More

    ಠಾಣೆಯಲ್ಲಿ ನಳನಳಿಸುತ್ತಿದೆ ಉದ್ಯಾನ

    ಗಜೇಂದ್ರಗಡ: ಕೆಲವು ದಿನಗಳ ಹಿಂದೆ ಹಳೆಯ ವಾಹನಗಳಿಂದ ತುಂಬಿದ್ದ ಪಟ್ಟಣದ ಪೊಲೀಸ್ ಠಾಣೆ ಆವರಣವೀಗ ಗಿಡ-ಮರಗಳಿಂದ ತುಂಬಿದ್ದು, ಸದಾ ನಳನಳಿಸುತ್ತಿದೆ. ಇಲ್ಲಿನ ಪೊಲೀಸರು, ವಿವಿಧ ಕೆಲಸಕ್ಕಾಗಿ ಬರುವ ಜನರ ಮನಸ್ಸಿಗೆ ಮುದ ನೀಡುತ್ತಿದೆ.

    ಠಾಣೆಯ ಪೊಲೀಸರು ಕರ್ತವ್ಯದ ಬಿಡುವಿನ ಸಮಯದಲ್ಲಿ ಶ್ರಮದಾನ ಮೂಲಕ ಚಿಕ್ಕದಾದರೂ ಚೊಕ್ಕದಾದ ಉದ್ಯಾನ ನಿರ್ವಿುಸಿದ್ದಾರೆ. ಹೀಗಾಗಿ ಠಾಣೆ ಸಂಪೂರ್ಣ ಹಸಿರುಮಯವಾಗಿ ಕಂಗೊಳಿಸುತ್ತಿದೆ.

    ಸುತ್ತಮುತ್ತಲಿನ ವಾತಾವರಣ ಸುಂದರವಾಗಿದ್ದರೆ ಒತ್ತಡದಲ್ಲೂ ಪ್ರಶಾಂತ ಮನಸ್ಥಿತಿಯಿಂದ ಕೆಲಸ ಮಾಡಬಹುದು ಎನ್ನುತ್ತಾರೆ ಠಾಣೆಯ ಸಿಬ್ಬಂದಿ.

    ಪ್ರತಿ ಭಾನುವಾರ ಪರೇಡ್ ಮಾಡಿದ ನಂತರ ಗಿಡಗಳಿಗೆ ನೀರುಣಿಸುವುದು, ಕಳೆ ಕೀಳುವುದು, ಗಿಡ ಹಾಗೂ ಹುಲ್ಲುಹಾಸನ್ನು ಕತ್ತರಿಸುವುದು ಸೇರಿದಂತೆ ಸಂಪೂರ್ಣ ಪಾರ್ಕ್​ನ ನಿರ್ವಹಣೆ ಮಾಡಲಾಗುತ್ತದೆ.

    ಪೊಲೀಸ್ ಠಾಣೆ ಸುತ್ತಮುತ್ತ ಅಪಘಾತವಾದ ವಾಹನಗಳು ತುಂಬಿ ಅಸಹ್ಯವಾಗಿ ಕಾಣುತ್ತಿತ್ತು. ಪಿಎಸ್​ಐ ಗುರುಶಾಂತ ದಾಶ್ಯಾಳ ಅವರು ವಿಶೇಷ ಕಾಳಜಿ ವಹಿಸಿ ವಾಹನಗಳನ್ನು ಠಾಣೆ ಆವರಣದ ಒಂದು ಭಾಗದಲ್ಲಿ ನಿಲ್ಲಿಸಿ, ಉಳಿದ ಭಾಗದಲ್ಲಿ ಸಂಪೂರ್ಣ ಉದ್ಯಾನ ಮಾಡಲಾಗಿದೆ. ಒಂದೂವರೆ ಗುಂಟೆ ವಿಸ್ತೀರ್ಣದ ಪಾರ್ಕ್​ನಲ್ಲಿ ದಾಸವಾಳ, ಕನಕಾಂಬರ, ಮ್ಯಾಣ ಮಲ್ಲಿಗೆ, ಟೇಬಲ್ ರಾಜಾ, ಚೆಂಡು ಹಾಗೂ ಆಯುರ್ವೆದ ಔಷಧ ಸಸ್ಯಗಳನ್ನು ಬೆಳೆಸಲಾಗಿದೆ. ಅಲ್ಲದೆ, ಮಾವು, ಬೇವು, ಆಲದ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಉದ್ಯಾನದ ಮಧ್ಯಭಾಗದಲ್ಲಿ ಕಟ್ಟೆ ಕಟ್ಟಿ ಸಣ್ಣ ಕಾರಂಜಿ ನಿರ್ವಿುಸಲಾಗಿದೆ.

    ಗಜೇಂದ್ರಗಡ ಪೊಲೀಸ್ ಠಾಣೆ ಸುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವು ಕೂಡ ಉತ್ಸಾಹದಿಂದ ಹಾಗೂ ಒತ್ತಡವಿಲ್ಲದೇ ಕೆಲಸ ಮಾಡಬಹುದು. ಈ ಕಾರಣದಿಂದಲೇ ಇಲ್ಲಿ ಉತ್ತಮ ಪಾರ್ಕ್ ಹಾಗೂ ಪರಿಸರವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಪೊಲೀಸ್ ಸಿಬ್ಬಂದಿಯ ಶ್ರಮದ ಪ್ರತಿಫಲದಿಂದ ಸುಂದರ ಉದ್ಯಾನ ನಿರ್ವಣವಾಗಿದೆ.

    | ಗುರುಶಾಂತ ದಾಶ್ಯಾಳ, ಪಿಎಸ್​ಐ, ಗಜೇಂದ್ರಗಡ ಠಾಣೆ

    ಎಲ್ಲ ಸರ್ಕಾರಿ ಕಚೇರಿ, ಶಾಲೆ-ಕಾಲೇಜ್​ಗಳ ಅವರಣಗಳಲ್ಲೂ ಇದೇ ರೀತಿ ಪಾರ್ಕ್ ನಿರ್ವಿುಸಿದರೆ ವಾತಾವರಣ ಚೆನ್ನಾಗಿರುತ್ತದೆ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಗಜೇಂದ್ರಗಡ ಠಾಣೆಯ ಪೊಲೀಸರೇ ಸಾಕ್ಷಿ.

    | ಬಸವರಾಜ ಮುನವಳ್ಳಿ, ಪರಿಸರಪ್ರೇಮಿ ಗಜೇಂದ್ರಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts