More

    ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ

    ಶಾಲಾಮುಖ್ಯಸ್ಥರಿಗೆ ವಾರ್ಷಿಕ ಕ್ರಿಯಾಯೋಜನೆ ಪಟ್ಟಿ ರವಾನೆ -ದಾಖಲಾತಿ ಆಂದೋಲನ – ಪಾಲಕರ ಮನವೊಲಿಕೆಗೂ ಕ್ರಮ


    ಚಿಕ್ಕಬಳ್ಳಾಪುರ: ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ತರಗತಿಗಳ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದೆ.
    ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ, ಸಿಆರ್‌ಪಿ, ಬಿಆರ್‌ಸಿ ಸೇರಿ ಇತರ ಅಧಿಕಾರಿಗಳನ್ನೊಳಗೊಂಡಂತೆ ಡಿಡಿಪಿಐ ನೇತೃತ್ವದ ಸಭೆಯಲ್ಲಿ ಸಲಹೆ ಸೂಚನೆ ನೀಡಿದ್ದು, ಇಲಾಖೆ ನಿಯಮಾನುಸಾರ ಕಾರ್ಯಾರಂಭಕ್ಕೆ ಆಯಾ ಶಾಲಾ ಮುಖ್ಯಶಿಕ್ಷಕರಿಗೆ ವಾರ್ಷಿಕ ಕ್ರಿಯಾಯೋಜನೆ ಪಟ್ಟಿ ಕಳುಹಿಸಲಾಗಿದೆ.
    ಈಗಾಗಲೇ ಶಾಲೆಗಳಲ್ಲಿ ಬೇಸಿಗೆ ರಜೆ ಬಿಸಿಯೂಟ ಯೋಜನೆ ಅನುಷ್ಠಾನದಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನ ಮೊದಲ ದಿನದಿಂದಲೇ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಈಗಾಗಲೇ ಶಾಲಾ ವ್ಯಾಪ್ತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಪಾಠ ಪ್ರವಚನಗಳ ಪ್ರಾರಂಭೋತ್ಸವವು ಸಿಂಗರಿಸಿದ ಶಾಲೆಗಳು ಮತ್ತು ಸಿಹಿ ಊಟದ ಸಂಭ್ರಮದೊಂದಿಗೆ ನಡೆಯಲಿದೆ.

    ಜಿಲ್ಲೆಯಲ್ಲಿವೆ 2029 ಶಾಲೆಗಳು
    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1560 ಸರ್ಕಾರಿ ಶಾಲೆಗಳಿವೆ. ಈ ಪೈಕಿ 928 ಕಿರಿಯ ಪ್ರಾಥಮಿಕ ಶಾಲೆಗಳು, 521 ಹಿರಿಯ ಪ್ರಾಥಮಿಕ ಶಾಲೆಗಳು, 111 ಪ್ರೌಢಶಾಲೆಗಳಿವೆ. 93 ಅನುದಾನಿತ ಶಾಲೆಗಳಿದ್ದು, ಇವುಗಳಲ್ಲಿ 1 ಕಿರಿಯ ಪ್ರಾಥಮಿಕ ಶಾಲೆ, 46 ಹಿರಿಯ ಪ್ರಾಥಮಿಕ ಶಾಲೆ ಹಾಗೂ 46 ಪ್ರೌಢಶಾಲೆಗಳಿವೆ.
    ಇನ್ನು 341 ಅನುದಾನರಹಿತ ಶಾಲೆಗಳಿದ್ದು, ಈ ಪೈಕಿ 33 ಕಿರಿಯ ಪ್ರಾಥಮಿಕ ಶಾಲೆ, 144 ಹಿರಿಯ ಪ್ರಾಥಮಿಕ ಶಾಲೆ, 164 ಪ್ರೌಢಶಾಲೆಗಳಿವೆ. ಜತೆಗೆ 26 ವಸತಿ ಶಾಲೆಗಳು, 1 ಮದರಸಾ, 2 ಕೇಂದ್ರೀಯ, ನವೋದಯ ಶಾಲೆ ಸೇರಿ ಒಟ್ಟಾರೆ 2029 ಶಾಲೆಗಳಿವೆ.

    ದಾಖಲಾತಿ ಆಂದೋಲನ
    ಶಾಲೆಗಳಲ್ಲಿ ಜೂ.1ರಿಂದ ಜೂ.30ರವರೆಗೆ ಸಾಮಾನ್ಯ ಮತ್ತು ವಿಶೇಷ ದಾಖಲಾತಿ ಆಂದೋಲನ ಪ್ರಕ್ರಿಯೆ ನಡೆಯಲಿದೆ. ಆಯಾ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಜನಪ್ರತಿನಿಧಿಗಳು ಜಾಥಾ ನಡೆಸುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರ ಮನವೊಲಿಸುವರು.


    ಬಟ್ಟೆ, ಬುಕ್ ಪೂರೈಕೆ
    ಈಗಾಗಲೇ ಜಿಲ್ಲೆಯ ಶಾಲೆಗಳಿಗೆ ಮಕ್ಕಳ ಸಂಖ್ಯೆಗೆ ಶೇ.65 ಪಠ್ಯಪುಸ್ತಕ ಪೂರೈಕೆಯಾಗಿದೆ. ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಸಮವಸ್ತ್ರ ವಿತರಿಸಲಾಗುತ್ತದೆ. 6ರಿಂದ 14 ವಯೋಮಾನದ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿ ವೇತನ, ಬಿಸಿಯೂಟ, ಬಸ್ ಪಾಸ್, ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಮತ್ತು ಸಾಧನ ಸಲಕರಣೆ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣದ ಜತೆಗೆ ಹಲವು ಸವಲತ್ತುಗಳು, ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಬೋಧನೆ ಮತ್ತು ವಸತಿ ಸೌಕರ್ಯದ ನಡುವೆಯೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಇದಕ್ಕೆ ಖಾಸಗಿ ಶಾಲೆಗಳಲ್ಲಿನ ವ್ಯವಸ್ಥೆ ಮತ್ತು ಆಂಗ್ಲ ಭಾಷಾ ಮಾಧ್ಯಮದ ಮೇಲಿನ ಪಾಲಕರ ವ್ಯಾಮೋಹ ಪ್ರಮುಖ ಕಾರಣವಾಗಿದೆ.


    ಖಾಸಗಿ ಶಾಲೆಗೆ ಕಾರ್ಯಾರಂಭ
    ಹೆಚ್ಚಿನ ಅಂಕ ಗಳಿಸಿದವರು ಸೇರಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲಾ-ಕಾಲೇಜುಗಳಿಗೆ ಈಗಾಗಲೇ ಸೇರಿದ್ದು ಜೂ.1ರಿಂದ ಸರ್ಕಾರಿ ಶಾಲೆಗಳಲ್ಲಿ ವಿಳಂಬವಾಗಿ ದಾಖಲಾತಿ ನಡೆಯುತ್ತಿವೆ. ಮತ್ತೊಂದೆಡೆ ಉತ್ತಮ ಫಲಿತಾಂಶ, ಒಳ್ಳೆಯ ಶಾಲಾ ವಾತಾವರಣ, ವಿಶೇಷ ಸವಲತ್ತು ಮತ್ತು ನುರಿತ ಶಿಕ್ಷಕರ ಬೋಧನೆ ಸೇರಿ ನಾನಾ ಸವಲತ್ತುಗಳ ಹೆಸರಿನಲ್ಲಿ ಪಾಲಕರನ್ನು ಸೆಳೆದು, ಖಾಸಗಿ ಶಾಲೆಗಳು ಈಗಾಗಲೇ ಶೇ.90 ದಾಖಲಾತಿ ಸಾಧನೆ ತೋರಿವೆ. ಇದರ ನಡುವೆ ಡೊನೇಷನ್ ವಸೂಲಿಯೂ ನಡೆದಿದೆ.


    ಸರ್ಕಾರಿ ಶಾಲಾ ದಾಖಲಾತಿಗೆ ಸಿದ್ಧತೆ
    ಮೇ 28: ಶಾಲೆ ಪ್ರಾರಂಭದ ಪೂರ್ವ ತಯಾರಿ.
    ಮೇ 29: ಶಾಲೆಗಳಲ್ಲಿ ಸಂಭ್ರಮದ ಪ್ರಾರಂಭೋತ್ಸವ.
    ಜೂ.30ರವರೆಗೆ ದಾಖಲಾತಿ ಆಂದೋಲನ.


    ಪ್ರಸಕ್ತ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಯ ನಿರ್ವಹಣೆಗೆ ಸಂಬಂಧಿಸಿದಂತೆ ಇಲಾಖೆಯ ಸಭೆಯನ್ನು ನಡೆಸಿ ಚರ್ಚಿಸಲಾಗಿದೆ. ಪ್ರತಿವರ್ಷದಂತೆ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಸೇರಿ ಹಲವು ಪ್ರಕ್ರಿಯೆಗಳು ನಡೆಯಲಿವೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
    – ಬೈಲಾಂಜಿನಪ್ಪ, ಉಪ ನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚಿಕ್ಕಬಳ್ಳಾಪುರ

    ಚಿಕ್ಕಬಳ್ಳಾಪುರದ ನಗರದಲ್ಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಚೇರಿ.


    ಜಿಲ್ಲೆಯಲ್ಲಿರುವ ಶಾಲೆಗಳ ವಿವರ
    ಕಿ.ಪ್ರಾ.ಶಾ. ಹಿ.ಪ್ರಾ.ಶಾ. ಪ್ರೌಢಶಾಲೆ ಒಟ್ಟು
    ಸರ್ಕಾರಿ 928 521 111 1560
    ಅನುದಾನಿತ 1 46 46 93
    ಅನುದಾನರಹಿತ 33 144 164 341
    ಮದರಸಾ 1
    ಕೇಂದ್ರೀಯ/ನವೋದಯ 2
    ಒಟ್ಟು 2029

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts