More

    ಕರೊನಾ ಹೋರಾಟಕ್ಕೆ ತಜ್ಞರ ತಂಡದ ಬಲ: 11 ಪ್ರತ್ಯೇಕ ತಂಡಗಳ ರಚನೆ

    ರಾಘವ ಶರ್ಮನಿಡ್ಲೆ ನವದೆಹಲಿ

    ಕರೊನಾ ಹೋರಾಟಕ್ಕೆ ತಜ್ಞರ ತಂಡದ ಬಲ: 11 ಪ್ರತ್ಯೇಕ ತಂಡಗಳ ರಚನೆದೇಶಾದ್ಯಂತ ಕರೊನಾ ವೈರಾಣು ವ್ಯಾಪಿಸಿರುವ ಪರಿಣಾಮ ಅನೇಕ ಮಂದಿಗೀಗ ಭವಿಷ್ಯದ ಚಿಂತೆ ಶುರುವಾಗಿದೆ. ಸೋಂಕಿಗೆ ಶಾಶ್ವತ ಔಷಧ ಕಂಡು ಹುಡುಕುವ ಸವಾಲು ಒಂದೆಡೆಯಿದ್ದರೆ ಮತ್ತೊಂದೆಡೆ ನೆಲಕಚ್ಟುತ್ತಿರುವ ಆರ್ಥಿಕ ಸ್ಥಿತಿ ಜನರ ದಿಕ್ಕೆಡಿಸುತ್ತಿದೆ. ಹಾಗಿದ್ದರೂ, ಭರವಸೆಯೊಂದಿಗೆ ಬದುಕುವುದೇ ಜೀವನ. ಇಂಥದ್ದೊಂದು ಸಂಕ್ರಮಣ ಸ್ಥಿತಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸುವುದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದೈತ್ಯ ಸವಾಲಾಗಿಬಿಟ್ಟಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಮಧ್ಯೆ ಹದಗೆಟ್ಟಿರುವ ಆರ್ಥಿಕತೆಯನ್ನೂ ಸಮದೂಗಿಸಿ ನಡೆಯಬೇಕಾದ ಅನಿವಾರ್ಯತೆ. ಈ ನಿಟ್ಟಿನಲ್ಲಿ ಕರೊನಾ ಬಿಕ್ಕಟ್ಟಿನ ಆರಂಭಿಕ ದಿನಗಳಿಂದ ಆರೋಗ್ಯ ಇಲಾಖೆ, ಹಣಕಾಸು ಇಲಾಖೆ, ಗೃಹ ಇಲಾಖೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಕಾರ್ಯಾಲಯ ಪೂರ್ಣ ಪರಿಶ್ರಮದಿಂದ ಕಾರ್ಯಾಚರಣೆಗಿಳಿದಿದ್ದು, ರಾಜ್ಯ ಸರ್ಕಾರಗಳೊಂದಿಗೆ ಕಾಲ ಕಾಲಕ್ಕೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕವೇ ಸಭೆ, ಸಂವಾದಗಳನ್ನು ನಡೆಸುತ್ತಾ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ.

    ತಜ್ಞರ ತಂಡ: ಕರೊನಾ ಕುರಿತ ಕ್ಷಣ ಕ್ಷಣದ ಮಾಹಿತಿ ಪಡೆದು ಪ್ರಧಾನಿ ಮೋದಿ ಅವರಿಗೆ ವಿವರಿಸಲೆಂದೇ 11 ಮಂದಿಯ ವಿಶೇಷ ತಜ್ಞರ ತಂಡವನ್ನೇ ರಚಿಸಲಾಗಿದೆ. ಈ ತಂಡದಲ್ಲಿ ತಜ್ಞ ವೈದ್ಯರು, ಜೈವಿಕ ವಿಜ್ಞಾನಿಗಳು, ಮಹಾಮಾರಿ ರೋಗಗಳ ಕುರಿತ ತಜ್ಞರು, ಆರ್ಥಿಕ ಪಂಡಿತರಿದ್ದಾರೆ. ಈ ತಜ್ಞರೆಲ್ಲರೂ ತಮ್ಮದೇ ಆದ 11 ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡಿದ್ದು, ನಂತರ ಒಟ್ಟಾಗಿ ಪ್ರಧಾನಿ ಮೋದಿ ಅವರ ಜತೆ ನೇರ ಮಾತುಕತೆ ನಡೆಸುತ್ತಾರೆ. ಲಾಕ್​ಡೌನ್ ನಿರ್ವಹಣೆ, ಕರೊನಾ ಚಿಕಿತ್ಸೆ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ತಂಡ ದಿನವೂ ಚರ್ಚೆ ನಡೆಸುತ್ತಿದೆ ಮತ್ತು ಪೂರಕ ತೀರ್ವನಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಧಾನಿ ದೇಶವನ್ನುದ್ದೇಶಿಸಿ ಏನೇನು ಮಾತನಾಡಬಹುದು ಎಂದು ಇದೇ ತಂಡ ಸಲಹೆ ನೀಡುತ್ತದೆ ಎಂದು ಹೇಳಲಾಗಿದೆ. ತಮ್ಮ ಭಾಷಣದಿಂದ ಜನರನ್ನು ಹೇಗೆ ಸೆಳೆಯಬೇಕೆಂದು ಪ್ರಧಾನಿಗೆ ಪ್ರತ್ಯೇಕವಾಗಿ ವಿವರಿಸಬೇಕೆಂದಿಲ್ಲ. ಆದರೆ, ಭಾಷಣಕ್ಕೆ ವಸ್ತು, ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರ ತಂಡದಿಂದ ಮಹತ್ವದ ಸಲಹೆಗಳನ್ನು ಪ್ರಧಾನಿ ಪಡೆದುಕೊಳ್ಳುತ್ತಿರುತ್ತಾರಂತೆ. ತಂಡದಲ್ಲಿರುವ ಪ್ರಧಾನಿ ಮೋದಿ ಆಪ್ತ ಹಾಗೂ ಪ್ರಧಾನಿ ಕಾರ್ಯಾಲಯದಲ್ಲಿ ನಿರ್ದೇಶಕ ಶ್ರೇಣಿಯ ಅಧಿಕಾರಿ ರಾಜೇಂದ್ರ ಕುಮಾರ್, ನೀತಿ ಆಯೋಗದ ಪ್ರಮುಖ ಸದಸ್ಯ ಡಾ. ವಿ. ಪೌಲ್ ಸೇರಿ, ಏಮ್ಸ್​ ಆಸ್ಪತ್ರೆಯ ನಿರ್ದೇಶಕ ರಣದೀಪ್ ಗುಲೇರಿಯಾ, ಐಸಿಎಂಆರ್ ನ ಹಿರಿಯ ಎಪಿಡಮಿಕ್ ತಜ್ಞ ಡಾ ರಾಮನ್ ಗಂಗಾಖೇಡ್ಕರ್, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಾದ ಶ್ರೀಖರ್ ಪರ್ದೇಶಿ, ಮಯೂರ್ ಮಹೇಶ್ವರಿ ಸೇರಿ ಒಟ್ಟು ತಜ್ಞರು ಪರಸ್ಪರ ವಿಚಾರ ವಿನಿಮಯ ನಡೆಸುತ್ತಾರೆ ಮತ್ತು ನಂತರ ಮೋದಿಯರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಈ ತಂಡದ ಸಲಹೆ ಪಡೆದುಕೊಂಡೇ ವಿವಿಧ ಕ್ಷೇತ್ರಗಳ ತಜ್ಞರು, ಮಾಧ್ಯಮ ಮಾಲೀಕರು, ಕ್ರೀಡಾಳುಗಳು, ಉದ್ಯಮಿಗಳು ಸೇರಿದಂತೆ ಅನೇಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ.

    ಇದನ್ನೂ ಓದಿ ಅಮೆರಿಕದಲ್ಲಿ ಶೇ.47ರಷ್ಟು ಉದ್ಯೋಗಿಗಳು ಪ್ಯಾಂಟೇ ಹಾಕಲ್ವಂತೆ, ಉಳಿದವರು ಇನ್ನೇನು ಮಾಡ್ತಾರೆ ನೋಡಿ…

    ಎನ್​ಜಿಒಗಳ ಸಂಪರ್ಕ

    ಈವರೆಗಿನ ಲಾಕ್ ಡೌನ್ ದಿನಗಳಲ್ಲಿ ವಲಸೆ ಕಾರ್ವಿುಕರು, ಬಡ ವರ್ಗದವರು, ವೃದ್ಧರು, ಅನಾರೋಗ್ಯಪೀಡಿತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ನೀತಿ ಆಯೋಗದಲ್ಲಿ ನೋಂದಣಿಯಾಗಿರುವ ದೇಶದ ಹತ್ತಾರು ಸಾಮಾಜಿಕ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ಸಂರ್ಪಸಿದ್ದಾರೆ. ಸ್ವಯಂಸೇವಕರ ಮೂಲಕ ಸಕಾಲದಲ್ಲಿ ಕಷ್ಟದಲ್ಲಿದ್ದವರ ನೆರವಿಗೆ ಧಾವಿಸುವುದು ನೀತಿ ಆಯೋಗದ ಮೂಲ ಉದ್ದೇಶ. ಹಾಗೇ ದೇಶದಲ್ಲಿರುವ ವಿವಿಧ ಹಾಟ್ ಸ್ಪಾಟ್ ಗಳನ್ನು ಪತ್ತೆಹಚ್ಚಲೂ ಈ ಸಂಸ್ಥೆಗಳ ಸಹಾಯ ಪಡೆಯಲಾಗಿದೆ. ಕರೊನಾ ನಿಯಂತ್ರಣಕ್ಕೆ ಕ್ರಮಗಳು, ದೈಹಿಕ ಅಂತರ, ದಿಗ್ಬಂಧನ, ನಿರಾಶ್ರಿತರಿಗೆ ಆಶ್ರಯ ನೀಡುವುದು, ಸಮೂಹ ಭೋಜನ ವ್ಯವಸ್ಥೆ ಸೇರಿ ಹಲವು ಉಪ ಕ್ರಮಗಳನ್ನು ಈ ಸಂಸ್ಥೆಗಳ ಮೂಲಕ ಕೈಗೊಳ್ಳಲಾಗಿದೆ. ಮೇಲಾಗಿ, ಈ ಸಂಸ್ಥೆಗಳ ನೆರವನ್ನು ಬಳಸಿಕೊಳ್ಳುವಂತೆಯೂ ವಿವಿಧ ರಾಜ್ಯ ಸರ್ಕಾರಗಳಿಗೆ ನೀತಿ ಆಯೋಗದ ಮೂಲಕ ಪತ್ರ ಬರೆಯಲಾಗಿತ್ತು.

    ಪ್ರತಿದಿನವೂ ಮಾತುಕತೆ

    ಕರೊನಾಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ನಿತ್ಯವೂ ಪ್ರಧಾನಿ ಕಾರ್ಯಾಲಯ ಕೇಂದ್ರ ಸಚಿವ ಸಂಪುಟದ ಸಚಿವರೊಂದಿಗೆ ಸಂವಾದ ನಡೆಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸಲಾಗಿದ್ದು ಈ ತಂಡದಲ್ಲಿ ವಿವಿಧ ಕ್ಯಾಬಿನೆಟ್ ಸಚಿವರಿದ್ದಾರೆ. ರಾಜ್ಯಗಳಲ್ಲಿನ ಕರೊನಾ

    ಪರಿಸ್ಥಿತಿ ಅವಲೋಕಿಸುವ ಜತೆಗೆ ಕೆಲವು ಶಿಫಾರಸುಗಳನ್ನೂ ಈ ಕಾರ್ಯಪಡೆ ಕೇಂದ್ರ ಸರ್ಕಾರಕ್ಕೆ ಮಾಡಿದೆ. ಅಂತಿಮವಾಗಿ ಈ ಶಿಫಾರಸುಗಳ ಬಗ್ಗೆ ಪ್ರಧಾನಿ ಕಾರ್ಯಾಲಯ ಮತ್ತು ಗೃಹ ಇಲಾಖೆ ತೀರ್ಮಾನ ತೆಗೆದುಕೊಳ್ಳುತ್ತದೆ.

    ಇದನ್ನೂ ಓದಿ ಕಣ್ಣೀರಿಟ್ಟ ವಿರಾಟ್​ ಕೊಹ್ಲಿ, ಅಂತಹದ್ದೇನಾಯ್ತು?

    ಮೇಕ್ ಇನ್ ಇಂಡಿಯಾ

    ಕರೊನಾ ಹರಡುವಿಕೆ ತಡೆಗೆ ಬಳಸಲಾಗುತ್ತಿರುವ ಫೇಸ್ ಮಾಸ್ಕ್ ನಿಂದ ಹಿಡಿದು ವಿವಿಧ ಆರೋಗ್ಯ ಸಲಕರಣೆಗಳನ್ನು ಭಾರತದಲ್ಲೇ ಉತ್ಪಾದಿಸಲು ಆದ್ಯತೆ ನೀಡಲಾಗುತ್ತಿದ್ದು, ದೇಶದಲ್ಲೀಗ ದಿನಕ್ಕೆ 1.87 ಪಿಪಿಇ ಕಿಟ್ ಗಳನ್ನು, 2.30 ಲಕ್ಷ ಎನ್-95 ಫೇಸ್ ಮಾಸ್ಕ್, ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ತಯಾರಿಸುವ ಘಟಕದ ಸಾಮರ್ಥ್ಯವನ್ನು ಶೇ.150ರಷ್ಟು ಏರಿಸಲಾಗಿದೆ. ಇವೆಲ್ಲವನ್ನೂ ಮೇಕ್ ಇನ್ ಇಂಡಿಯಾ ಯೋಜನೆ ವ್ಯಾಪ್ತಿಯಲ್ಲೇ ತರಲಾಗಿದೆ. 11 ಮಂದಿ ತಜ್ಞರ ತಂಡದ ಸದಸ್ಯ, ಔಷಧ ಇಲಾಖೆಯ ಕಾರ್ಯದರ್ಶಿ ಪಿ.ಡಿ. ವಘೕಲಾ ನೇತೃತ್ವದ ತಜ್ಞರ ಸಮತಿ ಆಕ್ಸಿಜೆನ್ ಸಿಲಿಂಡರ್ ಸೇರಿ ವಿವಿಧ ಕರೊನಾ ನಿಯಂತ್ರಿಸುವ ವೈದ್ಯ ಸಲಕರಣೆ ಉತ್ಪಾದನೆ, ಸಿದ್ಧಪಡಿಸುವಿಕೆ ಸಂಬಂಧಿ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದೆ. ಮಾರ್ಚ್ 29ರಂದು ರಚನೆಯಾದ ಸಮಿತಿ ಈವರೆಗೆ 24 ಸಭೆಗಳನ್ನು ನಡೆಸಿದೆ.

    ಪಿಎಂ ಕೇರ್

    ಕರೊನಾ ತಂದಿಟ್ಟ ಬಿಕ್ಕಟ್ಟನ್ನು ನಿರ್ವಹಿಸುವ ಉದ್ದೇಶದಿಂದಲೇ ಪಿಎಂ ಕೇರ್ ಪರಿಹಾರ ನಿಧಿ ಸ್ಥಾಪಿಸಲಾಯಿತು. ಖುದ್ದು ಪ್ರಧಾನಿಯವರೇ ತಮ್ಮ ಸಾಮಾಜಿಕ ಜಾಲತಾಣ ಹಾಗೂ ಭಾಷಣಗಳ ಮೂಲಕ ಜನರಿಗೆ ಪಿಎಂ ಕೇರ್ ಗೆ ಕೈಲಾದಷ್ಟು ಸಹಾಯ ಮಾಡುವಂತೆ ಕೋರಿದ್ದಾರೆ. ಮೇಲಾಗಿ, ಸಂಸದರ ನಿಧಿಯಿಂದ ಅನುದಾನ ಕಡಿತಗೊಳಿಸಿ ಅದನ್ನು ಕೋವಿಡ್-19 ನಿಯಂತ್ರಣಕ್ಕೆ ಬಳಸಿಕೊಳ್ಳಬೇಕೆಂಬ ಯೋಚನೆಯೂ ಅವರದ್ದೇ ಆಗಿತ್ತೆಂಬ ಮಾಹಿತಿ ಇದೆ. ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ನೇತೃತ್ವದ ತಂಡ ದೇಶದ ವಿವಿಧ ಸರ್ಕಾರೇತರ ಸಂಸ್ಥೆಗಳು, ಬೃಹತ್ ಉದ್ಯಮಿಗಳು, ಖಾಸಗಿ ಕ್ಷೇತ್ರಗಳಲ್ಲಿನ ದೊಡ್ಡ ದೊಡ್ಡ ಪಾಲುದಾರರು ಸೇರಿದಂತೆ ಅನೇಕರನ್ನು ಸಂರ್ಪಸಿ ಪಿಎಂ ಕೇರ್ ಗೆ ಹಣ ಸಂಗ್ರಹಿಸಿದೆ.

    ದನ್ನೂ ಓದಿ ನಾಳೆಯಿಂದಲೇ ಮನೆ ಬಾಗಿಲಿಗೆ ಮದ್ಯ ಸರಬರಾಜು!

    ಪ್ರಧಾನಿ ಸಕ್ರಿಯತೆ

    ಕರೊನಾ ಸಮಸ್ಯೆ ಉದ್ಭವಿಸಿದ ಬಳಿಕ ಪ್ರಧಾನಿ ತಮ್ಮ ಕೆಲಸದ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಕೆಲವೊಂದು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳಗಿನ ಜಾವ ಮೂರು ಗಂಟೆ ತನಕವೂ ನಿದ್ದೆಗೆಟ್ಟು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅಥವಾ ಗೃಹ ಸಚಿವ ಅಮಿತ್ ಶಾ ಅಥವಾ ಮತ್ತಿತರ ಸಚಿವರೊಂದಿಗೆ ಸಭೆ ನಡೆಸಿದ್ದುಂಟು. ಹೆಚ್ಚು ಕಡಿಮೆ ನಿತ್ಯವೂ 17-18 ಗಂಟೆ ಕೆಲಸ ಮಾಡುತ್ತಿರುವ ಮೋದಿ ಅವರು, ಪ್ರತಿ ನಿರ್ಧಾರದ ಸಾಧಕ-ಬಾಧಕಗಳ ಬಗ್ಗೆ ವಿಸõತ ಚರ್ಚೆ ನಡೆಸುತ್ತಿದ್ದಾರೆ. ಅಮೆರಿಕದಂತಹ ದೇಶಗಳು ಪೂರ್ಣ ಲಾಕ್ ಡೌನ್ ಗೆ ಆದ್ಯತೆ ನೀಡಲಿಲ್ಲ. ಆದರೆ ಸದ್ಯದ ಸ್ಥಿತಿಯಲ್ಲಿ ಕರೊನಾ ನಿಯಂತ್ರಣ ಮತ್ತು ಜನರ ಜೀವ ಉಳಿಸುವುದೇ ಮುಖ್ಯ ಎಂದು ಪ್ರಧಾನಿ ಲಾಕ್ ಡೌನ್ ತೀರ್ಮಾನ ಕೈಗೊಂಡರು. ಹಾಗಿದ್ದರೂ ಭವಿಷ್ಯದ ದಿನಗಳಲ್ಲಿ ದೇಶದ ಆರ್ಥಿಕತೆಯನ್ನು ಸಮ ಹಾದಿಗೆ ತಂದು ನಿಲ್ಲಿಸುವ ಕುರಿತು

    ಹೆಚ್ಚು ತಲೆಕೆಡಿಸಿಕೊಂಡಿರುವ ಪ್ರಧಾನಿ, ನೀತಿ ಆಯೋಗದ ಅಧಿಕಾರಿಗಳನ್ನೂ ಸಮರ್ಪಕ ಯೋಜನಾ ಕ್ರಮಗಳೊಂದಿಗೆ ಸಿದ್ಧಗೊಳ್ಳಬೇಕೆಂದು ಸೂಚನೆ ಕೊಟ್ಟಿದ್ದಾರೆ. ಏತನ್ಮಧ್ಯೆ, ಗೃಹ ಅಮಿತ್ ಶಾ ಮಾಧ್ಯಮದೆದುರು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಬಿಟ್ಟರೆ, ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ಪೂರ್ಣ ಉಸ್ತುವಾರಿ ಹೊತ್ತಿದ್ದಾರೆ.

    ಯಾರಿವರು ಲವ ಅಗರ್ವಾಲ್

    ಕರೊನಾ ಕೇಸುಗಳು, ಐಸಿಯು ಬೆಡ್ ಗಳು, ರಕ್ಷಣಾ ಕಿಟ್ ಗಳು, ಕರೊನಾ ಪರೀಕ್ಷೆ ಸೇರಿ ಕೇಂದ್ರದ ನಿಯಂತ್ರಣಾ ಕ್ರಮಗಳ ಬಗ್ಗೆ ಕಳೆದ 40 ದಿನಗಳಿಂದ ಸಂಜೆ 4 ಗಂಟೆಗೆ ಮಾಧ್ಯಮಕ್ಕೆ ತಪ್ಪದೆ ಮಾಹಿತಿ ನೀಡುತ್ತಿರುವುದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ 48 ವರ್ಷದ ಲವ ಅಗರ್ವಾಲ್. ಈ ಮೂಲಕ ಅವರು ಕರೊನಾ ಹೋರಾಟದಲ್ಲಿ ಕೇಂದ್ರ ಸರ್ಕಾರದ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಆರೋಗ್ಯ ಬಿಕ್ಕಟ್ಟಿನ ಈ ಸಮಯದಲ್ಲೂ ಲವ ತಾಳ್ಮೆಯಿಂದ ಕೆಲಸ ಮಾಡುತ್ತಾರೆ ಮತ್ತು ಇಲಾಖೆಯಲ್ಲೂ ಈಗ ಜನಪ್ರಿಯತೆ ಗಳಿಸಿದ್ದಾರೆ. ಅಗರ್ವಾಲ್ ತಂದೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಲವ ಈಗ ಸಹರಾನ್ ಪುರದ ಹೀರೋ ಮತ್ತು ಸ್ಥಳೀಯ ಮಾಧ್ಯಮಗಳೂ ಅವರನ್ನು ಸಹರಾನ್ ಪುರದ ಹೆಮ್ಮೆ ಎಂದೇ ವ್ಯಾಖ್ಯಾನಿಸುತ್ತಿವೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು.

    ಗರ್ಭಸ್ಥ ಕರಡಿ ಕೊಲೆಯಾದ ಫೋಟೊ ವೈರಲ್ ಆಗುತ್ತಿದ್ದಂತೆ ಒಬ್ಬ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts