಿದಾಡುತ್ತಿರುವ ಇಂಥ ಜೋಕುಗಳು ಬಹುತೇಕರಿಗೆ ಗೊತ್ತಿರುತ್ತವೆ. ಕರೊನಾ ಲಾಕ್​ಡೌನ್ ಟೈಮಲ್ಲಿ, ದೇಹ-ಮನಸ್ಸು ಎರಡೂ ಮಂಕಾಗಿರುವಾಗ ಇಂಥವು ಸ್ವಲ್ಪ ಸಮಾಧಾನ ತರಬಲ್ಲವು, ಬಸವಳಿದ ಮುಖದಲ್ಲಿ ಸಣ್ಣ ನಗು ತರಿಸಬಲ್ಲವು. ಆದರೆ ಗಂಭೀರವಾಗಿ ನೋಡಿದರೆ, ಈ ಲಸಿಕೆ ಇದೆಯಲ್ಲ, ನಗೆಯ ವಿಷಯವಲ್ಲ. ಲಸಿಕೆ ಕೇಂದ್ರಗಳ ಎದುರು ಕಂಡುಬರುವ ಜನರ ಉದ್ದುದ್ದ ಸಾಲೇ ಈ ಮಾತಿಗೆ ಸಾಕ್ಷಿ. ಇದೇ ಹೊತ್ತಿನಲ್ಲಿ, ಲಸಿಕೆ ಕೊರತೆಗೆ ಏನು ಕಾರಣ? ಎಲ್ಲರಿಗೂ ಲಸಿಕೆ ದೊರೆಯುವುದು ಯಾವಾಗ ಮುಂತಾದ ಪ್ರಶ್ನೆಗಳು ಎಲ್ಲರಲ್ಲೂ ಕೊರೆಯುತ್ತಿವೆ. 2020ರ ಡಿಸೆಂಬರ್ ಅಂತ್ಯ-2021ರ ಜನವರಿ ಆರಂಭದಲ್ಲಿ ಭಾರತದಲ್ಲಿ ನಿತ್ಯದ ಕರೊನಾ ಕೇಸುಗಳ ಸಂಖ್ಯೆ 10-11 ಸಾವಿರದಷ್ಟು ಮಾತ್ರ ಇತ್ತು. ಹೀಗಾಗಿ ಮೊದಲ ಅಲೆಯನ್ನು ಜಯಿಸಿದೆವು ಎಂಬ ಭಾವನೆ ಆಳುಗರು ಸೇರಿ ಬಹುತೇಕ ಎಲ್ಲರಲ್ಲೂ ಮೂಡಿತ್ತು.

    ಈ ನಡುವೆ, ಸಂಭಾವ್ಯ ಮೂರನೇ ಅಲೆ ಬಗ್ಗೆ ತಜ್ಞರ ಎಚ್ಚರಿಕೆ ಇದ್ದೇ ಇತ್ತು. ಆಗ ತನ್ನಲ್ಲಿ ಉತ್ಪಾದನೆಯಾದ ಕರೊನಾ ಲಸಿಕೆಗಳನ್ನು ಭಾರತ ಸ್ನೇಹಪೂರ್ವಕವಾಗಿ, ಉಪಕಾರ ಭಾವನೆಯಿಂದ ಹಲವು ದೇಶಗಳಿಗೆ ರವಾನಿಸಿತು. ಕೇಂದ್ರ ಸರ್ಕಾರದ ಪ್ರಕಾರ ಈ ಪ್ರಮಾಣ ಸುಮಾರು ಆರೂವರೆ ಕೋಟಿ ಲಸಿಕೆಗಳು. ಅದು ‘ವ್ಯಾಕ್ಸಿನ್ ಡಿಪ್ಲೊಮಸಿ’ ಎಂದೇ ಕರೆಯಲ್ಪಟ್ಟಿತು. ಆದರೆ ಭಾರತದಲ್ಲೇ ಯಾವಾಗ ಲಸಿಕೆ ಕೊರತೆ ತೀವ್ರವಾಯಿತೋ, ಆಗ ಕೇಂದ್ರ ಸರ್ಕಾರದ ವಿರುದ್ಧ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೂರಂಬುಗಳು ತೂರಿಬಂದವು. ಇದು ಕೆಲಮಟ್ಟಿಗೆ ನಿಜವಿರಬಹುದಾದರೂ, ಆಗ ‘ವ್ಯಾಕ್ಸಿನ್ ಡಿಪ್ಲೋಮಸಿ’ ಸಂದರ್ಭದಲ್ಲಿ ಹೆಚ್ಚೇನೂ ಆಕ್ಷೇಪ ಕೇಳಿಬಂದಿರಲಿಲ್ಲ ಎಂಬುದನ್ನೂ ಗಮನಿಸಬೇಕು. ಕರೊನಾ ವ್ಯಾಕ್ಸಿನ್ ಇನ್ನೂ ಅಭಿವೃದ್ಧಿಯ ಹಂತದಲ್ಲಿರುವಾಗಲೇ ಕೆಲ ದೇಶಗಳು ಅಡ್ವಾನ್ಸ್ ಆಗಿ ಕಾಯ್ದಿರಿಸಿಕೊಂಡುಬಿಟ್ಟವು. ಖ್ಯಾತ ವೈರಾಣು ತಜ್ಞೆ, ಮೆಡಿಕಲ್ ಆಕ್ಸಿಜನ್ ವಿತರಣೆ ನಿಗಾಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ.ಗಗನ್​ದೀಪ್ ಕಾಂಗ್ ಅವರು, ಲಸಿಕೆಗೆ ಆರ್ಡರ್ ನೀಡುವಲ್ಲಿ ಭಾರತ ಸ್ವಲ್ಪ ತಡಮಾಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲ ದೇಶಗಳು ಲಸಿಕೆ ಇನ್ನೂ ಅಭಿವೃದ್ಧಿ ಹಂತದಲ್ಲಿರುವಾಗಲೇ ರಿಸ್ಕ್ ತೆಗೆದುಕೊಂಡು ಆರ್ಡರ್ ನೀಡಿದವು ಎಂದು ಅವರು ಹೇಳುತ್ತಾರೆ.

    ಕರೊನಾ ಎರಡನೆಯ ಅಲೆ ಉಬ್ಬರವಾದಾಗಿನಿಂದ ಕರೊನಾ ನಿರ್ವಹಣೆ ವಿಚಾರದಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಹಾಗೆನೋಡಿದರೆ, ಈ ಕರೊನಾ ಪರಿಸ್ಥಿತಿ ಎಲ್ಲರಿಗೂ ಅಯೋಮಯ ಸ್ಥಿತಿ ತಂದಿಟ್ಟಿದೆ. ಎಂತೆಂಥ ವಿಜ್ಞಾನಿಗಳು, ವೈದ್ಯಕೀಯ ಪರಿಣತರಿಗೂ ಈ ಅದೃಶ್ಯ ವೈರಾಣುವಿನ ಸರಿಯಾದ ಸ್ವರೂಪವನ್ನು ಇನ್ನೂ ಗ್ರಹಿಸಲು ಆಗಿಲ್ಲ. ಹೀಗೆಂದೇ ದಿನಕ್ಕೊಂದು ಸೂಚನೆ, ಸಲಹೆಗಳು ಬರುತ್ತಿವೆ. ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ವೈದ್ಯವಿಜ್ಞಾನ ದೃಢೀಕರಿಸಿರುವುದರಿಂದಾಗಿ ಲಸಿಕೆಗಾಗಿ ಭಾರಿ ಡಿಮಾಂಡ್ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆ, ವಿತರಣೆ ವಿಚಾರವಾಗಿ ಗಮನಹರಿಸುವುದು ಒಳಿತು.

    ಯಾವುದೇ ವೈರಸ್ ಇರಲಿ, ಸಮೂಹ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯೂನಿಟಿ) ಉಂಟಾದರೆ ಎದುರಿಸುವುದು ಸಾಧ್ಯವಾಗುತ್ತದೆ. ಅಲ್ಲಿಯವರೆಗೆ ವೈರಸ್ ಪ್ರತಾಪ ಮುಂದುವರಿಯುತ್ತದೆ. ಹರ್ಡ್ ಇಮ್ಯೂನಿಟಿ ಪ್ರಮಾಣ ಆಯಾ ಕಾಯಿಲೆಗೆ ಬೇರೆ ಬೇರೆ ಇರುತ್ತದೆ. ಪೋಲಿಯೋ ವಿರುದ್ಧ ಸಾಮೂಹಿಕ ರೋಗನಿರೋಧಕ ಶಕ್ತಿ ಗಳಿಸಲು ಶೇಕಡ 80ರಷ್ಟು ಜನರಾದರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದಿದೆ. ಕರೊನಾ ವಿಚಾರಕ್ಕೆ ಬಂದರೆ ಕನಿಷ್ಠ ಶೇ.70 ಜನರಾದರೂ ಲಸಿಕೆ ಪಡೆಯಬೇಕು. ಕೆಲವರು ಈ ಪ್ರಮಾಣ ಶೇ.70-90 ಎಂದೂ ಹೇಳುತ್ತಾರೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ನಡೆಯುತ್ತಿದೆ. 2-18 ವಯೋಮಾನದವರ ಲಸಿಕೆಯ ಕ್ಲಿನಿಕಲ್ ಟ್ರಯಲ್ ಶುರುವಾಗುತ್ತಿದ್ದು, ಫಲಿತಾಂಶ ಬಂದ ಬಳಿಕ ಇವರಿಗೆ ಲಸಿಕೆ ನೀಡುವ ಕುರಿತು ನಿರ್ಣಯವಾಗುತ್ತದೆ.

    ಭಾರತದಲ್ಲಿ 18 ವರ್ಷ ಮೇಲ್ಪಟ್ಟವರ ಒಟ್ಟು ಜನಸಂಖ್ಯೆ ಸುಮಾರು 94 ಕೋಟಿ. 18-44 ವಯೋಮಾನದವರ ಸಂಖ್ಯೆ 59 ಕೋಟಿ. ಹೀಗೆ ಒಟ್ಟಾರೆಯಾಗಿ ನೋಡಿದಾಗ, ಪ್ರತಿಯೊಬ್ಬರಿಗೆ ಎರಡು ಡೋಸ್ ಲಸಿಕೆಯಂತೆ ಒಟ್ಟು 190 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಪ್ರಕಾರ, 2021ರ ಆಗಸ್ಟ್​ದಿಂದ ಡಿಸೆಂಬರ್ ಅಂತ್ಯದ ಹೊತ್ತಿಗೆ 216 ಕೋಟಿ ಡೋಸ್ ಲಸಿಕೆ ಲಭ್ಯವಾಗುತ್ತದೆ. ಆ ಲೆಕ್ಕದಲ್ಲಿ ಎಲ್ಲ ಜನರಿಗೂ ಸಾಕಾಗಬೇಕು. ಆದರೆ ಕೆಲವರು ಬೇರೆಯದೇ ಲೆಕ್ಕಾಚಾರ ಮುಂದಿಡುತ್ತಾರೆ. ನಮ್ಮಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಶುರುವಾಗಿ ನಾಲ್ಕು ತಿಂಗಳಾಗಿದ್ದು, ಈವರೆಗೆ ಅಂದರೆ, 130 ದಿನಗಳಲ್ಲಿ ಸುಮಾರು 20 ಕೋಟಿ ಡೋಸ್ ನೀಡಲಾಗಿದೆ. ಅಮೆರಿಕ ಇಷ್ಟು ಲಸಿಕೆ ನೀಡಲು 124 ದಿನಗಳನ್ನು ತೆಗೆದುಕೊಂಡಿದೆ. ಈ ಲೆಕ್ಕದಲ್ಲಿ ನೋಡಿದರೆ ಎಲ್ಲರಿಗೂ ಲಸಿಕೆ ನೀಡಲು ಸುಮಾರು ಐದು ವರ್ಷ ಬೇಕು ಎಂಬುದು ಕೆಲವರ ಪ್ರತಿಪಾದನೆ.

    45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ವತಿಯಿಂದಲೇ ಉಚಿತವಾಗಿ ನೀಡಲಾಗುತ್ತದೆ. 18-44 ವಯೋಮಾನದವರಿಗೆ ಲಸಿಕೆ ನೀಡುವುದು ಆಯಾ ರಾಜ್ಯಗಳ ಜವಾಬ್ದಾರಿ. ಹೀಗಾಗಿ ಈಗ ಕರ್ನಾಟಕವೂ ಸೇರಿದಂತೆ ಕೆಲ ರಾಜ್ಯಗಳು ಸಹ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆಗೆ ಆರ್ಡರ್ ಮಾಡುತ್ತಿರುವುದರಿಂದಾಗಿ, ಆ ಲಭ್ಯತೆ ಆಧರಿಸಿ ಲೆಕ್ಕಿಸಬೇಕಾಗುತ್ತದೆ. ಹೀಗಾಗಿ ಐದು ವರ್ಷ ಬೇಕಾಗದು ಎಂಬ ನಿರೀಕ್ಷೆ ಸಹ ಇದೆ. ಈಗಾಗಲೇ ರಷ್ಯಾದ ಸ್ಪುಟ್ನಿಕ್ ಲಸಿಕೆ ಹಂತಹಂತವಾಗಿ ಭಾರತಕ್ಕೆ ಬರಲಾರಂಭಿಸಿದೆ. ಆದರೆ ಲಸಿಕೆ ತಯಾರಕರು ತಂತಮ್ಮ ದೇಶಗಳಿಗೆ ಮೊದಲ ಆದ್ಯತೆ ನೀಡುವುದರಿಂದಾಗಿ, ನಮ್ಮಲ್ಲಿನ ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ಲಸಿಕೆ ಸಿಗುತ್ತದೆಂಬುದನ್ನು ಕಾದುನೋಡಬೇಕಷ್ಟೆ.

    ಲಸಿಕೆ ಲಭ್ಯತೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಉದಾರ ಲಸಿಕೆ ನೀತಿ ಅನುಸರಿಸುತ್ತಿದೆ. ಆ ಪ್ರಕಾರ, ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್​ಡಿಎ), ಯುರೋಪಿನಲ್ಲಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ), ಬ್ರಿಟನ್ನಿನ ಮೆಡಿಸಿನ್ಸ್ ಆಂಡ್ ಹೆಲ್ತ್​ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ( ಎಂಎಚ್​ಆರ್​ಎ) ಈ ಮುಂತಾದ ಅಂಗೀಕೃತ ಸಂಸ್ಥೆಗಳಿಂದ ಅನುಮೋದನೆಗೊಂಡ ಲಸಿಕೆಗಳನ್ನು ತರಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಧಿಕಾರ ನೀಡಿದೆ. ಹಾಗೇ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಅನುಮೋದನೆ ನೀಡಿದ ಲಸಿಕೆಗಳನ್ನು ತರಿಸಿಕೊಳ್ಳಲು ಸಹ ಅನುಮತಿ ನೀಡಿದೆ. ಹೀಗೆ ವಿದೇಶದಿಂದ ತರಿಸಲಾದ ಲಸಿಕೆಯನ್ನು ಮೊದಲು 100 ಜನರಿಗೆ ನೀಡಿ ಏಳು ದಿನಗಳ ಕಾಲ ಪರಿಶೀಲಿಸಿ, ಸುರಕ್ಷಿತ ಎಂದು ದೃಢಪಟ್ಟ ಮೇಲೆ ವ್ಯಾಕ್ಷಿನೇಷನ್ ಶುರುಮಾಡಬೇಕು ಎಂಬ ನಿಯಮ ಕೂಡ ಇದೆ.

    ಲಸಿಕೆ ಕೊರತೆ ಇದ್ದರೆ ಉತ್ಪಾದನೆ ಹೆಚ್ಚಿಸಬಹುದಲ್ಲ ಎಂಬ ಪ್ರಶ್ನೆ ಸಹಜ. ಆದರೆ ವ್ಯಾಕ್ಸಿನ್ ಉತ್ಪಾದನೆಯನ್ನು ಒಂದೆರಡು ದಿನಗಳಲ್ಲಿ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಹೆಚ್ಚಿಸಲಾಗದು. ಅದಕ್ಕೆ ಮೂಲಸೌಕರ್ಯ ಹೆಚ್ಚಳ ಇತ್ಯಾದಿ ಆಗಬೇಕು. ಮತ್ತು ಬಂಡವಾಳವೂ ವಿಪರೀತ ಬೇಕು. ಈಗ ಲಸಿಕೆ ಉತ್ಪಾದನೆಯನ್ನು ಬೇರೆ ಬೇರೆ ಕಡೆ ನಡೆಸಲು (ಉದಾ:ಕೊವ್ಯಾಕ್ಸಿನ್ ಅನ್ನು ಕರ್ನಾಟಕದ ಮಾಲೂರಿನಲ್ಲಿ ಉತ್ಪಾದಿಸಲಾಗುತ್ತದೆ) ಪ್ರಯತ್ನಗಳು ನಡೆದಿವೆ.

    ಕರೊನಾ ಲಸಿಕೆ 18 ವರ್ಷ ಮೇಲ್ಪಟ್ಟ ಬಹುತೇಕ ಎಲ್ಲರಿಗೂ ಸುರಕ್ಷಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಲಸಿಕೆ ಈ ಕಾಯಿಲೆ ವಿರುದ್ಧ ಸುರಕ್ಷತೆ ನೀಡುತ್ತದೆ. ಲಸಿಕೆ ಪಡೆಯುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಂದರೆ, ಕರೊನಾ ಸೋಂಕು ತಗುಲುವ ಸಾಧ್ಯತೆ ಮತ್ತು ಅದನ್ನು ಪಡೆದಾತನ ಸುತ್ತಮುತ್ತಲು ಇರುವವರಿಗೆ ಸೋಂಕು ತಗುಲುವ ಸಂಭಾವ್ಯತೆ ಕೂಡ ತಗ್ಗುತ್ತದೆ. ಕರೊನಾ ಲಸಿಕೆಯ ಅಡ್ಡಪರಿಣಾಮಗಳ ಸಂಶಯದಿಂದಾಗಿ ಆರಂಭದಲ್ಲಿ ಜನರು ಹಿಂದೆಮುಂದೆ ನೋಡಿದ್ದು ಹೌದಾದರೂ, ಕ್ರಮೇಣ ಈ ಅಪನಂಬಿಕೆ ದೂರವಾಗಿ ಲಸಿಕೆಗಾಗಿ ಮುಗಿಬೀಳುವ ಸನ್ನಿವೇಶ ನಿರ್ವಣವಾಯಿತು. ಅದೂ ಇವತ್ತಿನ ಸುಳ್ಳು ಸುದ್ದಿಗಳ ಭರಾಟೆ ಕಾಲದಲ್ಲಿ, ವದಂತಿಕೋರರ ಹಾವಳಿಯಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂದು ಜನರಿಗೆ ಅಯೋಮಯ ಉಂಟಾಗುವುದು ಸಹಜವೇ ಎನ್ನಿ. ತೀರಾ ಮೊನ್ನೆ ಮೊನ್ನೆ ಇಂಥದೇ ಒಂದು ವದಂತಿ ಹಬ್ಬಿತ್ತು. ‘ಯಾರೆಲ್ಲ ಈಗ ಕರೊನಾ ಲಸಿಕೆ ತೆಗೆದುಕೊಂಡಿದ್ದಾರೋ ಅವರೆಲ್ಲ ಇನ್ನು ಎರಡು ವರ್ಷದಲ್ಲಿ ಸಾವನ್ನಪು್ಪತ್ತಾರೆ’ ಎಂದು ಫ್ರಾನ್ಸ್​ನ ನೊಬೆಲ್ ಪುರಸ್ಕೃತ ಖ್ಯಾತ ವೈರಾಣು ತಜ್ಞ ಲುಕ್ ಮೊಂಟಾಗ್ನರ್ ಹೇಳಿದ್ದಾರೆ ಎಂಬುದೇ ಆ ಸುದ್ದಿ. ಕೊನೆಗೆ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಿ, ‘ಕರೊನಾ ಲಸಿಕೆ ಸಂಪೂರ್ಣ ಸುರಕ್ಷಿತ. ಯಾರೂ ಇಂಥ ಸುದ್ದಿಯನ್ನು ಫಾರ್ವರ್ಡ್ ಮಾಡಬಾರದು’ ಎಂದು ಹೇಳಿತು. ಕರೊನಾ ಲಸಿಕೆ ತೆಗೆದುಕೊಂಡರೆ ಬಂಜೆತನ ಬರುತ್ತದೆ, ಇದರಲ್ಲಿ ಮೈಕ್ರೊಚಿಪ್ ಅಳವಡಿಸಲಾಗಿದ್ದು, ವೈಯಕ್ತಿಕ ಮಾಹಿತಿ ಪಡೆಯಲಾಗುತ್ತದೆ… ಹೀಗೆ ವದಂತಿಗಳು ನಾನಾ ವಿಧವಾಗಿದ್ದವು.

    ಕರೊನಾ ಲಸಿಕೆಗಳನ್ನು ಸರಿಯಾದ ರೀತಿಯಲ್ಲಿ ಪರೀಕ್ಷಿಸಲಾಗಿಲ್ಲ, ಅವಸರವಸರವಾಗಿ ಜನರಿಗೆ ನೀಡಲಾಗುತ್ತಿದೆ ಎಂದು ಕೂಡ ಗುಲ್ಲೆದ್ದಿತ್ತು. ಲಸಿಕೆ ಸಂಶೋಧನೆ ಸಾಮಾನ್ಯವಾಗಿ ದೀರ್ಘ ಪ್ರಕ್ರಿಯೆ; ಅನೇಕ ವರ್ಷಗಳೇ ಬೇಕಾಗುತ್ತವೆ. ಆದರೆ ಕೋವಿಡ್​ನ ಎರಡು ಲಸಿಕೆಗಳನ್ನು ಕೇವಲ ಎಂಟು ತಿಂಗಳ ಅವಧಿಯಲ್ಲಿ ಆವಿಷ್ಕರಿಸಿ, ಬಳಕೆಗೆ ಅನುಮತಿ ನೀಡಲಾಯಿತು. ಯಾವುದೇ ಹೊಸ ಲಸಿಕೆಗೆ ಅನುಮೋದನೆ ನೀಡುವ ಮೊದಲು ಕ್ಲಿನಿಕಲ್ ಟ್ರಯಲ್ ಪೂರ್ವದ ಹಂತ ಮತ್ತು ಕ್ಲಿನಿಕಲ್ ಟ್ರಯಲ್ ಹಂತ (ಹಂತ 1, 2 ಮತ್ತು 3) ನಡೆಯುತ್ತದೆ. ಕ್ಲಿನಿಕಲ್ ಟ್ರಯಲ್ ಪೂರ್ವದ ಹಂತ ಎಂದರೆ, ಜೀವಕೋಶಗಳು ಮತ್ತು ಪ್ರಾಣಿಗಳ ಮೇಲೆ ನಡೆಯುವ ಪ್ರಯೋಗ. ಕ್ಲಿನಿಕಲ್ ಟ್ರಯಲ್​ನ ಮೊದಲ ಹಂತದಲ್ಲಿ ಆರೋಗ್ಯವಂತ, ಸಣ್ಣ ಜನರ ಗುಂಪಿಗೆ ಲಸಿಕೆ ನೀಡಲಾಗುತ್ತದೆ. ಎರಡನೆಯ ಹಂತದಲ್ಲಿ, ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತದೆ. ಮುಂದೆ ಯಾರಿಗೆ ಲಸಿಕೆಯನ್ನು ಕೊಡಬೇಕೋ ಆ ಜನವರ್ಗದ ಗುಣಲಕ್ಷಣ ಇರುವವರನ್ನು ಇಲ್ಲಿ ಆರಿಸಿಕೊಳ್ಳಲಾಗುತ್ತದೆ. ಮೂರನೇ ಹಂತದಲ್ಲಿ ಸಾವಿರಾರು ಜನರಿಗೆ (ಸಾಮಾನ್ಯವಾಗಿ 1ರಿಂದ 3 ಸಾವಿರ) ಜನರ ಮೇಲೆ ಲಸಿಕೆ ಪ್ರಯೋಗಿಸಿ ಅದರ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಕರೊನಾ ವ್ಯಾಕ್ಸಿನ್ ವಿಚಾರದಲ್ಲೂ ಈ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ. ಒಂದೇ ವ್ಯತ್ಯಾಸ ಎಂದರೆ, ಬೇರೆ ಬೇರೆ ಹಂತಗಳನ್ನು ಏಕಕಾಲಕ್ಕೆ ನಡೆಸಲಾಗಿದೆ. ಹೀಗಾಗಿ ಸಮಯ ಉಳಿತಾಯವಾಗಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಲಸಿಕೆ ಪಡೆಯುವುದು ಸದ್ಯಕ್ಕಂತೂ ಉತ್ತಮ ದಾರಿ. ಸ್ವಲ್ಪ ಕಾಯಬೇಕಷ್ಟೆ… ಮಾಸ್ಕ್ ಧಾರಣೆ, ವ್ಯಕ್ತಿಗತ ಅಂತರ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳಂತೂ ಇರಲೇಬೇಕು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts