More

    ಭೀಮಾತೀರದಲ್ಲಿ ಗರಿಗೆದರಿದ ನಿರೀಕ್ಷೆ ..!

    ಪರಶುರಾಮ ಭಾಸಗಿ
    ವಿಜಯಪುರ: ಭೀಮಾತೀರ ಖ್ಯಾತಿಯ ಇಂಡಿ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಯ ಪ್ರಮುಖ ಅಜೆಂಡಾ ಆಗಿದ್ದ ಮತ್ತು ಯಶವಂತರಾಯಗೌಡ ಪಾಟೀಲರು ಬಿತ್ತಿದ ‘ಇಂಡಿ ಪ್ರತ್ಯೇಕ ಜಿಲ್ಲೆ’ ಕನಸು ನನಸಾಗುವುದೇ?

    ಫಲಿತಾಂಶ ಪ್ರಕಟಗೊಂಡು ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ ಭೀಮಾತೀರದಲ್ಲಿ ಇಂಥದ್ದೊಂದು ಬಿಸಿಬಿಸಿ ಚರ್ಚೆ ಶುರುವಾಗಿದ್ದು, ನುಡಿದಂತೆ ನಡೆದ ಖ್ಯಾತಿ ಯಶವಂತರಾಯಗೌಡ ಪಾಟೀಲ ಇಂಡಿ ಪ್ರತ್ಯೇಕ ಜಿಲ್ಲೆ ಮಾಡಿಯೇ ತೀರುತ್ತಾರೆ ಎಂಬ ವಾದ ಒಂದೆಡೆಯಾದರೆ, ಅಂದುಕೊಂಡಷ್ಟು ಸುಲಭವಲ್ಲ ಕೊಂಕು ನುಡಿ ಇನ್ನೊಂದೆಡೆ ಕೇಳಿ ಬರತೊಡಗಿದೆ. ಈಗಾಗಲೇ ರಾಜ್ಯದಲ್ಲಿ ಹೊಸ ಜಿಲ್ಲೆ ಹಾಗೂ ತಾಲೂಕುಗಳ ರಚನೆಯಾಗಿದ್ದು, ಅಂಥದ್ದೊಂದು ಪ್ರಸ್ತಾಪ ಸದ್ಯಕ್ಕಂತೂ ಇಲ್ಲ. ಹೊಸ ಸರ್ಕಾರ ಅಂಥ ಸಾಹಸಕ್ಕೆ ಕೈಹಾಕಲಾರದು ಎಂಬ ಚರ್ಚೆ ಕೂಡ ಇದೆ.

    ಯಶವಂತರಾಯಗೌಡರು ಹೇಳಿದ್ದೇನು?

    ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕೆಂಬುದು ಯಶವಂತರಾಯಗೌಡ ಪಾಟೀಲರ ಕನಸು. ಈಗಲ್ಲದಿದ್ದರೂ ಭವಿಷ್ಯದಲ್ಲಿ ಹೊಸ ಜಿಲ್ಲೆಗಳ ರಚನೆ ಸಂದರ್ಭವಾದರೂ ಇಂಡಿಗೆ ಮೊದಲ ಆದ್ಯತೆ ನೀಡಬೇಕು. ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಹಲವು ದೊಡ್ಡ ಜಿಲ್ಲೆಗಳಿದ್ದು, ಆಡಳಿತಾತ್ಮ ದೃಷ್ಟಿಕೋನದಿಂದ ವಿಭಜನೆ ಅನಿವಾರ್ಯವಾಗಿದೆ. ಹಾಗಾಗಿ ಭವಿಷ್ಯದಲ್ಲಿ ಹೊಸ ಜಿಲ್ಲೆಗಳ ರಚನೆ ಸಂದರ್ಭ ಇಂಡಿಯನ್ನು ಸಹ ಪರಿಗಣಿಸಬೇಕು ಎಂದು ಯಶವಂತರಾಯಗೌಡ ಪಾಟೀಲ ಪದೇ ಪದೇ ಪುನರುಚ್ಛರಿಸುತ್ತಲೇ ಬಂದಿದ್ದಾರೆ.

    ಇಂಡಿ ಜಿಲ್ಲೆಯಾಗುವ ಎಲ್ಲ ಅರ್ಹತೆ ಹೊಂದಿದೆ. ಸರ್ಕಾರಿ ಕಟ್ಟಡಗಳು, ಕೈಗಾರಿಕೆಗಳು, ಕೃಷಿ, ನೀರಾವರಿ, ಶಿಕ್ಷಣ ಸಂಸ್ಥೆಗಳು, ಪೊಲೀಸ್ ಇಲಾಖೆ, ಸಾರಿಗೆ ಸೌಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಆಡಳಿತಾತ್ಮಕವಾಗಿ ಇಂಡಿ ಜಿಲ್ಲೆಯನ್ನಾಗಿಸುವುದರಿಂದ ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಕ್ಷೇತ್ರವೊಂದು ಪ್ರಗತಿ ಸಾಧಿಸಿದಂತಾಗಲಿದೆ ಎಂಬುದು ಯಶವಂತರಾಯಗೌಡರ ಅಭಿಪ್ರಾಯವಾಗಿತ್ತು. ಈ ಬಗ್ಗೆ ಸದನದಲ್ಲೂ ಸಾಕಷ್ಟು ಬಾರಿ ಚರ್ಚಿಸಿದ್ದರು.

    ಹೇಗಿತ್ತು ಜಿಲ್ಲೆಯ ರೂಪುರೇಷೆ?

    ವಿಜಯಪುರ ಜಿಲ್ಲೆಯಲ್ಲಿಯೇ 2ನೇ ದೊಡ್ಡ ತಾಲೂಕು ಮತ್ತು 50 ಸಾವಿರ ಜನಸಂಖ್ಯೆ ಹೊಂದಿದ ನಗರ ಇಂಡಿ. ಜಿಲ್ಲಾ ಕೇಂದ್ರವಾಗಲು ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದೆ. ಹೀಗಾಗಿ ವಿಜಯಪುರ ಜಿಲ್ಲೆಯಿಂದ ಇಂಡಿ, ಸಿಂದಗಿ, ಆಲಮೇಲ, ದೇವಹಿಪ್ಪರಗಿ ಹಾಗೂ ಚಡಚಣ ಮತ್ತಿತರ ತಾಲೂಕು ಪ್ರತ್ಯೇಕಿಸಿ ಇಂಡಿ ಜಿಲ್ಲೆಯನ್ನಾಗಿಸುವುದರಿಂದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾಗಲಿದೆ ಎಂದು ಯಶವಂತರಾಯಗೌಡರು ಜಿಲ್ಲಾ ಕೇಂದ್ರದ ರೂಪುರೇಷೆ ಸಿದ್ಧಪಡಿಸಿ ಸರ್ಕಾರದ ಮುಂದಿಟ್ಟಿದ್ದರು.

    ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದ ನಾಯಕ

    ಇಂಡಿ ಜಿಲ್ಲೆಯಾಗಿಸುವ ವಿಷಯವನ್ನು ಈಗಾಗಲೇ ಯಶವಂತರಾಯಗೌಡರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ತುಮಕೂರು ಜಿಲ್ಲೆಯ ತಿಪಟೂರು, ರಾಯಚೂರು ಜಿಲ್ಲೆಯ ಸಿಂಧನೂರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ಅಥಣಿ, ಬೀದರ್ ಜಿಲ್ಲೆಯ ಬಸವ ಕಲ್ಯಾಣ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಗಳನ್ನು ಹೊಸ ಜಿಲ್ಲೆಯನ್ನಾಗಿಸುವ ಕೋರಿಕೆಗಳ ಜೊತೆಗೆ ವಿಜಯಪುರ ಜಿಲ್ಲೆಯ ಇಂಡಿಯೂ ಸೇರ್ಪಡೆಯಾಗಿದೆ. ಸರ್ಕಾರದ ಈ ಎಲ್ಲ ಕೋರಿಕೆಗಳನ್ನು ಸಂಬಂಧಪಟ್ಟ ಪ್ರಾದೇಶಿಕ ಆಯುಕ್ತರಿಗೂ ರವಾನಿಸಲಾಗಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಅಂಥ ಯಾವುದೇ ಪ್ರಸ್ತಾವನೆಗಳನ್ನು ಸ್ವೀಕರಿಸಿರಲಿಲ್ಲ.

    ಆದರೆ, ಯಶವಂತರಾಯಗೌಡ ಪಾಟೀಲರು ಭೌಗೋಳಿಕವಾಗಿ 10541 ಚದರ ಕಿಮೀ ವಿಸ್ತೀರ್ಣ ಹೊಂದಿ, 13 ತಾಲೂಕುಗಳನ್ನು ಒಳಗೊಂಡಿರುವ ವಿಜಯಪುರ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಕೋನದಿಂದ ವಿಭಜಿಸಿ, ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕೆಂದು ಪಟ್ಟು ಹಿಡಿದಿದ್ದರು. ಚುನಾವಣೆಯಲ್ಲೂ ಅದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದರು. ಇದೀಗ ಆ ವಿಷಯ ಮುನ್ನೆಲೆಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts