More

    ಕರೊನಾದಿಂದ ಕಳೆಗುಂದಿದ ಪ್ರವಾಸೋದ್ಯಮ

    ರಾಮನಗರ: ಇಂದು ವಿಶ್ವ ಪ್ರವಾಸ ದಿನ. ಆದರೆ, ಪ್ರತಿವರ್ಷ ಸೆ.27ರಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದ ಈ ದಿನ ಈ ಬಾರಿ ಕರೊನಾದಿಂದಾಗಿ ಕಳೆಗುಂದಿದೆ.

    ಕೆಲ ವರ್ಷಗಳಿಂದ ಪ್ರವಾಸೋದ್ಯಮ ಕ್ಷೇತ್ರ ಸಾಕಷ್ಟು ಚೇತರಿಕೆ ಕಂಡಿತ್ತು, ಇದನ್ನೇ ನೆಚ್ಚಿಕೊಂಡ ರೆಸಾರ್ಟ್ ಉದ್ಯಮವೂ ಜಿಲ್ಲೆಯಲ್ಲಿ ತಲೆ ಎತ್ತಿ ಉತ್ತಮ ಬೆಳವಣಿಗೆ ಕಾಣುತ್ತಿದ್ದ ಹೊತ್ತಿನಲ್ಲೇ ಕರೊನಾ ವ್ಯಾಪಿಸಿ ಈ ಕ್ಷೇತ್ರ ನೆಲ ಕಚ್ಚಿದೆ. ಇದನ್ನೇ ನಂಬಿದವರ ಬದುಕು ಮೂರಾಬಟ್ಟೆಯಾಗಿದೆ.

    ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ಜಿಲ್ಲೆಯ ಪ್ರವಾಸಿ ತಾಣಗಳಿಗೆ ರಜಾ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿನ ಸೌಂದರ್ಯ ಸವಿಯುತ್ತಿದ್ದರು. ಆದರೆ, ಕರೊನಾ ಅನ್​ಲಾಕ್ ನಂತರವೂ ನಿರೀಕ್ಷಿತ ಪ್ರಮಾಣದಲ್ಲಿ ಜನ ಬರುತ್ತಿಲ್ಲ. ಇದಕ್ಕೆ ಕರೊನಾ ಒಂದು ಕಾರಣವಾದರೆ, ಮತ್ತೊಂದು, ಐಟಿಬಿಟಿ ಸಂಸ್ಥೆಗಳು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ ಜಾರಿ ಮಾಡಿರುವುದರಿಂದ ಐಟಿಬಿಟಿ ನೌಕರರು ಈಗ ಪ್ರವಾಸಕ್ಕೆ ಹೆಚ್ಚು ಗಮನ ಹರಿಸುತ್ತಿಲ್ಲದಿರುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣುತ್ತಿಲ್ಲ.

    ರೆಸಾರ್ಟ್​ಗಳಿಗೂ ನಷ್ಟ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾಗಿ ರೆಸಾರ್ಟ್​ಗಳು ಮತ್ತು ಹೋಂ ಸ್ಟೇಗಳು ತಲೆ ಎತ್ತಿವೆ. ಈಗಲ್​ಟನ್, ವಂಡರ್​ಲಾನಂತಹ ದೊಡ್ಡ ರೆಸಾರ್ಟ್​ಗಳ ಜತೆಗೆ ನೂರಕ್ಕೂ ಹೆಚ್ಚು ಮಧ್ಯಮ ಮತ್ತು ಸಣ್ಣ ರೆಸಾರ್ಟ್​ಗಳು ಮತ್ತು ಹೋಂ ಸ್ಟೇಗಳೂ ಇವೆ. ಆದರೆ, ಲಾಕ್​ಡೌನ್ ಮುಂಚಿನ ದಿನಗಳಿಗೆ ಹೋಲಿಸಿದರೆ ಶೇ.10-20 ವ್ಯವಹಾರವೂ ನಡೆಯುತ್ತಿಲ್ಲ. ರೆಸಾರ್ಟ್​ಗಳು ಮತ್ತೆ ಆರಂಭಗೊಂಡಿದ್ದರೂ ನಿರೀಕ್ಷಿತ ಗ್ರಾಹಕರಿಲ್ಲ. ಇದರಿಂದಾಗಿ ಟೀಮ್ ಔಟಿಂಗ್ ಚಟುವಟಿಕೆಗಳು ಇಲ್ಲವಾಗಿವೆ. ವಾರಾಂತ್ಯಗಳಲ್ಲಿ ಮನೋರಂಜನೆಗೆ ಬರುವವರ ಸಂಖ್ಯೆಯೂ ವಿರಳವಾಗಿದೆ.

    ಜಿಲ್ಲೆಯ ಪ್ರಮುಖ ಆಕರ್ಷಣೆ: ರಾಮನಗರ ಜಿಲ್ಲೆಯಲ್ಲಿ ದೇವಾಲಯಗಳು ಸೇರಿ ಪ್ರವಾಸಕ್ಕೆ ಯೋಗ್ಯವಾದ 60ಕ್ಕೂ ಹೆಚ್ಚು ಸ್ಥಳಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ. ಇದರಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗಿರುವುದು ಕನಕಪುರದ ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್, ರಾಮನಗರದ ರಾಮದೇವರಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಮಾಗಡಿಯ ರಂಗನಾಥಸ್ವಾಮಿ ದೇವಾಲಯ, ಸಾವನದುರ್ಗ ಮತ್ತು ಮಂಚನಬೆಲೆ. ಬಿಡದಿಯ ವಂಡರ್​ಲಾ, ಇನ್ನೋವೇಟಿವ್ ಫಿಲಂ ಸಿಟಿ. ಚನ್ನಪಟ್ಟಣದಲ್ಲಿ ಕಣ್ವ ಜಲಾಶಯ, ಅಪ್ರಮೇಯಸ್ವಾಮಿ ದೇವಾಲಯ.

    ನಡೆಯುತ್ತಿದೆ ಅಭಿವೃದ್ಧಿ: ಕರೊನಾದಿಂದ ಉಂಟಾಗಿರುವ ಹಿನ್ನಡೆಯ ಹೊರತಾಗಿಯೂ ಜಿಲ್ಲೆಯ ಪ್ರವಾಸ ಕ್ಷೇತ್ರಕ್ಕೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ಘೋಷಣೆ ಮಾಡಿದ್ದ ಕಣ್ವ ಬಳಿಯ ಚಿಲನ್ ವರ್ಲ್ಡ್ ಕಾಮಗಾರಿ ಆರಂಭಗೊಂಡಿದೆ. ಇದರ ಜತೆಗೆ ಪ್ರವಾಸಿ ಪ್ಯಾಕೇಜ್ ಘೊಷಣೆ ಮಾಡಿ, ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ನಿರತವಾಗಿದೆ.

    ಇಂದು 31 ಮಂದಿಗೆ ಟ್ಯಾಕ್ಸಿ ವಿತರಣೆ, ಪ್ರವಾಸಿ ಮಿತ್ರರಿಗೆ ಸನ್ಮಾನ

    ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾನುವಾರ ಸ್ವಚ್ಛತಾ ಆಂದೋಲನ (ಸೆ.27) ಹಮ್ಮಿಕೊಳ್ಳಲಾಗಿದೆ. ರಾಮದೇವರ ಬೆಟ್ಟ (ರಣಹದ್ದು ವನ್ಯಜೀವಿ ಧಾಮ) ದಲ್ಲಿ ಪ್ರವಾಸಿ ಮಿತ್ರರಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಜತೆಗೆ, 2017-18 ಮತ್ತು 2018-19 ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ವಿತರಿಸುವ ಯೋಜನೆಯಲ್ಲಿ ಆಯ್ಕೆಯಾಗಿರುವ 31 ಫಲಾನುಭವಿಗಳಿಗೆ ಟ್ಯಾಕ್ಸಿ ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಜತೆಗೆ ಒಂದು ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರನ್ನು ಸನ್ಮಾನಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

    ಬೆಂಗಳೂರಿನ ಬಹುತೇಕ ಕಾಪೋರೇಟ್ ಸಂಸ್ಥೆಗಳು ವರ್ಕ್ ಫ್ರಂ ಹೋಂ ಜಾರಿಗೆ ತಂದಿರುವುದರಿಂದ ರೆಸಾರ್ಟ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಶೇ.90 ವ್ಯವಹಾರ ಕುಸಿದಿದೆ. ಇದರ ಹೊರತಾಗಿಯೂ ಕೆಲವು ಪ್ರವಾಸಿಗರು ಧೈರ್ಯ ತೋರುವ ಮೂಲಕ ರೆಸಾರ್ಟ್​ಗೆ ಬರುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿದ್ದೇವೆ.

    | ಅರುಣೇಶ್ ಗೌಡ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪ್ರವಾಸೋದ್ಯಮ ಸಂಘ

    ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪ್ರವಾಸಿಗರನ್ನು ಆಕರ್ಷಿಸಲು ಪ್ಯಾಕೇಜ್ ಪದ್ಧತಿ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ಶೀಘ್ರವೇ ಜಾರಿಯಾಗಲಿದೆ.

    | ಬಿ.ವಿ. ವಿನಯ್ ಕುಮಾರ್ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ

    ಗಂಗಾಧರ್ ಬೈರಾಪಟ್ಟಣ ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts