More

    ಮಂಗಳೂರಲ್ಲಿ ಇಳಿದ ವಿಮಾನ

    ಹುಬ್ಬಳ್ಳಿ: ಶನಿವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದ ಕಾರಣ ಬೆಂಗಳೂರಿನಿಂದ ಇಲ್ಲಿಗೆ ಬಂದ ಇಂಡಿಗೋ ವಿಮಾನ ಭೂ ಸ್ಪರ್ಶ ಮಾಡಲು ಸಾಧ್ಯವಾಗದೇ, ಮಾರ್ಗ ಬದಲಿಸಿಕೊಂಡು ಮಂಗಳೂರು ನಿಲ್ದಾಣದಲ್ಲಿ ಇಳಿದ ವಿದ್ಯಮಾನ ನಡೆದಿದೆ.

    ಬೆಳಗ್ಗೆ ಆಗಮಿಸಿದ ವಿಮಾನ ಮಂಜು-ಮೋಡ ಆವರಿಸಿದ್ದರಿಂದ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗದೇ ಸುಮಾರು 20 ನಿಮಿಷ ಆಗಸದಲ್ಲಿಯೇ ಸುತ್ತಾಡಿತು. ಎಟಿಎಸ್​ನಿಂದ ಸಿಗ್ನಲ್ ಸಿಗದ ಕಾರಣ ಕೊನೆಗೆ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ತೆರಳಿತು. ವಿಮಾನದಲ್ಲಿ 65 ಪ್ರಯಾಣಿಕರು ಇದ್ದರು. ಹುಬ್ಬಳ್ಳಿಯಿಂದ ಬೆಂಗಳೂರಿಗೆ 52 ಜನರು ತೆರಳುವವರಿದ್ದರು ಎಂದು ತಿಳಿದುಬಂದಿದೆ. ಸ್ವಲ್ಪ ಹೊತ್ತಿನ ನಂತರ ಬೆಳಗ್ಗೆ 8ಕ್ಕೆ ಚೆನ್ನೈನಿಂದ ಬಂದ ಇಂಡಿಗೋ ವಿಮಾನಕ್ಕೆ ಎಟಿಎಸ್​ನಿಂದ ಸಿಗ್ನಲ್ ಸಿಕ್ಕು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ನಂತರ ಆ ವಿಮಾನ ಕೊಚ್ಚಿಗೆ ಪ್ರಯಾಣ ಬೆಳೆಸಿತು ಎನ್ನಲಾಗಿದೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲ್ಭಾಗದಲ್ಲಿಯ ಮಂಜು, ಮೋಡ ಚದುರಿದ ಮೇಲೆ, ಮಂಗಳೂರಿನಲ್ಲಿ ಇಳಿದಿದ್ದ ಇಂಡಿಗೋ ವಿಮಾನ ಪುನಃ ಹುಬ್ಬಳ್ಳಿಗೆ ಬಂದು ಇಳಿದು, ಬೆಂಗಳೂರಿಗೆ ಹಾರಿತು.

    ತೊಂದರೆಯಾಗಿದ್ದರ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಭೂಮಿಗೆ ಹತ್ತಿರದಲ್ಲಿ ಮೋಡ ಇದ್ದುದರಿಂದ ಸ್ವಲ್ಪ ಸಮಯ ಸಮಸ್ಯೆ ಉಂಟಾಗಿತ್ತು. ಹೀಗಾಗಿ, ಬೆಳಗಿನ ಒಂದು ವಿಮಾನ ಇಲ್ಲಿ ಇಳಿಯಲು ಸಾಧ್ಯವಾಗಿರಲಿಲ್ಲ. ಸ್ವಲ್ಪವೇ ಸಮಯದ ನಂತರ ಮೋಡ ಚದುರಿದ್ದರಿಂದ ನಂತರ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts