More

    ಶೌರ್ಯ ಮೆರೆದ ಮೈಸೂರು ಲ್ಯಾನ್ಸರ್; ಇಂದು ಹೈಫಾ ಮುಕ್ತಿ ದಿನ

    ಮೈಸೂರು ಮಹಾರಾಜರ ಸೇನೆ ಹಾಗೂ ಹೈಫಾ (ಈಗಿನ ಇಸ್ರೇಲ್)ಗೆ ವಿಶೇಷ ನಂಟಿದೆ. ಈ ನಗರವನ್ನು ಮುಕ್ತಗೊಳಿಸಲು ನಡೆದ ಯುದ್ಧವನ್ನು ಜಗತ್ತಿನಲ್ಲಿ ಜರುಗಿದ ಅಶ್ವದಳದ ಮಹಾಯುದ್ಧಗಳಲ್ಲಿ ಒಂದೆಂದು ಗುರುತಿಸಲಾಗುತ್ತದೆ. ಹೈಫಾ ಮತ್ತು ಜೆರುಸಲೇಂ ಅನ್ನು ಮುಕ್ತಗೊಳಿಸಿ ಬಹಾಯಿ ಸಮುದಾಯದ ಆಧ್ಯಾತ್ಮಿಕ ನಾಯಕ ಅಬ್ದುಲ್ ಬಹಾ ಅವರನ್ನು ರಕ್ಷಣೆ ಮಾಡುವಲ್ಲಿ ಮೈಸೂರಿನ ಲ್ಯಾನ್ಸರ್​ಗಳು (ಭಲ್ಲೆ ಅಶ್ವಾರೋಹಿಗಳು) ಮಹತ್ವದ ಪಾತ್ರ ನಿರ್ವಹಿಸಿದರು. ಪ್ರಥಮ ವಿಶ್ವಯುದ್ಧದಲ್ಲಿ ಮಿತ್ರಕೂಟದ ಪರವಾಗಿ ಜೋಧಪುರ ಅಶ್ವದಳ, ಹೈದರಾಬಾದ್ ಅಶ್ವದಳ, ಬ್ರಿಟಿಷರ 15ನೇ ಸಾಮ್ರಾಜ್ಯಶಾಹಿ ಅಶ್ವದಳ ಜತೆಗೆ ರಣಾಂಗಣಕ್ಕೆ ಇಳಿದ ಮೈಸೂರು ಅಶ್ವದಳದ ಸೈನಿಕರು ಹೈಫಾ ನಗರದ ಸುತ್ತಮುತ್ತಲಿನ ಟರ್ಕಿಯ ನೆಲೆಗಳ ಮೇಲೆ ದಾಳಿ ನಡೆಸಿದರು. ಭಾರತೀಯ ಸೈನಿಕರು ಭಲ್ಲೆ ಮತ್ತು ಖಡ್ಗ ಮಾತ್ರ ಹೊಂದಿದ್ದರೆ, ಟರ್ಕಿಯ ಸೈನಿಕರು ಮಶಿನ್​ಗನ್ ಮತ್ತು ಫಿರಂಗಿಗಳನ್ನು ಹೊಂದಿದ್ದರು. ಮೈಸೂರು ಅಶ್ವದಳ ಸೇರಿದಂತೆ ಮಿತ್ರಕೂಟದ ಸೈನ್ಯವು ಒಟ್ಟೋ ಮನ್, ಜರ್ಮನಿ ಸೈನಿಕರನ್ನು ಸೋಲಿಸುವ ಮೂಲಕ ಆಯ ಕಟ್ಟಿನ ನಗರಗಳಾದ ಡಮಾ ಸ್ಕಸ್, ಜೆರುಸಲೇಂ, ಟೈಗ್ರಿಸ್, ಬಾಗ್ದಾದ್, ಮೆಸಪೊಟಮಿಯಾ, ಕುತ್- ಅಲ್-ಅಮಾರಾಗಳನ್ನು ಮುಕ್ತಗೊಳಿಸಿತು.

    ಹೈಫಾ ನಗರವನ್ನು ಒಟ್ಟೋಮನ್ ಸಾಮ್ರಾಜ್ಯದ ಹಿಡಿತದಿಂದ 1918ರ ಸೆ. 23ರಂದು ಮುಕ್ತಗೊಳಿಸಲಾಯಿತು. ಜಾಗತಿಕವಾಗಿ ಪ್ರತಿ ಸೆ. 23 ಅನ್ನು ಹೈಫಾ ದಿನವನ್ನಾಗಿ ಆಚರಿಸಲಾಗುತ್ತದೆ. ಮೈಸೂರು ಅಶ್ವದಳ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬಹಾಯಿ ಸಮುದಾಯ ಋಣಿಯಾಗಿದೆ.

    ಅಶ್ವದಳಗಳು ನಡೆಸಿದ ಕೊನೆಯ ಯುದ್ಧ ಕೂಡ ಇದಾಗಿದೆ. ಪ್ರಥಮ ವಿಶ್ವಯುದ್ಧ ಕೊನೆಗೊಳ್ಳುವ ಎರಡು ತಿಂಗಳು ಪೂರ್ವದಲ್ಲಿ ಈ ಕದನವು ಜರುಗಿತು. ಮೈಸೂರು ಸೈನಿಕರು ಹೈಫಾ ನಗರದ ಮೇಲೆ ದಾಳಿ ನಡೆಸಿ, ಶತ್ರು ಪಕ್ಷದ 1350ಕ್ಕೂ ಅಧಿಕ ಸೈನಿಕರನ್ನು ಸೆರೆಹಿಡಿದರು. ಈ ಮೊದಲು ಬ್ರಿಟಿಷರು ಈ ನಗರವನ್ನು ವಶಪಡಿಸಿಕೊಳ್ಳಲು ಯಶಸ್ಸು ಕಂಡಿರಲಿಲ್ಲ. ಆದ್ದರಿಂದಲೇ ಮೈಸೂರು ಮತ್ತು ಜೋಧಪುರ ಸೈನಿಕರನ್ನು ಕರೆಸಲಾಗಿತ್ತು.

    ಪ್ರಥಮ ವಿಶ್ವಯುದ್ಧವು ಆರಂಭಗೊಂಡ ಕೂಡಲೆ ಇಂಗ್ಲೆಂಡಿನ ದೊರೆ ಐದನೇ ಜಾರ್ಜ್ ಅವರು ಇಂಗ್ಲೆಂಡ್​ಗೆ ಯುದ್ಧದಲ್ಲಿ ಸಹಾಯ ಮಾಡುವಂತೆ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸೇರಿದ ದೇಶಗಳಿಗೆ ವಿನಂತಿಸಿಕೊಂಡರು. ಬ್ರಿಟನ್ ವಸಾಹತು ಆಗಿದ್ದ ಭಾರತ ಹಾಗೂ ಇಲ್ಲಿನ ದೇಶಿಯ ಅರಸರು ಸೈನಿಕರನ್ನು ಒದಗಿಸಿದರು. ಹಣ ಹಾಗೂ ವಸ್ತುಗಳ ನೆರವನ್ನೂ ನೀಡಿದರು. ಸುಮಾರು 15 ಲಕ್ಷ ಸೈನಿಕರು ಭಾರತದಿಂದ ಈ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದರು. ಮೈಸೂರು ಸಂಸ್ಥಾನದ ವತಿಯಿಂದ 50 ಲಕ್ಷ ರೂಪಾಯಿಗಳನ್ನು ಯುದ್ಧನಿಧಿಗೆ ಕೊಡಲಾಯಿತು.

    23 ಅಧಿಕಾರಿಗಳು, 444 ಸಿಪಾಯಿಗಳು, 526 ಕುದುರೆಗಳು,49 ಹೇಸರಕತ್ತೆಗಳು, 132 ಪರಿವಾರದವರನ್ನು ಒಳಗೊಂಡ ಈ ರೆಜಿಮೆಂಟ್, 1914ರ ಅಕ್ಟೋಬರ್ 13ರಂದು ಬೆಂಗಳೂರಿನಿಂದ ಹೊರಟಿತು. 1915ರ ನವೆಂಬರ್​ನಲ್ಲಿ ಸೂಯಜ್ ಕಾಲುವೆ ಪ್ರಾಂತ್ಯದಲ್ಲಿ ಮೂರು ಬಾರಿ ಶತ್ರುವಿನೊಂದಿಗೆ ಹೋರಾಟ ನಡೆಯಿತು. 1917ರ ನವೆಂಬರ್​ನಲ್ಲಿ ಪ್ಯಾಲಸ್ತಿನ್​ನ ಗಾಜಾ ಪಟ್ಟಿಗೆ ಹಾಕಿದ ಮುತ್ತಿಗೆಯಲ್ಲಿ ಈ ಸೈನ್ಯ ಮಂದಾಳತ್ವ ವಹಿಸಿತ್ತು. ಜೋಧಪುರ ಹಾಗೂ ಹೈದರಾಬಾದ್ ಲ್ಯಾನ್ಸರ್​ಗಳು ಕೂಡ ಶೌರ್ಯ ಮೆರೆದರು.

    ತೀನ್ ಮೂರ್ತಿ ಭವನ: ಈ ಯುದ್ಧದಲ್ಲಿ ಭಾಗಿಯಾದ ಮೈಸೂರು, ಜೋಧಪುರ ಹಾಗೂ ಹೈದರಾಬಾದ್ ಲ್ಯಾನ್ಸರ್​ಗಳ ಸ್ಮರಣಾರ್ಥ ಬ್ರಿಟಿಷರು ದೆಹಲಿಯಲ್ಲಿ ತೀನ್ ಮೂರ್ತಿ ಭವನವನ್ನು ನಿರ್ವಿುಸಿದರು. 2018ರ ಜ. 14ರಂದು ಇಸ್ರೇಲ್​ನ ಅಂದಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ತೀನ್ ಮೂರ್ತಿ ಚೌಕ್ ಅನ್ನು ತೀನ್ ಮೂರ್ತಿ ಹೈಫಾ ಚೌಕ ಎಂದೂ ಹಾಗೂ ಮಾರ್ಗಕ್ಕೆ ತೀನ್ ಮೂರ್ತಿ ಹೈಫಾ ಮಾರ್ಗ ಎಂದೂ ಮರುನಾಮಕರಣ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts