More

    ಅಭಿವೃದ್ಧಿಗೊಳ್ಳುತ್ತಿರುವ ಹುಬ್ಬಳ್ಳಿಯ ಮೊದಲ ಕೊಳೆಗೇರಿ!

    ಹುಬ್ಬಳ್ಳಿ: ಕೊಳಚೆ ಪ್ರದೇಶವೆಂಬ ಕಪ್ಪು ಚುಕ್ಕೆ ಕಳೆದುಕೊಳ್ಳುತ್ತಿರುವ ಹುಬ್ಬಳ್ಳಿ ಗೋಕುಲ ರಸ್ತೆಯ ಶ್ರೀ ರಾಮಲಿಂಗೇಶ್ವರ ನಗರ ಬಡಾವಣೆ ‘ಸ್ಮಾರ್ಟ್’ ಆಗುತ್ತಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಲಿಮಿಟೆಡ್ ಎಂಬ ಹೆಸರಿನ ಸರ್ಕಾರಿ ಕಂಪನಿ ಈ ಪ್ರದೇಶದಲ್ಲಿ ಸ್ಮಾರ್ಟ್ ಸೌಲಭ್ಯ ಒದಗಿಸುವುದಕ್ಕಾಗಿ 31.14 ಕೋಟಿ ರೂ. ವೆಚ್ಚ ಮಾಡುತ್ತಿದೆ.

    ಈ ಮೂಲಕ ಶ್ರೀ ರಾಮಲಿಂಗೇಶ್ವರ ನಗರ ಕೊಳಚೆ ಪ್ರದೇಶ ಹು-ಧಾ ಸ್ಮಾರ್ಟ್​ಸಿಟಿ ಕಂಪನಿಯಿಂದ ಅಭಿವೃದ್ಧಿಗೊಂಡ ಮೊದಲ ಕೊಳಚೆ ಪ್ರದೇಶವಾಗಲಿದೆ.

    ಲಾಕ್​ಡೌನ್​ನ 3-4 ತಿಂಗಳ ಅವಧಿ ಹೊರತುಪಡಿಸಿ ಕಳೆದ ಫೆಬ್ರವರಿಯಿಂದಲೇ ಈ ಬಡಾವಣೆಯಲ್ಲಿ ಅತ್ಯಾಧುನಿಕ ಸೌಲಭ್ಯ ನಿರ್ವಿುಸುವ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ.

    2016ರಲ್ಲಿಯೇ ಸ್ಮಾರ್ಟ್ ಸಿಟಿ ಯೋಜನೆಗೆ ಹುಬ್ಬಳ್ಳಿ- ಧಾರವಾಡ ಆಯ್ಕೆಯಾಗಿದೆ. ಇದಾದ ಸುಮಾರು ವರ್ಷಗಳ ನಂತರ ಕೊಳಚೆ ಪ್ರದೇಶ ಅಭಿವೃದ್ಧಿಗೆ ಮೊದಲ ಪ್ರದೇಶವಾಗಿ ರಾಮಲಿಂಗೇಶ್ವರ ನಗರ ಆಯ್ಕೆಯಾಗಿದೆ. ‘ನಗರ ಬಡಜನರ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸುವ ಯೋಜನೆ’ ಎಂಬ ಹೆಸರಿನ ಅಡಿಯಲ್ಲಿ ಈ ಸ್ಲಂ ಆಯ್ದುಕೊಂಡಿದೆ ಹು-ಧಾ ಸ್ಮಾರ್ಟ್​ಸಿಟಿ ಕಂಪನಿ. 2019ರ ಫೆಬ್ರವರಿಯಲ್ಲಿ ಬೆಂಗಳೂರು ಮೂಲದ ಮೆ. ಬಾಲಾಜಿ ಕೃಪಾ ಸಂಸ್ಥೆಗೆ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಗುತ್ತಿಗೆ ನೀಡಲಾಗಿದೆ.

    ಗುತ್ತಿಗೆ ಪಡೆದಿರುವ ಸಂಸ್ಥೆಯೇ ಇಲ್ಲಿನ ಸೌಲಭ್ಯಗಳ ನಿರ್ವಹಣೆಯನ್ನು ಮುಂದಿನ 5 ವರ್ಷಗಳವರೆಗೆ ಮಾಡಲಿದೆ. ಒಂದು ವರ್ಷದಲ್ಲಿ ಸೌಲಭ್ಯಗಳು ಹಾಳಾದಲ್ಲಿ ಅವುಗಳನ್ನು ಮರಳಿ ನಿರ್ವಿುಸುವ ಹೊಣೆಗಾರಿಯೂ ಗುತ್ತಿಗೆ ಪಡೆದ ಸಂಸ್ಥೆಯದ್ದು ಎಂಬ ಷರತ್ತು ವಿಧಿಸಲಾಗಿದೆ.

    ಹತ್ತು ಹಲವು ಕಾಮಗಾರಿ

    3.46 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್​ಲೈನ್ ಅಳವಡಿಕೆ, 12.16 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ವಿುಸಲಾಗುತ್ತಿದೆ. ಶ್ರೀ ರಾಮಲಿಂಗೇಶ್ವರ ನಗರದ ವಿವಿಧ ಕಾಲನಿಗಳಿಂದ ನಾಲಾಕ್ಕೆ ಸಂಪರ್ಕ ಕಲ್ಪಿಸುವವರೆಗೆ ಒಳಚರಂಡಿ ಪೈಪ್​ಲೈನ್ ಜೋಡಿಸಲಾಗುತ್ತಿದೆ. 8.15 ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಪೇವರ್ಸ್ ನಿರ್ವಿುಸಲಾಗಿದೆ. 1.96 ಕೋಟಿ ರೂ. ವೆಚ್ಚದಲ್ಲಿ ಈ ಮೊದಲಿದ್ದ ಸೌಲಭ್ಯಗಳಾದ ನೀರಿನ ಪೈಪ್​ಲೈನ್, ವಿದ್ಯುತ್ ಕಂಬ ಮುಂತಾದವುಗಳನ್ನು ಅನಿವಾರ್ಯ ಸಂದರ್ಭದಲ್ಲಿ ಸ್ಥಳಾಂತರಗೊಳಿಸುವ ಕೆಲಸ ಮಾಡಲಾಗಿದೆ. 2.92 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸೌಕರ್ಯ, 42 ಲಕ್ಷ ರೂ. ವೆಚ್ಚದಲ್ಲಿ ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ.

    ಸ್ಮಾರ್ಟ್​ಸಿಟಿ ಯೋಜನೆಯಡಿ ಒಟ್ಟು 2 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶ್ರೀ ರಾಮಲಿಂಗೇಶ್ವರ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ. ಮತ್ತೊಂದು ಕೊಳಚೆ ಪ್ರದೇಶ ಕುಲಕರ್ಣಿ ಹಕ್ಕಲದಲ್ಲಿಯೂ 38 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.
    | ಶಕೀಲ್ ಅಹ್ಮದ್, ವ್ಯವಸ್ಥಾಪಕ ನಿರ್ದೇಶಕರು, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

    ಸ್ಮಾರ್ಟ್​ಸಿಟಿ ಯೋಜನೆಯಡಿ ಉತ್ತಮ ಸೌಲಭ್ಯ ಒದಗಿಸಲಾಗಿದೆ. ಆದರೆ, ಸ್ವಚ್ಛತೆಯ ಸಮಸ್ಯೆ ಬಹಳ ಇದೆ. ಗಟಾರು, ರಸ್ತೆ ಅಕ್ಕಪಕ್ಕದಲ್ಲಿ ಕಸ ಚೆಲ್ಲುತ್ತಾರೆ. ಸೌಲಭ್ಯ ಒದಗಿಸುವ ಜತೆಗೆ ಸ್ವಚ್ಛತೆ ಕಾಯ್ದುಕೊಳ್ಳುವ ಕೆಲಸವೂ ಆಗಬೇಕು. ನಾಗರಿಕರು ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
    | ಗಜಾನನ ಕಬಾಡೆ, ಶ್ರೀ ರಾಮಲಿಂಗೇಶ್ವರ ನಗರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts