More

    2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ: ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಶಾಂತಿಯುತ ಮತದಾನ; ಫಲಿತಾಂಶದತ್ತ ಎಲ್ಲರ ಚಿತ್ತ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನೆರವೇರಿತು. ಕೆಲವೆಡೆ ಮತಯಂತ್ರ ದೋಷ, ವಿ.ವಿ.ಪ್ಯಾಟ್ ಸಮಸ್ಯೆಗಳು ಎದುರಾದವಾದರೂ ಅಧಿಕಾರಿಗಳು ಕೂಡಲೇ ಪರ್ಯಾಯ ಕ್ರಮ ಕೈಗೊಂಡರು. 5,30,85,566 ಸಾಮಾನ್ಯ, 47,488 ಸೇವಾ ಮತದಾರರು ಸೇರಿ ಒಟ್ಟು 5,31,33,054 ಮಂದಿ ಮತದಾನದ ಹಕ್ಕು ಹೊಂದಿದ್ದು, ಶೇ.73 ಮತದಾನವಾಗಿದೆ. 2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿವೆ. ಬೆಳಗ್ಗೆ ಮತದಾನ ನೀರಸವಾಗಿತ್ತು. ಹೊತ್ತು ಏರುತ್ತಿದ್ದಂತೆ ಮತಗಟ್ಟೆ ಬಳಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.

    ಮೊದಲ ಮತದಾನದ ಸಂಭ್ರಮ: ಮೊದಲ ಮತದಾನ ಮಾಡಿದ ಯುವಕ/ಯುವತಿಯರ ಸೆಲ್ಪಿ ಸಂಭ್ರಮ ಎಲ್ಲೆಡೆ ಕಂಡುಬಂತು. ವೃದ್ಧರು, ಕಾಯಿಲೆಯಲ್ಲಿ ನರಳುತ್ತಿರುವವರು, ಆಸ್ಪತ್ರೆಯಲ್ಲಿ ದಾಖಲಾದವರು ಬಂದು ಮತದಾನ ಮಾಡಿ ಅಚ್ಚರಿ ಮೂಡಿಸಿದರು. ಐಟಿ ಉದ್ಯೋಗಿಗಳಿಗೆ ಮಾದರಿ: ಇನ್ಪೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಜಯನಗರ ಬಿಇಎಸ್ ಕಾಲೇಜಿನ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತದಾನದ ಬಳಿಕ ಮಾಧ್ಯಮ ಕ್ಯಾಮೆರಾಗಳ ಮುಂದೆ ಶಾಯಿ ಹಚ್ಚಿದ ಬೆರಳು ತೋರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಮತದಾನ ಮಾಡಬೇಕು ಎಂದು ಕರೆ ನೀಡಿ, ಮತದಾನದಿಂದ ದೂರ ಉಳಿಯುವ ಐಟಿ ಉದ್ಯೋಗಿಗಳಿಗೆ ದಾರಿದೀಪವಾದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದ ಚುನಾವಣೆಯ ರಾಯಭಾರಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಎಲ್ಲರೂ ಮತದಾನ ಮಾಡುವಂತೆ ವಿನಂತಿ ಮಾಡಿದರು.

    ಜಾಲಿ ಮೂಡ್​ಗೆ ಜಾರಿದ ಅಭ್ಯರ್ಥಿಗಳು…: ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರು, ಪಕ್ಷಗಳ ಪ್ರಮುಖ ಕಾರ್ಯಕರ್ತರು ನಿರುಮ್ಮಳರಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬೇಸಿಗೆಯ ಬಿಸಿಲಿನಿಂದ ತತ್ತರಿಸಿದ್ದ ಅಭ್ಯರ್ಥಿಗಳು ಮತ್ತು ಸ್ಟಾರ್ ಪ್ರಚಾಕರು ಜಾಲಿ ಮೂಡ್​ಗೆ ಜಾರಿದ್ದಾರೆ. ಸಂಜೆ ಮತದಾನ ಮುಗಿದ ಕೂಡಲೇ ಅನೇಕ ನೇತಾರರು ಮನೆ ಸೇರಿದ್ದಾರೆ. ಕೆಲವರು ತಮ್ಮ ಆಪ್ತರೊಂದಿಗೆ ರೆಸಾರ್ಟ್ ಮತ್ತಿತರ ಕಡೆ ವಿಶ್ರಾಂತಿಗೆ ತೆರಳಿದ್ದಾರೆ ಎನ್ನಲಾಗಿದೆ.

    ಭರ್ಜರಿ ಬೆಟ್ಟಿಂಗ್: ಚುನಾವಣೆ ಮುಗಿದ ಬೆನ್ನಲ್ಲಿಯೇ ಬೆಟ್ಟಿಂಗ್ ಶುರುವಾಗಿದೆ. ಹೈವೋಲ್ಟೇಜ್ ಕ್ಷೇತ್ರಗಳಾದ ವರುಣ, ಕನಕಪುರ, ಅಥಣಿ, ಹುಬ್ಬಳ್ಳಿ, ಹಾಸನದಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬಹುದು? ಎಷ್ಟು ಅಂತರದಿಂದ ಗೆಲ್ಲುತ್ತಾರೆ? ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟೆಷ್ಟು ಸೀಟು ಗೆಲ್ಲಬಹುದು ಎಂಬ ಬಗ್ಗೆ ಬಾಜಿ ಕಟ್ಟಲಾಗುತ್ತಿದೆ. ಯಾರು ಸಿಎಂ ಆಗಬಹುದು? ಸಮ್ಮಿಶ್ರ ಸರ್ಕಾರವಾ? ಒಂದೇ ಪಕ್ಷದ ಅಧಿಕಾರವಾ? ಎಂಬ ವಿಚಾರದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ.

    2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ: ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಶಾಂತಿಯುತ ಮತದಾನ; ಫಲಿತಾಂಶದತ್ತ ಎಲ್ಲರ ಚಿತ್ತ

    ಮೋದಿ ಪ್ರೇರಣೆಯ ಟ್ವೀಟ್

    ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸಿ ಎಂದು ಕರೆ ನೀಡಿದ್ದಾರೆ. ಕರ್ನಾಟಕದ ಜನರನ್ನು ಅದರಲ್ಲೂ ಯುವ ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಹಾಕುವಂತೆ ಹಾಗೂ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸುವಂತೆ ಟ್ವೀಟ್ ಮಾಡಿ ಪ್ರೇರಣೆಯಾದರು.

    ಚುನಾವಣೆಗೆ 440 ಕೋಟಿ ರೂ. ವೆಚ್ಚ?

    ಬೆಂಗಳೂರು: ರಾಜ್ಯದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಅಂದಾಜು 440 ಕೋಟಿ ರೂ. ಖರ್ಚು ಮಾಡಲಿದೆ ಎಂದು ಅಂದಾಜಿಸಲಾಗಿದೆ.

    2018ರ ಚುನಾವಣೆಯಲ್ಲಿ 394 ಕೋಟಿ ರೂ. ವೆಚ್ಚ ಮಾಡಿತ್ತು. ಈ ಬಾರಿ ಅದು ಹೆಚ್ಚಳವಾಗಿದೆ. ಹಣದುಬ್ಬರ, ಗೌರವಧನ ಏರಿಕೆ, ತನಿಖಾ ತಂಡಗಳ ಹೆಚ್ಚಳ, ಮತದಾನ ಜಾಗೃತಿ ಕಾರ್ಯಕ್ರಮ, ಸುಮಾರು ಅರ್ಧದಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಾರಣ ಈ ಬಾರಿ ವೆಚ್ಚ ಹೆಚ್ಚಾಗಿದೆ.

    2013ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ 160 ಕೋಟಿ ರೂ. ಖರ್ಚಾಗಿತ್ತು. ಒಂದು ಕ್ಷೇತ್ರಕ್ಕೆ ಸರಾಸರಿ 75 ಲಕ್ಷ ರೂ. ವೆಚ್ಚವಾಗಿತ್ತು. 2018ರಲ್ಲಿ ಚುನಾವಣಾ ಆಯೋಗ ಮಾಡಿದ ವೆಚ್ಚ 394 ಕೋಟಿ ರೂ. ಗೆ ಏರಿತ್ತು. ಒಂದು ಕ್ಷೇತ್ರಕ್ಕೆ ಸರಾಸರಿ ತೆಗೆದುಕೊಂಡರೆ 1.75 ಕೋಟಿ ರೂ. ಆಗುತ್ತದೆ. ಆದರೆ, ಫೆಬ್ರುವರಿಯಲ್ಲಿ ಚುನಾವಣಾ ಆಯೋಗ ಮಾಡಿದ ಅಂದಾಜು ಪ್ರಕಾರ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 440 ಕೋಟಿ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಪ್ರತೀ ಕ್ಷೇತ್ರಕ್ಕೆ ಸರಾಸರಿ1.96 ಕೋಟಿ ರೂ.ನಂತೆ ಆಯೋಗವು ಖರ್ಚು ಮಾಡುತ್ತದೆ. ರಾಜ್ಯದ 224 ಕ್ಷೇತ್ರಗಳಲ್ಲಿರುವ 58 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಿಗೆ ವಿವಿಧ ಸವಲತ್ತು ಹಾಗೂ ಭದ್ರತಾ ವ್ಯವಸ್ಥೆ ಮತ್ತಿತರ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 40 ಲಕ್ಷ ರೂ.ವರೆಗೂ ಖರ್ಚು ಮಾಡುವ ಮಿತಿ ಇದೆ. ಲೋಕಸಭಾ ಕ್ಷೇತ್ರಕ್ಕೆ ಈ ಮಿತಿ 95 ಲಕ್ಷ ರೂ. ಇದೆ.

    2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ: ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಶಾಂತಿಯುತ ಮತದಾನ; ಫಲಿತಾಂಶದತ್ತ ಎಲ್ಲರ ಚಿತ್ತಸೋಲೊಪ್ಪಿಕೊಂಡ ಬಿಜೆಪಿ ಅಭ್ಯರ್ಥಿ

    ಬಂಗಾರಪೇಟೆ: ಚುನಾವಣೆ ನಿಮಿತ್ತ ಆರ್ಥಿಕವಾಗಿ ನಂಬಿದ್ದ ಪ್ರಮುಖ ಮುಖಂಡರು ಕೈ ಕೊಟ್ಟ ಪರಿಣಾಮ ಚುನಾವಣೆ ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ವರಿಷ್ಠರಲ್ಲಿ ಕ್ಷಮೆಯಾಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಟ್ಟಣ ನಿವಾಸದಲ್ಲಿ ವಿಡಿಯೋ ಮಾಡಿದ್ದು, ಚುನಾವಣಾ ಪೂರ್ವದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಕೆಲ ಪ್ರಮುಖರು ಸಮಯಕ್ಕೆ ಸರಿಯಾಗಿ ಆರ್ಥಿಕ ವ್ಯವಸ್ಥೆ ಮಾಡುವುದಾಗಿ ಅಭಯ ನೀಡಿದ್ದರು. ಆದರೆ ಚುನಾವಣೆ ಮುನ್ನಾ ದಿನ ಅವರೆಲ್ಲರೂ ಕೈಕೊಟ್ಟ ಪರಿಣಾಮ ಅವರನ್ನು ನಂಬಿ ನಾನು ಎಡವಟ್ಟು ಮಾಡಿಕೊಂಡೆ. ಇದರಿಂದ ನನ್ನ ವಿರುದ್ಧ ಮುನಿಸಿಕೊಂಡು ಕೆಲ ಮುಖಂಡರು ಬೇರೆ ಪಕ್ಷಗಳ ಕಡೆ ಮುಖ ಮಾಡಿದ್ದಾರೆ. ಇದಕ್ಕೆ ನಾನೇ ಕಾರಣನಾಗಿದ್ದರೂ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಎಲ್ಲೂ ಡೀಲ್ ಆಗಿಲ್ಲ, ಸೇಲ್ ಆಗಿಲ್ಲ ಎಂದಿದ್ದಾರೆ.

    ವಿರೋಧ ಪಕ್ಷದವರು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ನಾನು ನಂಬಿರುವ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಪಕ್ಷಕ್ಕಾಗಲಿ, ಬೆಂಬಲಿಗರಿಗಾಗಲಿ ಮೋಸ ಮಾಡಿಲ್ಲ. ಆರ್ಥಿಕ ಸಹಾಯಕ್ಕಾಗಿ ನಂಬಿದ್ದ 5 ಜನರು ಒಮ್ಮೆಲೆ ಕೈ ಕೊಟ್ಟಿದ್ದಾರೆ. ಇದು ನನ್ನ ಸ್ವಯಂಕೃತ ಅಪರಾಧವಾಗಿದೆ. ನನ್ನ ಈ ಎಡವಟ್ಟಿನಿಂದ ಬಿಜೆಪಿ ನಾಯಕರಲ್ಲಿ, ವರಿಷ್ಠರಲ್ಲಿ ಕ್ಷಮೆಯಾಚಿಸುವುದಾಗಿ ತಿಳಿಸಿದರು.

    ನೌಕಾನೆಲೆಯಲ್ಲಿ ಶೇ.3.3 ವೋಟಿಂಗ್!

    ಕಾರವಾರ: ಸಂಪೂರ್ಣ ಅಕ್ಷರಸ್ಥರೇ ಇರುವ ಅರಗಾದ ನೌಕಾನೆಲೆಯ ಮತಗಟ್ಟೆಯಲ್ಲಿ ಕೇವಲ 9 ಜನ ಮತ ಚಲಾಯಿಸಿದ್ದಾರೆ. ನೌಕಾಸೇನೆಯ ನೌಕರರಿಗಾಗಿಯೇ ಅರಗಾ ಕೇಂದ್ರೀಯ ವಿದ್ಯಾಲಯದಲ್ಲಿ ತೆರೆದಿರುವ ಮತಗಟ್ಟೆ ಇದಾಗಿದ್ದು, 265 ಮತಗಳಿದ್ದವು. ಅದರಲ್ಲಿ ಮೂವರು ಮಹಿಳೆಯರು ಹಾಗೂ 6 ಪುರುಷರು ಮಾತ್ರ ಮತ ಚಲಾಯಿಸಿದ್ದಾರೆ. ಅಂದರೆ ಶೇ.3.3 ಮಾತ್ರ ಮತದಾನವಾಗಿದೆ. ಹಿಂದಿನ ಚುನಾವಣೆಗಳಲ್ಲೂ ಇದೇ ಸ್ಥಿತಿ ಇತ್ತು.

    ಶೇ. 73 ಮತದಾನ

    ರಾಜ್ಯಾದ್ಯಂತ ಬುಧವಾರ ಶಾಂತಿಯುತ ಮತದಾನ ನಡೆದಿದೆ. ಸರಾಸರಿ ಶೇ.72.67 ಮತದಾನ ದಾಖಲಾಗಿದೆ. 224 ಕ್ಷೇತ್ರಗಳ 2,615 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ವಿಜಯಪುರ ಜಿಲ್ಲೆಯ ಮಸಬಿನಾಳದಲ್ಲಿ ಹೆಚ್ಚುವರಿ ಇವಿಎಂ ಧ್ವಂಸ ಸೇರಿದಂತೆ ಕೆಲವು ಸಣ್ಣಪುಟ್ಟ ಘಟನೆಗಳು, ಇವಿಎಂ ದೋಷ ಅಲ್ಲಲ್ಲಿ ಕಂಡುಬಂದಿವೆ. ಬೆಳಗ್ಗೆಯೇ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಸರದಿಗಾಗಿ ನಿಂತಿದ್ದರು. ಮೊದಲ ಬಾರಿಗೆ ಮತದಾನ ಮಾಡಿದವರು ಸಂಭ್ರಮಿಸಿದರೆ, ಸರತಿಯಲ್ಲಿ ನಿಂತು ಹಕ್ಕು ಚಲಾಯಿಸಿದ ಗಣ್ಯರು, ಸೆಲೆಬ್ರಿಟಿಗಳು ಮತದಾನ ಮಾಡುವಂತೆ ಪ್ರೇರೇಪಿಸಿದರು. ಮದುವೆ ಬಳಿಕ ನೇರವಾಗಿ ಮತಗಟ್ಟೆಗೆ ಬಂದ ಜೋಡಿ, ವಿದೇಶದಿಂದ ಹಕ್ಕು ಚಲಾಯಿಸಲು ಹಾರಿಬಂದವರು, ಹಕ್ಕು ಬಳಸಿಕೊಂಡ ತೃತೀಯ ಲಿಂಗಿಗಳು ಹೀಗೆ ಹಲವು ವಿಶೇಷಗಳು ಕಂಡು ಬಂದವು. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

    ಮತದಾನದ ಬಳಿಕ ಇವಿಎಂ ಯಂತ್ರಗಳನ್ನೇ ಮರೆತು ಬಿಟ್ಟುಹೋದ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts