More

    ಬಾರದ ಮುಂಗಾರು ಮಳೆ ಆತಂಕದಲ್ಲಿ ರೈತ

    ಹೊರ್ತಿ: ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭೂಮಿ ಹದ ಮಾಡಿಕೊಂಡು ರೈತರು ಕಾಯುತ್ತಿದ್ದು, ಸಕಾಲಕ್ಕೆ ಮಳೆ ಬರದೇ ಇರುವುದರಿಂದ ರೈತರು ಮುಂಗಾರು ಕೈಕೊಡುವ ಆತಂಕದಲ್ಲಿದ್ದಾರೆ.

    ಮುಂಗಾರು ಮಳೆಗಳಾದ ರೋಹಿಣಿ, ಮೃಗಶಿರ, ಆರಿದ್ರ ಮಳೆಗಳು ಬಾರದೆ ಇರುವುದರಿಂದ ರೈತರು ಆಕಾಶದತ್ತ ಮುಖ ಮಾಡುತ್ತಿದ್ದಾರೆ. ಕಳೆದ ನಾಲ್ಕು ದಿವಸಗಳಿಂದ ಅಲ್ಪಸ್ವಲ್ಪ ಮಳೆ ಬರುತ್ತಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಬರದೇ ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದೆ. ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಮಳೆರಾಯನ ದಾರಿ ಕಾಯುತ್ತಿದ್ದಾರೆ. ಮಳೆ ಇಲ್ಲದ ಕಾರಣ ಹಳ್ಳಗಳು, ಬಾವಿಗಳು, ಕೊಳವೆಬಾವಿಗಳು ಬತ್ತುತ್ತಿವೆ.

    ಸಾಲಮಾಡಿ ಬಿತ್ತನೆ ಬೀಜ ತಂದು ರೈತರು ಮಳೆಗಾಗಿ ಕಾಯುತ್ತಾ ಕುಳಿತಿದ್ದಾರೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗುತ್ತಿದೆ. ಪ್ರತಿದಿನ ಆಕಾಶದತ್ತ ಮುಖ ಮಾಡುವ ರೈತರು ಮಳೆರಾಯನ ಆಗಮನಕ್ಕಾಗಿ ಕಾಯ್ದು ಸುಸ್ತಾಗುತ್ತಿದ್ದಾರೆ. ಮೋಡ ಕವಿದ ವಾತಾವರಣ ಬಂದರೂ ಉತ್ತಮ ಮಳೆ ಸುರಿಯುತ್ತಿಲ್ಲ. ಹೀಗಾಗಿ ರೈತರು ಮುಂಗಾರು ಬೆಳೆ ಬರುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

    ದೇವರಗೆ ಪೂಜೆ: ಬರಗಾಲ ಬರುವ ಸ್ಥಿತಿಯಲ್ಲಿದ್ದ ರೈತರು ಮಳೆ ಆಗಮನಕ್ಕಾಗಿ ಗ್ರಾಮದ ದೇವರುಗಳಿಗೆ ವಿಶೇಷ ಪೂಜೆ, ಗುರ್ಜಿ ಪೂಜೆ ವಾರ ಮಾಡುವುದು ಸೇರಿ ಕಂಡ ಕಂಡ ದೇವರುಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ಮುಂದುವರೆದರೆ ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗುವುದು ನಿಶ್ಚಿತವಾಗಿದೆ. ಮಳೆಯಿಲ್ಲದೇ ಇರುವುದರಿಂದ ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಗಗನಕ್ಕೇರಿವೆ. ಇದು ಸಹ ಜನ ಸಾಮಾನ್ಯರ ಬದುಕನ್ನು ಮತ್ತಷ್ಟು ದುರಸ್ತರಗೊಳಿಸಿದೆ.

    ಕಳೆದ ಮೂರು ದಿನಗಳಿಂದ ತುಂತುರು ಮಳೆ ಬರುತ್ತಿದೆ. ಬಿತ್ತನೆ ಕಾರ್ಯ ಮಾಡಬೇಕೆಂದರೆ ಹೊಲದಲ್ಲಿಯ ಮಣ್ಣು ಇನ್ನೂ ಪೂರ್ಣ ತೋಯ್ದಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಬೀಜ ಖರೀದಿ ಮಾಡಿ ಮನೆಯಲ್ಲಿಟ್ಟಿದ್ದೇವೆ. ಅಬ್ಬರದ ಮಳೆಗಾಗಿ ಕಾಯುತ್ತಿದ್ದೇವೆ. ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಿ ರೈತರ ಹಿತ ಕಾಪಾಡಬೇಕು.
    ಶರಣಬಸು ಡೂಣಗಿ, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts